ಮುಂಬಯಿ ನಗರದ ಪ್ರತಿ ಮೂಲೆಗೂ ಮೆಟ್ರೋ ಹಾಗೂ ಎಕ್ಸ್‌ಪ್ರೆಸ್‌ ವೇ ಸಂಪರ್ಕವಿದೆ. ಆದರೆ ದಾಮು ನಗರದ ನಿವಾಸಿಗಳು ಸಣ್ಣ ಪ್ರಯಾಣಕ್ಕೂ ಬಹಳ ಕಷ್ಟಪಡುತ್ತಿದ್ದಾರೆ. ಅಂದರೆ ಇಲ್ಲಿನ ಜನರು ಈಗಲೂ ಮಲವಿಸರ್ಜನೆಗೆ ಬಯಲನ್ನೇ ಅವಲಂಬಿಸಿದ್ದಾರೆ. ಮತ್ತು ಆ ಬಯಲನ್ನು ತಲುಪಲು ಅವರು ಒಂದು ಅಡಿ ಎತ್ತರದ ಗೋಡೆಯ ಮೇಲೆ ನಡೆದುಕೊಂಡು ಸಾಗಬೇಕು. ಮಲದ ವಾಸನೆಯ ಗಾಳಿಯಿಂದ ಕೂಡಿದ ಕಸದ ರಾಶಿಯನ್ನೂ ದಾಟಬೇಕು ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಈ ಮೈದಾನವು ಹುಲ್ಲುಗಾವಲಾಗಿದ್ದು, ಅಲ್ಲೊಂದು ಇಲ್ಲೊಂದು ಎಂಬಂತೆ ಇರುವ ಇಲ್ಲಿನ ಮರಗಳು ಅಲ್ಲಿಗೆ ಶೌಚಕ್ಕೆ ಬರುವ ಜನರಿಗೆ ಒಂದಷ್ಟು ಖಾಸಗಿತನವನ್ನು ನೀಡುತ್ತವೆ.

ಆದರೆ, “ಅಂತಹ ಖಾಸಗಿತನ ಎನ್ನುವುದು ಇಲ್ಲಿ ಇಲ್ಲವೇ ಇಲ್ಲ” ಎನ್ನುತ್ತಾರೆ ಮೀರಾ ಯೇಡೆ. 51 ವರ್ಷದ ಈ ಮಹಿಳೆ ಬಹಳ ಹಿಂದಿನಿಂದಲೂ ಇಲ್ಲಿ ವಾಸವಿದ್ದಾರೆ. “ನಾವು ಮಹಿಳೆಯರು ಹೆಜ್ಜೆ ಸದ್ದು ಕೇಳಿದ ತಕ್ಷಣ ಎದ್ದು ನಿಲ್ಲಬೇಕಾಗುತ್ತದೆ.” ಅನೇಕ ವರ್ಷಗಳಿಂದ ಈ ಮೈದಾನವನ್ನು ಮಹಿಳೆಯರು ಮತ್ತು ಪುರುಷರಿಗೆಂದು ವಿಭಜಿಸಲಾಗಿದ್ದು, ಎಡಭಾಗದಲ್ಲಿ ಮಹಿಳೆಯರು ಹೋದರೆ, ಬಲಭಾಗದಲ್ಲಿ ಪುರುಷರು ಮಲವಿಸರ್ಜನೆಗೆ ಕೂರುತ್ತಾರೆ. ಸಮಸ್ಯೆಯೆಂದರೆ, “ಇವೆರಡೂ ವಿಭಾಗಗಳು ಬಹಳ ಕಡಿಮೆ ಅಂತರದಲ್ಲಿವೆ. ಬಹುಶಃ ಕೆಲವೇ ಮೀಟರುಗಳು. ಅಷ್ಟಕ್ಕೂ ಆ ದೂರವನ್ನು ಯಾರು ಅಳೆಯುತ್ತಾರೆ?” ಜೊತೆಗೆ ಇವೆರಡರ ನಡುವೆ ಯಾವುದೇ ಮರೆ ಅಥವಾ ಗೋಡೆ ಹಾಕಲಾಗಿಲ್ಲ.

ದಾಮು ನಗರದ ಅನೇಕ ನಿವಾಸಿಗಳು ಮೊದಲ ಅಥವಾ ಎರಡನೇ ತಲೆಮಾರಿನ ಗ್ರಾಮೀಣ ವಲಸಿಗರು. ಮುಂಬೈ ಉತ್ತರ ಕ್ಷೇತ್ರದ ಈ ಭಾಗದ ಜನರಿಗೆ ಚುನಾವಣೆಯೆನ್ನುವುದು ಚುನಾವಣಾ ರಾಜಕೀಯವನ್ನು ಮೀರಿದ ವಿಷಯ. ಭಾರತವು ತನ್ನ 18ನೇ ಲೋಕಸಭೆಗೆ 543 ಸಂಸತ್ ಸದಸ್ಯರನ್ನು ಆಯ್ಕೆ ಮಾಡಲು ಹಂತಹಂತವಾಗಿ ಮತ ಚಲಾಯಿಸುತ್ತಿರುವಾಗಲೂ ಅವರನ್ನು ಇದು ಕಾಡುತ್ತಿದೆ. ಮೀರಾ ಅವರ ಮಗ ಪ್ರಕಾಶ್‌ ಯೇಡೆ ಹೇಳುವಂತೆ “ಇಂದು ದೇಶದಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವ ನಿರೂಪಣೆಯೊಂದನ್ನು ಸೃಷ್ಟಿಸಲಾಗಿದೆ.” ಪ್ರಕಾಶ್‌ ನಮ್ಮೊಂದಿಗೆ ಅವರ ಮನೆ ಹೊಸ್ತಿಲಿನ ಬಳಿ ಮಾತನಾಡುತ್ತಿದ್ದರು. ಅವರ ಮನೆಗೆ ಟಿನ್‌ ಶೀಟ್‌ ಹೊದೆಸಲಾಗಿದ್ದು, ಬಹುಶಃ ಅದು ಒಳಗಿನ ತಾಪಮಾನವನ್ನು ಇನ್ನೂ ಕೆಲವು ಡಿಗ್ರಿಗಳಷ್ಟು ಹೆಚ್ಚಿಸುತ್ತದೆ.

"ದೇಶದ ಈ ಭಾಗಗಳಲ್ಲಿನ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡಲು ಯಾರೂ ಬಯಸುವುದಿಲ್ಲ" ಎಂದು 30 ವರ್ಷದ ಪ್ರಕಾಶ್ ಹೇಳುತ್ತಾರೆ. ದಾಮು ನಗರದ 11,000ಕ್ಕೂ ಹೆಚ್ಚು ನಿವಾಸಿಗಳು ಶೌಚಾಲಯ, ನೀರು, ವಿದ್ಯುತ್ ಲಭ್ಯವಿಲ್ಲದ ಕಾರಣ ಉಂಟಾಗುವ ಅಸ್ವಸ್ಥತೆ ಮತ್ತು ಅಪಾಯಗಳ ಕುರಿತು ಅವರು ವಿವರಿಸುತ್ತಿದ್ದಾರೆ. ಜನಗಣತಿಯಲ್ಲಿ ಭೀಮ್ ನಗರ ಎಂದೂ ಕರೆಯಲ್ಪಡುವ ದಾಮು ನಗರವು ಶಿಥಿಲ ಗೋಡೆಗಳು, ಟಾರ್ಪಾಲಿನ್ ಮತ್ತು ಟಿನ್‌ ಶೀಟ್‌ಗಳನ್ನು ಛಾವಣಿಯಾಗಿ ಹೊಂದಿರುವ 2300ಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಇವು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದೊಳಗಿನ ಗುಡ್ಡದ ಮೇಲೆ ನೆಲೆಗೊಂಡಿವೆ. ಇಕ್ಕಟ್ಟಿನ, ಅಸಮವಾದ ಕಲ್ಲಿನ ದಾರಿಯಲ್ಲಿ ನಡೆಯುತ್ತಾ, ಹರಿಯುವ ಒಳಚರಂಡಿ ನೀರಿಗೆ ಕಾಲಿಡದಿರಲು ಪ್ರಯತ್ನಿಸುತ್ತಾ ನೀವು ಇಲ್ಲಿನ ಮನೆಗಳಿಗೆ ತಲುಪಬೇಕು.

PHOTO • Jyoti Shinoli
PHOTO • Jyoti Shinoli

ಎಡ: ಪ್ರಕಾಶ್ ಯೇಡೆ ದಾಮು ನಗರದಲ್ಲಿರುವ ತಮ್ಮ ಮನೆಯ ಮುಂದೆ. ಅವರು ತಮ್ಮ ತಾಯಿ ಮೀರಾ ಮತ್ತು ತಂದೆ ಜ್ಞಾನದೇವ್ ಅವರೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ. ಬಲ: ಭೀಮ್ ನಗರ ಎಂದೂ ಕರೆಯಲ್ಪಡುವ ದಾಮು ನಗರ ಕೊಳೆಗೇರಿಯ ಪ್ರವೇಶದ್ವಾರ

PHOTO • Jyoti Shinoli
PHOTO • Jyoti Shinoli

ಎಡಕ್ಕೆ: ದಾಮು ನಗರದ ನಿವಾಸಿಗಳು ತಮ್ಮ ಮನೆಗಳಲ್ಲಿ ಶೌಚಾಲಯಗಳಲ್ಲಿದ ಕಾರಣ ಮಲವಿಸರ್ಜನೆಗೆ ಹೋಗುವ ಬಯಲು ಪ್ರದೇಶವನ್ನು ತಲುಪಲು ಒಂದು ಅಡಿ ಎತ್ತರದ ಗೋಡೆಯ ಮೇಲೆ ಹೆಜ್ಜೆ ಹಾಕುತ್ತಾ ಕಸದ ರಾಶಿಯ ನಡುವೆ ನಡೆಯಬೇಕು. ಬಲ: ಕೊಳೆಗೇರಿಗಳಲ್ಲಿ ನೀರು, ವಿದ್ಯುತ್ ಮತ್ತು ಶೌಚಾಲಯಗಳಂತಹ ಮೂಲಭೂತ ಪುರಸಭೆಯ ಸೇವೆಗಳನ್ನು ನಾಗರಿಕ ಸಂಸ್ಥೆಗಳು ಒದಗಿಸಿಲ್ಲ, ಈ ಕಾಲೋನಿಗಳು ʼಕಾನೂನು ಬಾಹಿರʼ ಎನ್ನುವುದು ಅವು ಇದಕ್ಕೆ ನೀಡುವ ಕಾರಣ

ಈ ಬಾರಿಯ ಚುನಾವಣೆಯಲ್ಲಿ ಇಲ್ಲಿನ ಜನರು ಕೇವಲ ಮೂಲಭೂತ ಸೌಕರ್ಯಗಳ ಕೊರತೆಯ ವಿಷಯವಾಗಿ ಮತ ಚಲಾಯಿಸುತ್ತಿಲ್ಲ.

"ಈ ಬಾರಿ ನಮ್ಮ ಪಾಲಿಗೆ ಚುನಾವಣಾ ವಿಷಯವೆಂದರೆ ಸುದ್ದಿ. ಸುದ್ದಿ ಸತ್ಯವಾಗಿರಬೇಕು. ಮತ್ತು ಮಾಧ್ಯಮಗಳು ನಮ್ಮಂತಹವರ ಬಗ್ಗೆ ಸತ್ಯವನ್ನು ಹೇಳುತ್ತಿಲ್ಲ" ಎಂದು ಪ್ರಕಾಶ್ ಯೇಡೆ ಹೇಳುತ್ತಾರೆ. ಅವರು ತಪ್ಪು ಮಾಹಿತಿ, ನಕಲಿ ಮತ್ತು ಪಕ್ಷಪಾತದ ಸುದ್ದಿಗಳ ಬಗ್ಗೆ ದೂರು ಹೇಳುತ್ತಾರೆ. “ಜನರು ತಾವು ನೋಡಿದ್ದನ್ನು ಮತ್ತು ಕೇಳಿದ್ದನ್ನು ಆಧರಿಸಿ ಮತ ಚಲಾಯಿಸುತ್ತಾರೆ ಮತ್ತು ಜನರು ಮಾಧ್ಯಮಗಳಲ್ಲಿ ಕೇಳುವುದು ಮತ್ತು ನೋಡುವುದು ಮೋದಿಯವರ ಹೊಗಳಿಕೆಯನ್ನು ಮಾತ್ರ."

ಪ್ರಕಾಶ್ ಅವರು ಬಹುತೇಕ ಮಾಹಿತಿಗಳನ್ನು ಜಾಹೀರಾತು ರಹಿತ ಸ್ವತಂತ್ರ ಮಾಧ್ಯಮಗಳಿಂದ ಪಡೆಯುತ್ತಾರೆ. “ಇಲ್ಲಿನ ಬಹುತೇಕ ನನ್ನ ವಯಸ್ಸಿನವರು ನಿರುದ್ಯೋಗಿಗಳು. ಅವರು ಹೌಸ್ ಕೀಪಿಂಗ್ ಹಾಗೂ ದೈಹಿಕ ಶ್ರಮದಂತಹ ಕೆಲಸಗಳನ್ನು ಅವಲಂಬಿಸಿದ್ದಾರೆ. ಕೆಲವೇ ಕೆಲವು 12ನೇ ತರಗತಿ ಪಾಸ್ ಆಗಿರುವವರು ವೈಟ್ ಕಾಲರ್ ಕೆಲಸಗಳನ್ನು ಮಾಡುತ್ತಿದ್ದಾರೆ“ ಎನ್ನುವ ಅವರು ಇಂದು ನಿರುದ್ಯೋಗ ಎನ್ನುವುದು ದೇಶವ್ಯಾಪಿ ಸಮಸ್ಯೆ ಎನ್ನುತ್ತಾರೆ.

12ನೇ ತರಗತಿಯವರೆಗೆ ಓದಿರುವ ಪ್ರಕಾಶ್ ಮಲಾಡ್‌ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಫೋಟೊ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದರು. 15,000 ಸಾವಿರ ಸಂಬಳವನ್ನು ತರುತ್ತಿದ್ದ ಈ ಕೆಲಸವನ್ನು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಕಿತ್ತುಕೊಂಡಿತು. “ಒಟ್ಟಿಗೆ ಸುಮಾರು 50 ಜನರನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇದಾಗಿ ಒಂದು ತಿಂಗಳು ಕಳೆದಿದ್ದು ಅಂದಿನಿಂದ ನಾನು ಸಹ ನಿರುದ್ಯೋಗಿ” ಎಂದು ಅವರು ಹೇಳುತ್ತಾರೆ.

ರಾಷ್ಟ್ರವ್ಯಾಪಿ, ಒಟ್ಟು ನಿರುದ್ಯೋಗಿಗಳಲ್ಲಿ ವಿದ್ಯಾವಂತ ಯುವಕರ ಪಾಲು 2000 ಇಸವಿಯಲ್ಲಿ ಶೇಕಡಾ 54.2 ಇತ್ತು. ಈಗ 2022 ಇಸವಿಗೆ ಅದು ಶೇಕಡಾ 65.7ಕ್ಕೆ ಏರಿದೆ ಎಂದು ಭಾರತ ಉದ್ಯೋಗ ವರದಿ 2024 ನಮಗೆ ಹೇಳುತ್ತದೆ. ಆ ವರದಿಯನ್ನು ಮಾರ್ಚ್ 26ರಂದು ದೆಹಲಿಯಲ್ಲಿ ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್ಒ) ಮತ್ತು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಡೆವಲಪ್ಮೆಂಟ್ (ಐಎಚ್‌ಡಿ) ಬಿಡುಗಡೆ ಮಾಡಿದೆ.

PHOTO • Jyoti Shinoli
PHOTO • Jyoti Shinoli

ಎಡ: 'ಸುದ್ದಿಗಳು ಸತ್ಯವಾಗಿರಬೇಕು, ಮತ್ತು ಮಾಧ್ಯಮಗಳು ನಮ್ಮಂತಹ ಜನರ ಬಗ್ಗೆ ಸತ್ಯವನ್ನು ಹೇಳುತ್ತಿಲ್ಲ' ಎಂದು ಪ್ರಕಾಶ್ ಹೇಳುತ್ತಾರೆ. ಬಲ: ಚಂದ್ರಕಲಾ ಖಾರಟ್ ಅವರು 2015ರಲ್ಲಿ ದಾಮು ನಗರದಲ್ಲಿ ನಡೆದ ಸರಣಿ ಸಿಲಿಂಡರ್ ಸ್ಫೋಟದಿಂದ ಉಂಟಾದ ಬೆಂಕಿಯಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ಅವರು ಈಗ ರಸ್ತೆ ಮತ್ತು ಕಸದ ರಾಶಿಯಿಂದ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಗುಜರಿ ವ್ಯಾಪಾರಿಗಳಿಗೆ ಮಾರಾಟ ಮಾಡುವ ಮೂಲಕ ಬದುಕು ನಡೆಸುತ್ತಿದ್ದಾರೆ

ಪ್ರಕಾಶ್ ಅವರ ಆದಾಯವು ಅವರ ಕುಟುಂಬದ ಪ್ರಗತಿಯಲ್ಲಿ ಒಂದು ಮೈಲಿಗಲ್ಲಾಗಿತ್ತು ಇದನ್ನು ಅವರು ಕಳೆದ ಎರಡು ವರ್ಷಗಳ ಹಿಂದಷ್ಟೇ ಸಾಧಿಸಿದ್ದರು. ಮತ್ತು ಅವರದು ದುರಂತದ ನಂತರದ ವಿಜಯೋತ್ಸವದ ಕಥೆ. ಸರಣಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗಳ ಕಾರಣದಿಂದಾಗಿ 2015ರಲ್ಲಿ ದಾಮು ನಗರ ಬೆಂಕಿಯಲ್ಲಿ ಬೆಂದಿತ್ತು . ಆ ಬೆಂಕಿಯ ಸಂತ್ರಸ್ತರಲ್ಲಿ ಯೇಡೆ ಕುಟುಂಬವೂ ಒಂದು. "ನಾವು ಅಂದು ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಗೆ ಓಡಿದ್ದೆವು. ಉಳಿದಂತೆ ಎಲ್ಲವೂ ಭಸ್ಮವಾಗಿದ್ದವು - ದಾಖಲೆಗಳು, ಆಭರಣಗಳು, ಪೀಠೋಪಕರಣಗಳು, ಪಾತ್ರೆಗಳು, ಎಲೆಕ್ಟ್ರಾನಿಕ್ಸ್” ಎಂದು ಮೀರಾ ನೆನಪಿಸಿಕೊಳ್ಳುತ್ತಾರೆ.

“ವಿನೊದ್ ತಾವಡೆ [ಅಂದಿನ ಮಹಾರಾಷ್ಟ್ರದ ಶಿಕ್ಷಣ ಮಂತ್ರಿ ಮತ್ತು ಬೊರಿವಲಿ ವಿಧಾನಸಭಾ ಕ್ಷೇತ್ರದ ಶಾಸಕ] ನಮಗೆ ಒಂದು ತಿಂಗಳಲ್ಲಿ ಪಕ್ಕಾ ಮನೆಯನ್ನು ನೀಡುವುದಾಗಿ ಭರವಸೆ ನೀಡಿದ್ದರು,” ಎಂದು ಪ್ರಕಾಶ್ ಅವರು ಮಾರಣಾಂತಿಕ ಬೆಂಕಿ ಅವಘಡದ ನಂತರ ಪಡೆದ ಭರವಸೆಯನ್ನು ನೆನಪಿಸಿಕೊಳ್ಳುತ್ತಾರೆ.

ಆ ಭರವಸೆಯ ನಂತರ ಎಂಟು ವರ್ಷಗಳು ಕಳೆದಿವೆ. ಅದರ ನಂತರ ಇಲ್ಲಿನ ಜನರು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತು ಅದೇ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದರು. ಆದರೆ ಬದುಕು ಮಾತ್ರ ಹಾಗೇ ಉಳಿದಿದೆ. ಭೂರಹಿತ ಕೃಷಿ ಕಾರ್ಮಿಕರಾಗಿದ್ದ ಪ್ರಕಾಶ್‌ ಅವರ ಅಜ್ಜ ಅಜ್ಜಿ ಜಲ್ನಾ ಜಿಲ್ಲೆಯವರು. ಅವರು 1970ರ ದಶಕದಲ್ಲಿ ಮುಂಬೈಗೆ ವಲಸೆ ಬಂದರು.

ಅವರ ತಂದೆ, 58 ವರ್ಷದ ಜ್ಞಾನದೇವ್ ಈಗಲೂ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ತಾಯಿ ಮೀರಾ ಗುತ್ತಿಗೆ ಸಫಾಯಿ ಕರ್ಮಚಾರಿಯಾಗಿ ಮಾಡುತ್ತಿದ್ದಾರೆ. ಅವರದು ಮನೆಗಳಿಂದ ಕಸವನ್ನು ಸಂಗ್ರಹಿಸುವ ಕೆಲಸ. "ಪ್ರಕಾಶನ ಸಂಬಳ ಸೇರಿ ನಾವು ಮೂವರು ತಿಂಗಳಿಗೆ 30,000 ಸಂಪಾದಿಸುತ್ತಿದ್ದೆವು. ಸಿಲಿಂಡರುಗಳು, ಎಣ್ಣೆ, ಧಾನ್ಯಗಳು ಮತ್ತು ಆಹಾರ ಪದಾರ್ಥಗಳ ಬೆಲೆಗಳೊಂದಿಗೆ (ಈಗಿರುವಷ್ಟು ಹೆಚ್ಚಿರಲಿಲ್ಲ) ಒಂದು ಹಂತಕ್ಕೆ ಒಳ್ಳೆಯ ಬದುಕನ್ನು ಬದುಕುತ್ತಿದ್ದೆವು" ಎಂದು ಮೀರಾ ಹೇಳುತ್ತಾರೆ.

ಪ್ರತಿ ಬಾರಿಯೂ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದಂತೆ ಅವರ ಪಾಲಿಗೆ ಹೊಸದೊಂದು ವಿಪತ್ತು ಬಂದೆರಗುತ್ತಿತ್ತು "ಬೆಂಕಿ ಅವಘಡದ ನಂತರ, ಅಪನಗದೀಕರಣ ನಡೆಯಿತು. ನಂತರ ಕರೋನಾ ಮತ್ತು ಲಾಕ್ಡೌನ್ ಎದುರಾಯಿತು. ಸರ್ಕಾರದಿಂದ ಯಾವುದೇ ಪರಿಹಾರ ಸಿಗಲಿಲ್ಲ" ಎಂದು ಅವರು ಹೇಳುತ್ತಾರೆ.

PHOTO • Jyoti Shinoli
PHOTO • Jyoti Shinoli

ಎಡ: ಯೇಡೆ ಕುಟುಂಬವು 2015ರಲ್ಲಿ ಬೆಂಕಿ ಅಪಘಾತವೊಂದರಲ್ಲಿ ತಮ್ಮ ಎಲ್ಲಾ ವಸ್ತುಗಳನ್ನು ಕಳೆದುಕೊಂಡಿತು. ಬೋರಿವಲಿ ಕ್ಷೇತ್ರದ ಮಾಜಿ ಶಾಸಕ ವಿನೋದ್ ತಾವಡೆ ಇಲ್ಲಿನ ನಿವಾಸಿಗಳಿಗೆ ಪಕ್ಕಾ ಮನೆಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಎಂಟು ವರ್ಷಗಳ ನಂತರವೂ ಆ ಭರವಸೆ ಈಡೇರಿಲ್ಲ. ಬಲ: ಪ್ರಕಾಶ್ ಮಲಾಡ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಫೋಟೋ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೃತಕ ಬುದ್ಧಿಮತ್ತೆ ಅವರ ಕೆಲಸವನ್ನು ಕಿತ್ತುಕೊಂಡಿತು. ಅವರೀಗ ಒಂದು ತಿಂಗಳಿನಿಂದ ನಿರುದ್ಯೋಗಿ

PHOTO • Jyoti Shinoli

ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದೊಳಗಿನ ಗುಡ್ಡದ ಮೇಲಿರುವ ದಾಮು ನಗರದಲ್ಲಿ ಸುಮಾರು 2,300 ಮನೆಗಳಿವೆ. ಕಿರಿದಾದ, ಕಲ್ಲಿನಿಂದ ಕೂಡಿದ ಮತ್ತು ಅಸಮವಾದ ಮಾರ್ಗಗಳು ಶಿಥಿಲಗೊಂಡ ಮನೆಗಳ ಬಳಿ ಕರೆದೊಯ್ಯುತ್ತವೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ- ಮಿಷನ್ ಅಡಿಯಲ್ಲಿ ಮೋದಿ ಸರ್ಕಾರದ "ಎಲ್ಲರಿಗೂ ವಸತಿ (ನಗರ)" ಯೋಜನೆಯು 2022ರ ವೇಳೆಗೆ ಎಲ್ಲಾ ಅರ್ಹ ಕುಟುಂಬಗಳಿಗೆ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪ್ರಕಾಶ್ ತನ್ನ ಕುಟುಂಬವನ್ನು ಯೋಜನೆಗೆ 'ಅರ್ಹವಾಗಿಸಲು' ಪ್ರಯತ್ನಿಸುತ್ತಿದ್ದಾರೆ.

"ನನ್ನ ಕುಟುಂಬಕ್ಕೆ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸುತ್ತಲೇ ಇದ್ದೇನೆ. ಆದರೆ ಯಾವುದೇ ಆದಾಯ ಪುರಾವೆ ಮತ್ತು ಮಾನ್ಯ ದಾಖಲೆಗಳಿಲ್ಲದೆ ಅದಕ್ಕೆ ಅರ್ಹವಾಗಲು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳುತ್ತಾರೆ.

ಈ ವರ್ಷದ ಫೆಬ್ರವರಿಯಲ್ಲಿ (2024) ಮಹಾರಾಷ್ಟ್ರ ರಾಜ್ಯದ ಶಿಕ್ಷಣ ಹಕ್ಕು ( ಆರ್‌ಟಿಇ ) ಕಾಯ್ದೆಯ ನಿಯಮಗಳಿಗೆ ರಾಜ್ಯ ಸರ್ಕಾರ ಮಾಡಿದ ಅಧಿಸೂಚನೆಯು ಅವರಿಗೆ ಇನ್ನಷ್ಟು ತೊಂದರೆಯನ್ನುಂಟುಮಾಡಿದೆ. ಈ ಅಧಿಸೂಚನೆಯೊಂದಿಗೆ, ಮಗುವಿನ ನಿವಾಸದಿಂದ ಒಂದು ಕಿಲೋಮೀಟರ್ ಒಳಗೆ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆ ಇದ್ದರೆ, ಅವನು ಅಥವಾ ಅವಳು ಅಲ್ಲಿ ಪ್ರವೇಶ ಪಡೆಯಬೇಕು. ಇದರರ್ಥ ಇಂಗ್ಲಿಷ್ ಮಾಧ್ಯಮ ಶಾಲೆಗಳು ಸೇರಿದಂತೆ ಖಾಸಗಿಯವರು ಆರ್‌ಟಿಇಯ ಶೇಕಡಾ 25ರಷ್ಟು ಕೋಟಾದೊಳಗೆ ಅಂಚಿನಲ್ಲಿರುವ ಸಮುದಾಯಗಳ ಮಕ್ಕಳಿಗೆ ಪ್ರವೇಶ ನೀಡುವುದನ್ನು ನಿಷೇಧಿಸಲಾಗಿದೆ. "ಇದು ವಾಸ್ತವವಾಗಿ ಆರ್‌ಟಿಇ ಕಾಯ್ದೆಯನ್ನು ಅರ್ಥಹೀನವಾಗಿಸಿದೆ" ಎಂದು ಅನುದಾನಿತ್ ಶಿಕ್ಷಾ ಬಚಾವೋ ಸಮಿತಿಯ (ಅನುದಾನಿತ ಶಾಲೆಗಳನ್ನು ಉಳಿಸಿ ಸಮಿತಿ) ಪ್ರೊಫೆಸರ್ ಸುಧೀರ್ ಪರಾಂಜಪೆ ಪರಿಗೆ ತಿಳಿಸಿದರು.

"ಇಂತಹ ನಿರ್ಧಾರಗಳಿಂದಾಗಿ ನಾವು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲ. ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವ ಏಕೈಕ ಕಾನೂನು (ಈ ಅಧಿಸೂಚನೆಯೊಂದಿಗೆ) ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಹಾಗಾದರೆ ನಾವು ಪ್ರಗತಿ ಸಾಧಿಸುವುದು ಹೇಗೆ?" ಎಂದು ಅವರು ನೋವಿನಿಂದ ಕೇಳುತ್ತಾರೆ.

ಮುಂದಿನ ಪೀಳಿಗೆಗೆ ಗುಣಮಟ್ಟದ ಶಿಕ್ಷಣ ನೀಡುವುದೊಂದೇ ದಾಮು ನಗರದ ಪ್ರಕಾಶ್ ಮತ್ತು ಇತರರ ಪಾಲಿಗೆ ಉಳಿದಿರುವ ಮಾರ್ಗವಾಗಿದೆ. ಮತ್ತು ದಾಮು ನಗರದ ಮಕ್ಕಳ ಬಡತನದ ಸ್ಥಿತಿಯ ಬಗ್ಗೆ ಸ್ವಲ್ಪ ಸಂದೇಹವಿದೆ. ಇಲ್ಲಿನ ಬಹುಪಾಲು ನಿವಾಸಿಗಳು, ಅವರಲ್ಲಿ ಕೆಲವರು ನಾಲ್ಕು ದಶಕಗಳಿಂದ ಈ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ, ಅವರು ನವ-ಬೌದ್ಧ ಸಮುದಾಯಕ್ಕೆ ಸೇರಿದವರು - ಅಂದರೆ ದಲಿತರು. ಅನೇಕರ ಅಜ್ಜ ಅಜ್ಜಿಯರು ಮತ್ತು ಪೋಷಕರು 1972ರ ಭೀಕರ ಬರಗಾಲದ ಸಮಯದಲ್ಲಿ ಜಲ್ನಾ ಮತ್ತು ಸೋಲಾಪುರದಿಂದ ಮುಂಬೈಗೆ ವಲಸೆ ಬಂದರು.

PHOTO • Jyoti Shinoli
PHOTO • Jyoti Shinoli

ಎಡ: ಈ ವರ್ಷ ರಾಜ್ಯ ಸರ್ಕಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆ ಇದ್ದರೆ ಖಾಸಗಿ ಶಾಲೆಗಳಿಗೆ ಶೇಕಡಾ 25ರಷ್ಟು ಶಿಕ್ಷಣ ಹಕ್ಕಿನ ಕೋಟಾದಿಂದ ವಿನಾಯಿತಿ ನೀಡಲಾಗಿದೆ. ಇದು ದಾಮು ನಗರದ ಬಡ ಮಕ್ಕಳು ಗುಣಮಟ್ಟದ ಶಿಕ್ಷಣದ ಹಕ್ಕನ್ನು ಕಳೆದುಕೊಳ್ಳಲು ಕಾರಣವಾಗಬಹುದು ಎಂದು ಅನುದಾನಿತ್ ಶಿಕ್ಷಾ ಬಚಾವೋ ಸಮಿತಿಯ ಪ್ರೊಫೆಸರ್ ಸುಧೀರ್ ಪರಾಂಜಪೆ ಹೇಳುತ್ತಾರೆ. ಬಲ: ದಾಮು ನಗರದ ಮಹಿಳೆಯರಿಗೆ ಸುರಕ್ಷಿತ ಶೌಚಾಲಯಗಳ ಸೌಲಭ್ಯವಿಲ್ಲ. "ಅನಾರೋಗ್ಯ ಅಥವಾ ಗಾಯಗಳಂತಹ ಸಮಸ್ಯೆಯಿಂದ ಬಳಲುತ್ತಿರುವಾಗಲೂ ಬಕೆಟ್‌ ನೀರು ತೆಗೆದುಕೊಂಡು ಗುಡ್ಡ ಹತ್ತಬೇಕು" ಎಂದು ಲತಾ ಸೋನಾವಾನೆ (ಹಸಿರು ದುಪಟ್ಟಾ) ಹೇಳುತ್ತಾರೆ

PHOTO • Jyoti Shinoli
PHOTO • Jyoti Shinoli

ಎಡ ಮತ್ತು ಬಲ: ಲತಾ ತನ್ನ ಮಕ್ಕಳೊಂದಿಗೆ ತಮ್ಮ ಮನೆಯಲ್ಲಿ

ಇಲ್ಲಿನ ಜನರಿಗೆ ಆರ್‌ಟಿಇ ಸೌಲಭ್ಯವನ್ನು ಪಡೆಯವುದು ಮತ್ತು ಉಳಿಸುಕೊಳ್ಳುವುದಷ್ಟೇ ಕಷ್ಟವಾಗುತ್ತಿಲ್ಲ. ಪ್ರಕಾಶ್ ಅವರ ನೆರೆಮನೆಯ ಅಬಾಸಾಹೇಬ್ ಮಾಸ್ಕೆಯವರು 'ಲೈಟ್ ಬಾಟಲ್' ಉದ್ಯಮವನ್ನು ನಿರ್ಮಿಸಲು ಮಾಡಿದ ಪ್ರಯತ್ನವೂ ವಿಫಲವಾಗಿದೆ. "ಈ ಯೋಜನೆಗಳು ಹೆಸರಿಗಷ್ಟೇ ಅಸ್ತಿತ್ವದಲ್ಲಿವೆ" ಎಂದು 43 ವರ್ಷದ ಮಾಸ್ಕೆ ಹೇಳುತ್ತಾರೆ. "ನಾನು ಮುದ್ರಾ ಯೋಜನೆಯಡಿ ಸಾಲ ಪಡೆಯಲು ಪ್ರಯತ್ನಿಸಿದೆ. ಆದರೆ ಸಿಗಲಿಲ್ಲ. ಏಕೆಂದರೆ ನನ್ನನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಬ್ಯಾಂಕಿನಿಂದ ನಾನು ಈ ಹಿಂದೆ ಪಡೆದ 10,000 ರೂಪಾಯಿಗಳ ಸಾಲದ ಕಂತನ್ನು ಕಟ್ಟುವುದನ್ನು ತಪ್ಪಿಸಿದ್ದೆ.”

ಗ್ರಾಮೀಣ ಮತ್ತು ನಗರ ಬಡವರಿಗೆ ವಿವಿಧ ಆರೋಗ್ಯ ಮತ್ತು ಕಲ್ಯಾಣ ಯೋಜನೆಗಳ ಲಭ್ಯತೆಯ ಪರಿಸ್ಥಿತಿಯ ಬಗ್ಗೆ ಪರಿ ನಿಯಮಿತವಾಗಿ ವರದಿ ಮಾಡುತ್ತಿದೆ. [ಉದಾಹರಣೆಗೆ, ಓದಿ: ಉಚಿತ ಚಿಕಿತ್ಸೆಯೂ, ದೊಡ್ಡ ಪ್ರಯಾಣದ ಖರ್ಚಿನ ಭಾರವೂ ಮತ್ತು 'ಒಂದು ದಿನ ನನ್ನ ಮೊಮ್ಮಕ್ಕಳು ಅವರ ಸ್ವಂತ ಮನೆಯನ್ನು ಕಟ್ಟಲಿದ್ದಾರೆ' ].

ಮಾಸ್ಕೆ ತನ್ನ ವರ್ಕ್‌ಶಾಪ್ ಮತ್ತು ಕುಟುಂಬವನ್ನು 10x10 ಅಡಿ ಕೋಣೆಯಲ್ಲಿ ನಡೆಸುತ್ತಾರೆ. ಎಡಭಾಗದಲ್ಲಿ, ಒಳಗೆ ಪ್ರವೇಶಿಸುತ್ತಿದ್ದಂತೆ, ಅಡುಗೆಮನೆ ಮತ್ತು ಮೋರಿ [ಸ್ನಾನದ ಮನೆ] ಇದೆ. ಅದರ ಪಕ್ಕದಲ್ಲಿ, ಬಾಟಲಿಗಳನ್ನು ಅಲಂಕರಿಸಲು ಅಗತ್ಯವಿರುವ ಎಲ್ಲಾ ವಸ್ತುಗಳನ್ನು ವ್ಯವಸ್ಥಿತವಾಗಿ ಕಪಾಟುಗಳಲ್ಲಿ ಸಂಗ್ರಹಿಸಿಡಲಾಗಿದೆ.

"ನಾನು ಕಾಂದಿವಲಿ ಮತ್ತು ಮಲಾಡ್ ಸುತ್ತ ತಿರುಗಾಡಿ ಈ ದೀಪಗಳನ್ನು ಮಾರಾಟ ಮಾಡುತ್ತೇನೆ." ಅವರು ವೈನ್ ಸ್ಟೋರ್‌ಗಳು ಮತ್ತು ಗುಜರಿ ಮಾರಾಟಗಾರರಿಂದ ಖಾಲಿ ವೈನ್ ಬಾಟಲಿಗಳನ್ನು ಖರೀದಿಸುತ್ತಾರೆ. "ವಿಮಲ್ [ಅವರ ಪತ್ನಿ] ಅವುಗಳನ್ನು ಸ್ವಚ್ಛಗೊಳಿಸಲು, ತೊಳೆಯಲು ಮತ್ತು ಒಣಗಿಸಲು ಸಹಾಯ ಮಾಡುತ್ತಾರೆ. ನಂತರ ನಾನು ಪ್ರತಿ ಬಾಟಲಿಯನ್ನು ಕೃತಕ ಹೂವುಗಳು ಮತ್ತು ದಾರಗಳಿಂದ ಅಲಂಕರಿಸುತ್ತೇನೆ. ನಂತರ ಅದರಲ್ಲಿ ವೈರಿಂಗ್ ಮತ್ತು ಬ್ಯಾಟರಿಗಳನ್ನು ಜೋಡಿಸುತ್ತೇನೆ" ಎಂದು ಅವರು 'ಲೈಟ್ ಬಾಟಲ್ಸ್' ತಯಾರಿಸುವ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾರೆ. ಮೊದಲಿಗೆ, “ತಾಮ್ರದ ತಂತಿ ಎಲ್ಇಡಿ ಲೈಟ್ ತಂತಿಗಳಿಗೆ ಸಂಪರ್ಕ ಹೊಂದಿದ ನಾಲ್ಕು ಎಲ್ಆರ್ 44 ಬ್ಯಾಟರಿಗಳನ್ನು ಅಳವಡಿಸುತ್ತೇನೆ. ನಂತರ ಆ ಬಲ್ಬನ್ನು ಕೆಲವು ಕೃತಕ ಹೂವುಗಳ ಜೊತೆಗೆ ಬಾಟಲಿಯೊಳಗೆ ತಳ್ಳುತ್ತೇನೆ. ಅಲ್ಲಿಗೆ ಈ ದೀಪದ ಬಾಟಲ್‌ ಸಿದ್ಧವಾಗುತ್ತದೆ. ಬ್ಯಾಟರಿಯಲ್ಲಿನ ಆನ್-ಆಫ್ ಸ್ವಿಚ್ ಮೂಲಕ ನೀವು ಇದನ್ನು ಆಪರೇಟ್ ಮಾಡಬಹುದು.” ಮನೆಗಳಲ್ಲಿ ಅಲಂಕಾರಿಕವಾಗಿ ಇದನ್ನು ಬಳಸುವ ಜನರಿಗಾಗಿ ಅವರು ಇವುಗಳಿಗೆ ಒಂದಷ್ಟು ಕಲಾತ್ಮಕ ಸ್ಪರ್ಶವನ್ನು ನೀಡುತ್ತಾರೆ.

“ನನಗೆ ಕಲೆಯ ಬಗ್ಗೆ ಒಲವಿದೆ ಹಾಗೂ ನಾನು ನನ್ನ ಕೌಶಲವನ್ನು ವಿಸ್ತರಿಸಲು ಬಯಸುತ್ತೇನೆ. ಈ ಮೂಲಕ ನನಗೆ ಹೆಚ್ಚು ಸಂಪಾದಿಸಲು ಸಾಧ್ಯವಾಗುತ್ತದೆ ಮತ್ತು ಆ ಸಂಪಾದನೆಯಿಂದ ನನ್ನ ಮೂವರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ” ಎಂದು ಅಬಾಸಾಹೇಬ್ ಮಾಸ್ಕೆ ಹೇಳುತ್ತಾರೆ. ಪ್ರತಿ ಬಾಟಲಿ ತಯಾರಿಕೆಗೆ 30ರಿಂದ 40 ರೂಪಾಯಿಗಳವರೆಗೆ ವೆಚ್ಚವಾಗುತ್ತದೆ. ಮಾಸ್ಕೆ ದೀಪವನ್ನು 200 ರೂಪಾಯಿಗಳಿಗೆ ಒಂದರಂತೆ ಮಾರಾಟ ಮಾಡುತ್ತಾರೆ. ಅವರ ದೈನಂದಿನ ಸಂಪಾದನೆ ಸಾಮಾನ್ಯವಾಗಿ 500 ರೂಪಾಯಿಗಳಿಗಿಂತ ಕಡಿಮೆ ಇರುತ್ತದೆ. “ತಿಂಗಳ 30 ದಿನಗಳೂ ದುಡಿದು ನಾನು ತಿಂಗಳಿಗೆ 10,000 ರಿಂದ 12,000 ರೂಪಾಯಿಗಳನ್ನು ಗಳಿಸುತ್ತೇನೆ" ಅಂದರೆ ಅವರು ದಿನಕ್ಕೆ ಸರಾಸರಿ ಎರಡು ಬಾಟಲಿ ಮಾರಾಟವನ್ನು ಮಾಡುತ್ತಾರೆ. “ಈ ಆದಾಯದಿಂದ ಐದು ಜನರ ಕುಟುಂಬವನ್ನು ಪೋಷಿಸುವುದು ಕಷ್ಟ" ಎಂದು ಅವರು ಹೇಳುತ್ತಾರೆ. ಮ್ಹಾಸ್ಕೆ ಮೂಲತಃ ಜಲ್ನಾ ಜಿಲ್ಲೆಯ ಜಲ್ನಾ ತಾಲೂಕಿನ ತೇರಗಾಂವ್ ಗ್ರಾಮದವರು.

PHOTO • Jyoti Shinoli
PHOTO • Jyoti Shinoli

ಎಡ: ಅಬಾಸಾಹೇಬ್ ಮಾಸ್ಕೆ ಕಾಂದಿವಲಿ ಮತ್ತು ಮಲಾಡ್ ಪ್ರದೇಶಗಳಲ್ಲಿ 'ಲೈಟ್ ಬಾಟಲಿಗಳನ್ನು' ತಯಾರಿಸಿ ಮಾರಾಟ ಮಾಡುತ್ತಾರೆ. ಅವರು ತಮ್ಮ 10x10 ಅಡಿ ಕೋಣೆಯ ಮನೆಯಲ್ಲೇ ತಮ್ಮ ವರ್ಕ್‌ ಶಾಪನ್ನು ಸಹ ಹೊಂದಿದ್ದಾರೆ. ಬಲ: ಕೃತಕ ಹೂವುಗಳಿಂದ ಅಲಂಕರಿಸಲ್ಪಟ್ಟಿರುವ ಅಬಾಸಾಹೇಬ್ ತಯಾರಿಸಿದ ಬಾಟಲಿ. ಅವರು ವೈನ್ ಶಾಪ್‌ಗಳು ಮತ್ತು ವ್ಯಾಪಾರಿಗಳಿಂದ ಬಾಟಲಿಗಳನ್ನು ತರುತ್ತಾರೆ

PHOTO • Jyoti Shinoli
PHOTO • Jyoti Shinoli

ಎಡ: ಅವರ ಪತ್ನಿ ವಿಮಲ್ ಬಾಟಲಿಗಳನ್ನು ಸ್ವಚ್ಛಗೊಳಿಸಲು, ತೊಳೆಯಲು ಮತ್ತು ಒಣಗಿಸಲು ಸಹಾಯ ಮಾಡುತ್ತಾರೆ. ಬಲ: ಪ್ರತಿ ಬಾಟಲಿಯನ್ನು ತಯಾರಿಸಲು 30-40 ರೂಪಾಯಿಗಳು ಖರ್ಚಾಗುತ್ತವೆ. ಮಾಸ್ಕೆ ಅವುಗಳನ್ನು ತಲಾ 200 ರೂ.ಗಳಿಗೆ ಮಾರಾಟ ಮಾಡುತ್ತಾರೆ ಮತ್ತು ತಿಂಗಳಿಗೆ ಆ ಮೂಲಕ ಸುಮಾರು 10,000-12,000 ರೂ.ಗಳನ್ನು ಗಳಿಸುತ್ತಾರೆ. ಇದರರ್ಥ ಅವರಿಂದ ದಿನಕ್ಕೆ ಸುಮಾರು ಎರಡು ಬಾಟಲಿಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ

ಮಾಸ್ಕೆ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಸೋಯಾಬೀನ್ ಮತ್ತು ಜೋಳ ಬೆಳೆಯುವ ಸಲುವಾಗಿ ಪ್ರತಿವರ್ಷ ಜೂನ್ ವೇಳೆಗೆ ಒಬ್ಬರೇ ತಮ್ಮ ಊರಿಗೆ ಮರಳುತ್ತಾರೆ. "ಪ್ರತಿ ಸಲವೂ ಬೇಸಾಯ ಕೈಕೊಡುತ್ತದೆ. ಕಡಿಮೆ ಮಳೆಯಿಂದಾಗಿ ಉತ್ತಮ ಇಳುವರಿ ಸಿಗುವುದಿಲ್ಲ" ಎಂದು ಅವರು ದೂರುತ್ತಾರೆ. ಮಾಸ್ಕೆ ಕಳೆದ ಎರಡು ವರ್ಷಗಳಿಂದ ಬೇಸಾಯ ಮಾಡುವುದನ್ನು ನಿಲ್ಲಿಸಿದ್ದಾರೆ.

ದಾಮು ನಗರ ಕೊಳೆಗೇರಿಯ ಪ್ರಕಾಶ್, ಮೀರಾ, ಮಾಸ್ಕೆ ಮತ್ತು ಇತರ ನಿವಾಸಿಗಳು 2011ರ ಜನಗಣತಿಯಲ್ಲಿ ದಾಖಲಾದ ಭಾರತದ 65 ದಶಲಕ್ಷಕ್ಕೂ ಹೆಚ್ಚು ಕೊಳೆಗೇರಿ ನಿವಾಸಿಗಳ ಒಂದು ಸಣ್ಣ, ಬಹುತೇಕ ನಗಣ್ಯ ಭಾಗ. ಆದರೆ, ಇತರ ಕೊಳೆಗೇರಿ ನಿವಾಸಿಗಳೊಂದಿಗೆ, ಅವರು ಭಾಗವಾಗಿರುವ ಆರ್/ಎಸ್ ಪುರಸಭೆಯ ವಾರ್ಡಿನಲ್ಲಿ ಗಣನೀಯ ಸಂಖ್ಯೆಯ ಮತಗಳನ್ನು ಹೊಂದಿದ್ದಾರೆ.

"ಕೊಳೆಗೇರಿಗಳು ಗ್ರಾಮೀಣ ವಲಸಿಗರ ವಿಭಿನ್ನ ದುನಿಯಾ (ಜಗತ್ತು) " ಎಂದು ಅಬಾಸಾಹೇಬ್ ಹೇಳುತ್ತಾರೆ.

ಇದೇ ಮೇ 20ರಂದು ಕಾಂದಿವಲಿಯ ಜನರು ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. 2019ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಗೋಪಾಲ್ ಶೆಟ್ಟಿಯವರು ಕಾಂಗ್ರೆಸ್ ಪಕ್ಷದ ಊರ್ಮಿಳಾ ಮಾತೋಂಡ್ಕರ್ ವಿರುದ್ಧ ನಾಲ್ಕೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಈ ಬಾರಿ ಗೋಪಾಲ ಶೆಟ್ಟಿಯರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಅವರ ಬದಲಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮುಂಬೈ ಉತ್ತರದಿಂದ ಸ್ಪರ್ಧಿಸುತ್ತಿದ್ದಾರೆ. "ಬಿಜೆಪಿ ಇಲ್ಲಿ ಎರಡು ಬಾರಿ (2014 ಮತ್ತು 2019) ಗೆದ್ದಿದೆ. ಅದಕ್ಕೂ ಮೊದಲು ಇಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ ನಾನು ನೋಡುತ್ತಿರುವಂತೆ, ಬಿಜೆಪಿಯ ನಿರ್ಧಾರಗಳು ಬಡವರ ಪರವಾಗಿಲ್ಲ" ಎಂದು ಅಬಾಸಾಹೇಬ್ ಮಾಸ್ಕೆ ಹೇಳುತ್ತಾರೆ.

PHOTO • Jyoti Shinoli
PHOTO • Jyoti Shinoli

ಎಡ: ದಾಮು ನಗರದ ಕಿರಿದಾದ ಹಾದಿಗಳು. ಈ ಕೊಳೆಗೇರಿಯ ನಿವಾಸಿಗಳು ಮೇ 20ರಂದು ಮತ ಚಲಾಯಿಸಲಿದ್ದಾರೆ. ಬಲ: ಅಬಾಸಾಹೇಬ್ ಮಾಸ್ಕೆ, ವಿಮಲ್ ಮತ್ತು ಅವರ ಹೆಣ್ಣುಮಕ್ಕಳು ತಮ್ಮ ಮನೆಯಲ್ಲಿ. 'ಈ ಚುನಾವಣೆಯಲ್ಲಿ ನಮ್ಮಂತಹ ವಂಚಿತ ನಾಗರಿಕರ ಹಕ್ಕುಗಳನ್ನು ಉಳಿಸಿಕೊಳುವ ಸಲುವಾಗಿ ಮತ ಚಲಾವಣೆಯಾಗಲಿದೆ ಎಂದು ನಾನು ಭಾವಿಸುತ್ತೇನೆ'

ಇವಿಎಮ್‌ ಕುರಿತು ಅನುಮಾನ ವ್ಯಕ್ತಪಡಿಸುವ ಮೀರಾ ಯೇಡೆ ಮತಪತ್ರಗಳೇ ಹೆಚ್ಚು ವಿಶ್ವಾಸಾರ್ಹ ಎನ್ನುತ್ತಾರೆ. “ಈ ಮತದಾನದ ಯಂತ್ರಗಳು ನಕಲಿ ಎಂದು ನನಗೆ ತಿಳಿದುಬಂದಿದೆ. ಮೊದಲಿನ ಕಾಗದದ ವಿಧಾನ ಉತ್ತಮವಾಗಿತ್ತು. ನಾನು ಯಾರಿಗೆ ಮತ ಚಲಾಯಿಸಿದೆ ಎನ್ನುವುದರ ಬಗ್ಗೆ ನನಗೆ ವಿಶ್ವಾಸ ಇರುತ್ತಿತ್ತು” ಎಂದು ಮೀರಾ ಹೇಳುತ್ತಾರೆ.

ಸುದ್ದಿ ಮತ್ತು ತಪ್ಪು ಮಾಹಿತಿಯ ಕುರಿತಾದ ನಿರುದ್ಯೋಗಿ ಪ್ರಕಾಶ್ ಅವರ ಅಭಿಪ್ರಾಯಗಳು; ಸಫಾಯಿ ಕರ್ಮಚಾರಿ ಮೀರಾ ಅವರಿಗೆ ಇವಿಎಂಗಳಲ್ಲಿನ ವಿಶ್ವಾಸದ ಕೊರತೆ; ಮತ್ತು ಸರ್ಕಾರದ ಯೋಜನೆಯ ಸಹಾಯ ಪಡೆದು ತನ್ನದೇ ಆದ ಸಣ್ಣ ಉದ್ಯಮವನ್ನು ಸ್ಥಾಪಿಸುವ ಮಾಸ್ಕೆ ಅವರ ವಿಫಲ ಪ್ರಯತ್ನಗಳು. ಹೀಗೆ ಇಲ್ಲಿ ಪ್ರತಿಯೊಬ್ಬರ ಬಳಿಯೂ ಹೇಳಲು ಒಂದು ಕಥೆಯಿದೆ.

"ನಮ್ಮ ಕಾಳಜಿಯನ್ನು ನಿಜವಾಗಿಯೂ ಪ್ರತಿಧ್ವನಿಸುವ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸುವ ಭರವಸೆ ನನಗಿದೆ" ಎಂದು ಪ್ರಕಾಶ್ ಹೇಳುತ್ತಾರೆ.

"ಇಲ್ಲಿಯವರೆಗೆ ಯಾರು ಗೆದ್ದರೂ, ಯಾವುದೇ ಅಭಿವೃದ್ಧಿಯನ್ನು ತಂದಿಲ್ಲ. ನಮ್ಮ ಕಷ್ಟಗಳು ಹಾಗೇ ಉಳಿದಿದ್ದವು. ನಾವು ಯಾರಿಗೆ ಮತ ಹಾಕಿದರೂ ನಮ್ಮ ಸ್ವಂತ ಕಠಿಣ ಪರಿಶ್ರಮವಷ್ಟೇ ನಮ್ಮನ್ನು ಕಾಯುತ್ತದೆ, ಗೆದ್ದ ನಾಯಕ ಕಾಯುವುದಿಲ್ಲ. ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನವನ್ನು ನಾವೇ ಮಾಡಬೇಕು. ಗೆಲ್ಲುವ ನಾಯಕ ಇದನ್ನು ಮಾಡುವುದಿಲ್ಲ" ಎಂದು ಮೀರಾ ಹೇಳುತ್ತಾರೆ.

“ಈ ಬಾರಿಯ ಚುನಾವಣೆ ಕೇವಲ ಮೂಲಭೂತ ಸೌಕರ್ಯಗಳ ಕುರಿತಾದ ಪ್ರಶ್ನೆಗಳನ್ನಷ್ಟೇ ಹೊಂದಿಲ್ಲ. ಅದು ನಮ್ಮಂತಹ ವಂಚಿತ ಜನರ ಹಕ್ಕುಗಳ ಅಳಿವು ಉಳಿವಿನ ಪ್ರಶ್ನೆಯನ್ನು ಸಹ ಹೊಂದಿದೆ” ಎಂದು ಅಬಾಸಾಹೇಬ್ ತನ್ನ ಮಾತುಗಳನ್ನು ಮುಗಿಸಿದರು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಬಾರಿ ದಾಮು ನಗರದ ಜನರು ಪ್ರಜಾಪ್ರಭುತ್ವಕ್ಕಾಗಿ ಮತ ಚಲಾಯಿಸಲಿದ್ದಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Jyoti Shinoli is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

Other stories by Jyoti Shinoli

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru