“ನಾವು ಹೆಚ್ಚೆಚ್ಚು ಕೊಂಡಷ್ಟು, ಹೆಚ್ಚು ಹೆಚ್ಚು ಸಾಲದಲ್ಲಿ ಮುಳುಗುತ್ತೇವೆ” ನಮ್ಮೊಂದಿಗೆ ಮಾತನಾಡುತ್ತಿದ್ದವರು ತಮ್ಮದೇ ಸವೋರಾ ಆದಿವಾಸಿ ಸಮುದಾಯದ ಜನರು ಹೆಚ್ಚಿರುವ ಹಳ್ಳಿ ಖೈರಾದಲ್ಲಿನ 40ರ ಪ್ರಾಯದ ರೈತ ಮಹಿಳೆ ಕುನಾರಿ ಶಬರಿ.

“ತೆ ಗೋಬರಖಾತಾಚಾಸಾ ಹಲಾಚಾಸಾ (ದನದ ಗೊಬ್ಬರ ಮತ್ತು ನೇಗಿಲಿನಲ್ಲಿ ಉಳುವ ಬೇಸಾಯ) ನಮ್ಮದಾಗಿತ್ತು, ಈಗ ಯಾರೂ ಅದನ್ನು ಮಾಡುತ್ತಿಲ್ಲ.” ಎಂದರು. “ಈಗ ನಾವು ಎಲ್ಲದಕ್ಕೂ ಅಂಗಡಿಗೆ ಓಡುತ್ತೇವೆ. ಬೀಜ, ಕೀಟನಾಶಕ, ಗೊಬ್ಬರ. ಈಗ ಮೊದಲಿನ ಹಾಗಲ್ಲ, ನಾವು ತಿನ್ನುವುದನ್ನೂ ಕೊಂಡು ತಿನ್ನಬೇಕಾಗಿದೆ”

ಒರಿಸ್ಸಾದ ರಾಯಗಡ ಜಿಲ್ಲೆಯ ಪರಿಸರ ಸೂಕ್ಷ್ಮ ಘಟ್ಟ ಪ್ರದೇಶದಾದ್ಯಂತ ಹಬ್ಬುತ್ತಿರುವ, ಶ್ರೀಮಂತ ಜೀವವೈವಿಧ್ಯಕ್ಕೆ, ರೈತರ ಸಂಕಷ್ಟ ಮತ್ತು ಆಹಾರ ಭದ್ರತೆಗೆ (“ ಡಿಶಾ ದಲ್ಲಿ ಹವಾಗುಣ ಬಿಕ್ಕಟ್ಟಿನ ಬೀಜ ಗಳನ್ನು ಬಿತ್ತನೆ ಮಾಡಲಾಗುತ್ತಿದೆ ಯನ್ನು ಓದಿ) ಹಾನಿ ಮಾಡುತ್ತಿರುವ ಈ ಹತ್ತಿ ಬೇಸಾಯವು ಜನರಿಗೆ ತಂದೊಡ್ಡಿದ ಈ ಪರಾವಲಂಬಿ ಜೀವನದ ಬಗ್ಗೆ ಕುನಾರಿಯವರು ಹೇಳುತ್ತಿದ್ದರು. ಹತ್ತಿಯನ್ನು ಮೊದಲು ಬೆಳೆದ ರಾಯಗಡದ ಗುಣುಪುರ ಬ್ಲಾಕಿನ ಆಗ್ನೇಯ ದಿಕ್ಕಿನ ಕಡೆಗೆ ಇಳಿದಂತೆ ಇದು ಸ್ಪಷ್ಟವಾಗಿ ಕಾಣುತ್ತದೆ. ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಈ ಭೂಮಿಯಲ್ಲಿ ಕಣ್ಣು ಹಾಯಿಸಿದಷ್ಟು ದೂರದವರೆಗೆ ಒಂದೇ ಬೆಳೆ ಬರೀ ಹತ್ತಿಯೇ ಕಾಣುತ್ತದೆ. ಜೊತೆಗೆ ಸಂಕಷ್ಟವೂ ಕಾಣುತ್ತಿದೆ.

“12 ವರ್ಷಗಳ ಕೆಳಗೆ ಹತ್ತಿಯನ್ನು ಬೆಳೆಯಲು ಆರಂಭಿಸಿದೆವು. ಆದರೆ ಇವತ್ತು ಬೇರೆ ದಾರಿ ಇಲ್ಲದೆ ಅದನ್ನು ಬೆಳೆಯುತ್ತಿದ್ದೇವೆ” ಗುಣುಪುರ ಬ್ಲಾಕಿನಲ್ಲಿರುವ ಖೈರಾದಲ್ಲಿನ ಬಹುತೇಕ ಮಂದಿ ನಮಗೆ ಇದನ್ನೇ ಹೇಳಿದರು. ಈ ಭಾಗದ ಇನ್ನು ಕೆಲವರು ಹೇಳಿದ್ದೇನೆಂದರೆ, ಅವರು ಅತ್ತ ಹೆಚ್ಚು ಬಂಡವಾಳದ ಹತ್ತಿಯ ಕಡೆಗೆ ಸಾಗಿದಂತೆ, ಇತ್ತ ತಮ್ಮ ಸ್ವಂತ ಬೀಜಗಳನ್ನು ಮತ್ತು ದೇಶೀಯ ಬಹುಬೆಳೆ ಬೇಸಾಯ ವಿಧಾನಗಳನ್ನು ಕಳೆದುಕೊಳ್ಳುತ್ತಾ ಹೋದರು.

“ನಮಗೆ ಬೆಳೆಯಲು ನಮ್ಮದೇ ಬೆಳೆಗಳಿದ್ದವು ಮತ್ತು ನಮ್ಮದೇ ಆದ ಬೇಸಾಯ ಕ್ರಮವಿತ್ತು” ಸವೋರಾ ಸಮುದಾಯದ ಯುವ ರೈತ ಖೇತ್ರ ಶಬರ ನಿಟ್ಟುಸಿರುಬಿಟ್ಟರು. “ಆಂಧ್ರವಾಲಾಗಳು ಬಂದು, ಹತ್ತಿ ಬೆಳೆಯುವುದನ್ನು ಹೇಳಿಕೊಟ್ಟರು” ಹಣ ಮಾಡುವ ಆಸೆಯು ಹಳ್ಳಿಗರನ್ನು ಕಪ್ಪ ಅಥವಾ ಹತ್ತಿಯ ಕಡೆಗೆ ಸೆಳೆಯಿತು” ಎಂದು ಮುಂದುವರೆಸಿದರು ಇಲ್ಲಿಯ ಇನ್ನೋರ್ವ ರೈತ ಸಂತೋಷ ಕುಮಾರ ದಂಡಸೇನಾ. “ಮೊದಮೊದಲು ಖುಷಿಯೆನಿಸಿತು, ಹಣ ಮಾಡಿದೆವು. ಆದರೆ ಈಗ ಬರಿಯ ಸಂಕಟ ಮತ್ತು ನಷ್ಟ ಅಷ್ಟೆ.” ಎಂದರು. “ನಾವು ಹಾಳಾದೆವು, ಸಾಹುಕಾರರು (ಲೇವಾದೇವಿಯವರು) ಉದ್ದಾರವಾದರು.”

ನಾವು ಹಳ್ಳಿಯವರೊಡನೆ ಮಾತನಾಡುತ್ತಿರುವಾಗಲೆ ಕಡು ಹಸಿರು ಬಣ್ಣದ ಜಾನ್ ಡೀರೆ ಟ್ರಾಕ್ಟರುಗಳು ಹಳ್ಳಿರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದವು. ಬಿಟಿ ಹತ್ತಿಯ ಜಾಹೀರಾತುಳ್ಳ ಬೀಜ ಕಂಪನಿಯ ಒಡಿಯಾ ಭಾಷೆಯ ಪೋಸ್ಟರುಗಳನ್ನು ಅಲ್ಲಿನ ದೇವಾಲಯದ ಆವರಣದ ಹೊರಗೋಡೆಗಳ ಮೇಲೆ ಅಂಟಿಸಿದ್ದರು. ಹಳ್ಳಿಯ ಚೌಕಿಯ ಸುತ್ತ ಹೊಲದಲ್ಲಿ ಉಳುವ, ಬಿತ್ತುವ ಸಲಕರಣೆಗಳು ಬಿದ್ದುಕೊಂಡಿದ್ದವು.

PHOTO • Chitrangada Choudhury

ಮೇಲಿನ ಎಡಚಿತ್ರ: ಗುಣುಪುರ ಬ್ಲಾಕಿನಲ್ಲಿ ಅನಂತದವರೆಗೆ ಕಾಣುವ ಜಿಎಂ ಹತ್ತಿಯ ಏಕಬೆಳೆ. ಮೇಲಿನ ಬಲಚಿತ್ರ: ಖೈರಾ ಹಳ್ಳಿಯಲ್ಲಿ 10-15 ವರ್ಷಗಳ ಕೆಳಗೆ ಹತ್ತಿ ಬೆಳೆಯಲಾರಂಭಿಸಿದ ಮೇಲೆ ಅವರು ತೀವ್ರ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಮತ್ತು ಹತ್ತಿಯನ್ನು ಬಿತ್ತದ ಹೊರತು ಲೇವಾದೇವಿಯವರಿಂದ ಹೊಸ ಸಾಲ ಸಿಗುವುದಿಲ್ಲ ಎನ್ನುತ್ತಾರೆ ರೈತರು. ಕೆಳಗಿನ ಚಿತ್ರಗಳು: ಹತ್ತಿ ಬೀಜಗಳ ಒಡಿಯಾ ಜಾಹೀರಾತುಗಳನ್ನು ಮರಕ್ಕೆ ಮೊಳೆ ಹೊಡೆದು ಸಿಕ್ಕಿಸಿರುವುದು, ಮತ್ತು ಹಳ್ಳಿಯ ದೇವಾಲಯದ ಆವರಣ ಗೋಡೆಗಳ ಮೇಲೆ ಇನ್ನೂ ಹೆಚ್ಚು ಹತ್ತಿಯ ಬೀಜಗಳ ಜಾಹೀರಾತುಗಳನ್ನು ಅಂಟಿಸಿರುವುದು

“ಬೀಜ ಮತ್ತು ಇತರೆ ಒಳಸುರಿಗಳ ಬೆಲೆ ಹೆಚ್ಚಾಗಿರುವುದು, ಇತ್ತ ಫಸಲಿನ ಮಾರಾಟ ಬೆಲೆ ಸ್ಥಿರವಾಗಿಲ್ಲದಿರುವುದು; ಮಧ್ಯವರ್ತಿಗಳು ಲಾಭವನ್ನು ಕದಿಯುವುದರಿಂದ ಬಹುತೇಕ ಹತ್ತಿ ಬೆಳೆಗಾರರು ಸಾಲಗಾರರಾಗಿದ್ದಾರೆ” ಈ ಭಾಗದ ಸಾಂಪ್ರದಾಯಿಕ ಕೃಷಿಕರಾದ ದೇವಲ ದೇವ್ ವಿವರಿಸಿದರು. ರಾಯಗಡದಲ್ಲಿ ಬಹುತೇಕ ರೈತರಿಗೆ ಸಿಗುತ್ತಿರುವುದು ಮಾರುಕಟ್ಟೆ ಬೆಲೆಯ ಶೇ. 20ರಷ್ಟು ಮಾತ್ರ (ಅವರ ಬೆಳೆಗಳಿಗೆ).

ಇಷ್ಟೊಂದು ನಷ್ಟವಾಗುತ್ತಿದ್ದರೂ ಇನ್ನೂ ಹತ್ತಿಯನ್ನೇ ಬೆಳೆಯುತ್ತಿರುವುದೇಕೆ? “ನಾವು ಸಾಹುಕಾರರ ಸಾಲದ ಕುಣಿಕೆಯಲ್ಲಿ ಸಿಕ್ಕಿಬಿದ್ದಿದ್ದೇವೆ.” ಎಂದರು ಶಬರ. “ಒಂದು ವೇಳೆ ನಾವು ಹತ್ತಿಯನ್ನು ಬಿತ್ತದೆ ಇದ್ದರೆ, ಅವರು ನಮಗೆ ಸಾಲ ಕೊಡುವುದಿಲ್ಲ” ದಂಡಸೇನ ಮುಂದುವರೆಸಿದರು, “ಒಂದು ವೇಳೆ, ಈಗ ಭತ್ತವನ್ನೇ ಹಾಕಿದೆವು ಎಂದುಕೊಳ್ಳಿ, ನಮಗೆ ಸಾಲ ಸಿಗುವುದಿಲ್ಲ. ಹತ್ತಿಗೆ ಮಾತ್ರ”

“ರೈತರಿಗೆ ಈ ಬೆಳೆಯನ್ನು ಬೆಳೆಯುವುದು ಹೇಗೆ ಎಂಬುದೇ ಗೊತ್ತಿಲ್ಲ,” ದೇವ್ ಅವರ ಜೊತೆಯಲ್ಲಿ ಕೆಲಸ ಮಾಡುವ ದೇವದುಲಾಲ್ ಭಟ್ಟಾಚಾರ್ಯ ನಮಗೆ ಹೇಳಲು ಶುರುಮಾಡಿದರು. “ಬಿತ್ತುವುದರಿಂದ ಹಿಡಿದು ಕೊಯ್ಯುವವರೆಗೆ ಸ್ವಂತ ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ಅರಿಯರು. ಪ್ರತಿ ಹಂತದಲ್ಲೂ ಅಂಗಡಿಯವರನ್ನು ನೆಚ್ಚಿಕೊಂಡಿದ್ದಾರೆ. (ಆದಾಗ್ಯೂ) ಇವರು ಜಮೀನಿನ ಮಾಲೀಕರು. ನಾವು ಇವರನ್ನು ರೈತರೆಂದು ಕರೆಯುವುದೋ, ಇಲ್ಲ ತಮ್ಮದೇ ಹೊಲದಲ್ಲಿ ಕೆಲಸ ಮಾಡುವ ಜೀತದಾಳುಗಳೆಂದು ಕರೆಯುವುದೋ?

ದೇವ್ ಮತ್ತು ಅವರ ಸಹೋದ್ಯೋಗಿಗಳು ಗುರುತಿಸುವಂತೆ ಬಹುಶಃ ಈ ಹತ್ತಿ ಬೆಳೆಯುವುದರಿಂದ ಆಗುತ್ತಿರುವ ದುಷ್ಪರಿಣಾಮವೆಂದರೆ ಇಲ್ಲಿನ ಸ್ಥಳೀಯ ಜೀವವೈವಿಧ್ಯ ಮತ್ತು ಅದರೊಂದಿಗೆ ಈ ಭೂಭಾಗದ ಜೀವವೈವಿಧ್ಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಿಕೊಂಡು ಬಂದ ಸಮುದಾಯಗಳ ಜ್ಞಾನ ಭಂಡಾರ ಇವೆರಡೂ ಸವೆದು ಹೋಗುತ್ತಿದೆ.  ಹವಾಗುಣ ವೈಪರೀತ್ಯಗಳ ಅನಿಶ್ಚಿತತೆಗಳನ್ನು ಎದುರಿಸಿ ಪುಟಿದೇಳಬಲ್ಲ ಬೇಸಾಯ ಮತ್ತು ಹವಾಗುಣ ಸಂಕಷ್ಟಗಳಿಗೆ ಅವೆರಡೂ ಪರಿಹಾರವಾಗಬಲ್ಲವು.

“ಹವಾಗುಣ ಬದಲಾವಣೆ” ದೇವ್ ಹೇಳುತ್ತಾ ಹೋದರು “ಇಲ್ಲಿನ ಹವಾಮಾನ ಐಲುಪೈಲಿನಂತೆ ವರ್ತಿಸಲು ಕಾರಣವಾಗಿದೆ. ದೀರ್ಘಕಾಲದ ಮಳೆ ಇಲ್ಲದ ದಿನಗಳು, ವಿಪರೀತ ಅಕಾಲಿಕ ಮಳೆ, ಮತ್ತು ಮತ್ತೆ ಮತ್ತೆ ಮರುಕಳಿಸುವ ಬರವನ್ನು ಒರಿಸ್ಸಾದ ರೈತರು (ಈಗಾಗಲೇ) ಅನುಭವಿಸಿದ್ದಾರೆ.” ಹತ್ತಿಯ ಜೊತೆಗೆ ಇತ್ತೀಚಿನ ಹೊಸ ತಳಿಯ ಭತ್ತ ಮತ್ತು ತರಕಾರಿಗಳು ತಲೆತಲಾಂತರಗಳಿಂದ ಬಂದ ಸಾಂಪ್ರದಾಯಿಕ ಬೆಳೆಗಳ ಜಾಗವನ್ನು ಆಕ್ರಮಿಸಿವೆ. “ಇವು ಇಲ್ಲಿನ ವಾತಾವರಣದ ವೈಪರೀತ್ಯಗಳನ್ನು ಸಹಿಸಿಕೊಳ್ಳುವ ವಂಶವಾಹಿ ಸಾಮರ್ಥ್ಯವನ್ನು ಹೊಂದಿಲ್ಲ. ಅಂದ ಮೇಲೆ ಬೆಳೆಗಳ ಉಳಿವು, ಕಾಯಿಕಟ್ಟುವಿಕೆ, ಫಸಲು ಕೊನೆಗೆ ಆಹಾರ ಭದ್ರತೆ ಎಲ್ಲವೂ ಅನಿಶ್ಚಿತವಾಗಿವೆ.

ಈ ಪ್ರದೇಶದ ಮಳೆ ಮಾಹಿತಿ ಮತ್ತು ರೈತರ ಅಭಿಪ್ರಾಯಗಳು, ಎಲ್ಲವೂ ಹವಾಮಾನ ಬದಲಾವಣೆಯತ್ತ ಬೊಟ್ಟು ಮಾಡುತ್ತಿವೆ. 2014-18ರ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿದ್ದ ಮಳೆಯ ಪ್ರಮಾಣ 1385 ಮಿಮೀ. ಇದು 1996-2000 ರವರೆಗಿನ ಐದು ವರ್ಷಗಳ ಸರಾಸರ 1034 ಮಿಮೀಗಿಂತ ಶೇ. 34ರಷ್ಟು ಹೆಚ್ಚು. (ಭಾರತೀಯ ಹವಾಮಾನ ಇಲಾಖೆ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಗುಣ ಬದಲಾವಣೆ ಸಚಿವಾಲಯ ತೋರಿಸುವ ಮಾಹಿತಿ). ಜೊತೆಗೆ 2019 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭುವನೇಶ್ವರದ ಸಂಶೋಧಕರ ಸಂಶೋಧನೆಗಳು : “ಒರಿಸ್ಸಾದಲ್ಲಿ ಅಧಿಕದಿಂದ ಅತ್ಯಧಿಕ ಮಳೆಯ ದಿನಗಳು, ಜೊತೆಗೆ ಮಳೆರಹಿತ ದಿನಗಳು ಗಣನೀಯವಾಗಿ ಹೆಚ್ಚುತ್ತಿವೆ, ಹಾಗೆಯೇ ಹಗುರದಿಂದ ಸಾಧಾರಣ ಮಳೆಯ ದಿನಗಳು ಮತ್ತು ತೇವದ ದಿನಗಳು ಕಡಿಮೆಯಾಗುತ್ತಿವೆ” ಎಂದು ಹೇಳಿತು.

PHOTO • Chitrangada Choudhury
PHOTO • Chitrangada Choudhury
PHOTO • Chitrangada Choudhury

ಕುನೂಜಿ ಕುಲುಶಿಕ (ಮಧ್ಯದಲ್ಲಿರುವವರು)ರಂತಹ ರೈತರು ಬಿಟಿ ಹತ್ತಿ ಮತ್ತು ಅದರೊಂದಿಗಿನ ಕೃಷಿ ರಾಸಾಯನಿಕಗಳು ಅವರ ನಾಟಿ ತಳಿಯ ಬೀಜಗಳ ಅಸ್ತಿತ್ವದ ಮೇಲೆ (ಎಡಚಿತ್ರ) ಮತ್ತು ಮಣ್ಣಿನ ಮೇಲೆ ಮತ್ತು ಹೊಲದಲ್ಲಿನ ವಿವಿಧ ಜೀವಿಗಳ ಮೇಲೂ ಮಾಡಬಹುದಾದ ಪರಿಣಾಮಗಳ ಕುರಿತು ಕಳವಳಗೊಂಡಿದ್ದಾರೆ

“ಕಳೆದ ಮೂರು ವರ್ಷಗಳಿಂದ… ಮುಂಗಾರು ತಡವಾಗಿ ಬರುತ್ತಿದೆ,” ರೈತಮಹಿಳೆ ಮತ್ತು ಪಕ್ಕದ ಕೋರಾಪುಟ್ ಜಿಲ್ಲೆಯ ಹೋರಾಟಗಾರ್ತಿಯೂ ಆದ ಶರಣ್ಯ ನಾಯಕ್ ಹೇಳುತ್ತಾರೆ. “ಮುಂಗಾರಿನ ಮೊದಲ ಪಾದದಲ್ಲಿ ಕಡಿಮೆ ಮಳೆಯಾಗುತ್ತದೆ, ನಂತರ ಮಧ್ಯದ ಪಾದದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ ಮತ್ತು ಮಳೆಗಾಲ ಕೊನೆಯಾಗುವ ಹೊತ್ತಿಗೆ ವಿಪರೀತ ಮಳೆ ಬೀಳುತ್ತದೆ.” ಅಂದರೆ ಆರಂಭದಲ್ಲಿ ಬಿತ್ತುವುದು ತಡವಾಗುತ್ತದೆ. ನಂತರ ಮಧ್ಯಾವಧಿಯ ಬೆಳವಣಿಗೆಯ ಸಮಯದಲ್ಲಿ ಅಗತ್ಯವಾದ ಸೂರ್ಯನ ಬೆಳಕು ಸಿಗುವುದಿಲ್ಲ. ಕೊನೆಯಲ್ಲಿ ವಿಪರೀತ ಮಳೆಬಂದು ಸುಗ್ಗಿಯನ್ನು ಹಾಳುಮಾಡುತ್ತದೆ.

“ಈ ಭಾಗದ ಮಳೆಗಾಲವು ಸಾಮಾನ್ಯವಾಗಿ ಜೂನ್ ಮಧ್ಯದಿಂದ ಅಕ್ಟೋಬರಿನವರೆಗೆ ಇರುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಅದು ವೇಳೆ ತಪ್ಪುತ್ತಿದೆ.” ಎನ್ನುವುದನ್ನು ಈ ಭಾಗದಲ್ಲಿ ಆಹಾರ ಮತ್ತು ಕೃಷಿಗಾಗಿ ಕೆಲಸ ಮಾಡುತ್ತಿರುವ ‘ಲಿವಿಂಗ್ ಫಾರ್ಮ್ಸ್’ ಎಂಬ ಸರಕಾರೇತರ ಸಂಸ್ಥೆಯ ದೇವಜೀತ್ ಸಾರಂಗಿ ಒಪ್ಪುತ್ತಾರೆ. ಈ ಎಲ್ಲ ಐಲುಪೈಲು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲು ಈಗ ಹತ್ತಿಗಿಂತ ಸಾಂಪ್ರದಾಯಿಕ ಆಹಾರ ಬೆಳೆಗಳನ್ನು ಮುಖ್ಯವಾಗಿ ಒಳಗೊಂಡ ಒರಿಸ್ಸಾದ ಬಹುಬೆಳೆ ಪದ್ದತಿ ಹೆಚ್ಚು ಸೂಕ್ತ ಎಂದು ಸಾರಂಗಿ ಮತ್ತು ನಾಯಕ್, ಇಬ್ಬರೂ ಪ್ರತಿಪಾದಿಸುತ್ತಾರೆ.

“ನಮ್ಮ ಅನುಭವದಲ್ಲಿ ಬಹುಬೆಳೆಯ ರೈತರು ಇಂತಹ ಹವಾಮಾನ ವೈಪರೀತ್ಯಗಳನ್ನು ಹೆಚ್ಚು ಸಮರ್ಥವಾಗಿ ನಿಭಾಯಿಸುತ್ತಾರೆ” ಎಂದು ಸಾರಂಗಿ ಹೇಳುತ್ತಾರೆ. “ಬಿಟಿ ಹತ್ತಿಯ ಒಂದೇ ಬೆಳೆಯ ಮೂಲಕ ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿರುವ ರೈತರು ಟೈಂ ಬಾಂಬಿನ ಮೇಲೆ ಕುಳಿತಿದ್ದಾರೆ”

*****

ಹೊಸ ಹೊಸ ವಿಧಾನಗಳು ಬಂದರೂ ಸಹ ಈ ಹೊಸ ಜಿಎಂ ಏಕಬೆಳೆ ಹೆಚ್ಚುತ್ತಿರುವುದು ಆಹಾರ ಭದ್ರತೆಗೆ ಮತ್ತು ಬೇಸಾಯದ ಸ್ವಾಯತ್ತತೆಗೆ ಅಪಾಯ ಒಡ್ಡುತ್ತಿರುವುದನ್ನು ಬಹುಪಾಲು ರೈತರು ಅರ್ಥಮಾಡಿಕೊಂಡಿದ್ದಾರೆ. ಆದರೆ ಇನ್ನೂ ಹಲವರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಬೇಸಾಯವನ್ನು ಕೈಬಿಡಬಾರದೆಂದು ಒತ್ತಿ ಹೇಳುತ್ತಾರೆ. ನಿಯಮಗಿರಿ ತಪ್ಪಲಿನ ಕೆರಂದಿಗುಡ ಹಳ್ಳಿಯಲ್ಲಿ ನಾವು ಮಾತನಾಡಿಸಿದ ಕೊಂಡ ಆದಿವಾಸಿ ಸಮುದಾಯದ ಮಹಿಳೆ ಕುನೂಜಿ ಕುಲುಶಿಕರವರು ತಮ್ಮ ಮಗ ಸುರೇಂದ್ರ ಈ ವರ್ಷ ಹತ್ತಿ ಬೆಳೆಯದಂತೆ ತಡೆದಿದ್ದಾರೆ.

ಬೆಟ್ಟದ ತಪ್ಪಲಿನಲ್ಲಿ ಕಾಡು ಸವರಿ ಸ್ಥಳಾಂತರ ಬೇಸಾಯ ಮಾಡುವ ಹೊಲದಲ್ಲಿ ಅವರು ಬರಿಗಾಲಲ್ಲಿಯೇ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಕುಪ್ಪಸವಿಲ್ಲದ ಮೊಣಕಾಲವರೆಗೆ ಸೀರೆಯುಟ್ಟು, ಕೂದಲನ್ನೆಲ್ಲ ಹಿಂದಕ್ಕೆಳೆದು ಒಂದು ಬದಿಗೆ ಗಂಟುಹಾಕಿದ್ದ ಕುನೂಜಿಯವರು ನೋಡುವುದಕ್ಕೆ ಸರಕಾರಗಳು, ನಿಗಮಗಳು ಮತ್ತು ಸರಕಾರೇತರ ಸಂಸ್ಥೆಗಳು ಅವರನ್ನು ‘ಬಡತನ’ದಿಂದ ಮೇಲೆತ್ತುವ ಭರವಸೆಯ ಜಾಹೀರಾತಿನಲ್ಲಿ ತೋರಿಸುವ ಆದಿವಾಸಿ ಮಹಿಳೆಯ ಪ್ರತಿರೂಪದಂತಿದ್ದರು. ಆದರೂ ದೇವ್ ಹೇಳುವಂತೆ ಕುನೂಜಿಯವರಂತಹ ಜನರ ಉನ್ನತ ಅರಿವು ಮತ್ತು ಜಾಣ್ಮೆಗಳು ಕಾಣೆಯಾಗುತ್ತಿರುವುದು ಹವಾಗುಣ ಬದಲಾವಣೆಯ ಮುಷ್ಟಿಯಲ್ಲಿ ಸಿಲುಕಿರುವ ಪ್ರಪಂಚದ ವಿನಾಶಕ್ಕೆ ದಾರಿಯಾಗುತ್ತದೆ.

“ನಾವು ಒಂದು ವರ್ಷ ನಮ್ಮ (ಸ್ವಂತ) ಬೆಳೆಗಳನ್ನು ಹಾಕದೆ ಬಿಟ್ಟರೆ,” ಹತ್ತಿ ಬೆಳೆಯುವುದರ ಕುರಿತಾದ ಭಯದ ಬಗ್ಗೆ ಕುನೂಜಿ ಹೇಳಿದರು, “ಆ ಬೀಜಗಳನ್ನು ಮತ್ತೆ ಎಲ್ಲಿಂದ ತರುವುದು? ನಾವು ಅವುಗಳನ್ನು ಕಳೆದುಕೊಳ್ಳುವ ಭಯಂಕರ ಆಟ ಆಡುತ್ತಿದ್ದೇವೆ. ಕಳೆದ ವರ್ಷ, ನಾವು ಮಕ್ಕ (ಜೋಳ) ಹಾಕಬೇಕಿದ್ದ ಹೊಲದಲ್ಲಿ ಸುರೇಂದ್ರ ಹತ್ತಿ ಬೆಳೆದನು. ನಾವು ಇದೇ ರೀತಿ ಹೋದರೆ ಮುಂದೆ ಬಿತ್ತಲು ನಮ್ಮ ಸ್ವಂತದ ಬೀಜದ ಜೋಳವೇ ಇರುವುದಿಲ್ಲ”

'ನಾವು ಒಂದು ವರ್ಷ ನಮ್ಮ (ಸ್ವಂತ) ಬೆಳೆಗಳನ್ನು ಹಾಕದೆ ಬಿಟ್ಟರೆ,' ಹತ್ತಿ ಬೆಳೆಯುವುದರ ಕುರಿತಾದ ಭಯದ ಬಗ್ಗೆ ಕುನೂಜಿ ಹೇಳಿದರು, ʼಆ ಬೀಜಗಳನ್ನು ಮತ್ತೆ ಎಲ್ಲಿಂದ ತರುವುದು? ನಾವು ಅವುಗಳನ್ನು ಕಳೆದುಕೊಳ್ಳುವ ಭಯಂಕರ ಆಟ ಆಡುತ್ತಿದ್ದೇವೆ.ʼ

ವಿಡಿಯೋ ನೋಡಿ: ‘ಹತ್ತಿಯ ಬೀಜಗಳು ನನ್ನವಲ್ಲ’ ಕೊಂಡ ಸಮುದಾಯದ ರೈತಮಹಿಳೆ ಕುನೂಜಿ ಹೇಳುತ್ತಾರೆ ಮತ್ತು ಅವರದೇ ಸಾಂಪ್ರದಾಯಿಕ ವಿವಿಧ ಆಹಾರ ಬೆಳೆಗಳನ್ನು ತೋರಿಸುತ್ತಾರೆ

ನಾವು ನಾಟಿ ಬೀಜಗಳ ಬಗ್ಗೆ ಕೇಳಿದಾಗ ಕುನೂಜಿಯವರ ಉತ್ಸಾಹದ ಎಲ್ಲೆ ಮೀರಿದ್ದು ಕಾಣುತ್ತಿತ್ತು. ತಕ್ಷಣ ತಾವೇ ಮನೆಯೊಳಗೆ ಓಡಿದರು. ಬಿದಿರಿನ ಬುಟ್ಟಿಗಳಲ್ಲಿ, ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಅಥವಾ ಬಟ್ಟೆಯ ಚೀಲಗಳಲ್ಲೋ ಅವರು ತುಂಬಿಸಿಟ್ಟಿದ್ದ, ತಮ್ಮ ಕುಟುಂಬವು ಬೆಳೆಯುವ ಬಗೆಬಗೆಯ ಬೆಳೆಸುಗಳೊಂದಿಗೆ ಹೊರಬಂದರು. ಮೊದಲಿನದ್ದು: ಎರಡು ತರದ ತೊಗರಿ, “ಭೂಮಿಯ ಇಳಿಜಾರನ್ನು ನೋಡಿ ಬಿತ್ತುವಂತದು.” ನಂತರದ್ದು: ಎತ್ತರದ ದಿಬ್ಬದಲ್ಲಿ ಬೆಳೆಯುವ ಭತ್ತ, ಸಾಸಿವೆ, ಹೆಸರು, ಉದ್ದು ಮತ್ತು ಎರಡು ತರದ ಚೊಟ್ಟಿನ ಹುರುಳಿ. ತದನಂತರದ್ದು: ಎರಡು ತರದ ರಾಗಿ, ಜೋಳ, ಹುಚ್ಚೆಳ್ಳಿನ ಬೀಜಗಳು. ಕೊನೆಯದಾಗಿ: ಸಿಯಾಲಿ ಬೀಜದ ಚೀಲ (ಒಂದು ಕಾಡು ಜಾತಿಯ ಆಹಾರ.) “ವಿಪರೀತ ಮಳೆ ಬಂದರೆ, ನಾವು ಹೊರಹೋಗಲಾಗದೆ ಮನೆಯಲ್ಲೇ ಉಳಿಯಬೇಕಾಗುತ್ತದೆ, ಆಗ ಇವನ್ನು ಹುರಿದು ತಿನ್ನುತ್ತೇವೆ” ಎಂದು ಹೇಳಿ ನಮಗೂ ಒಂದು ಹಿಡಿ ಕೊಟ್ಟರು.

“ಕೊಂಡ ಮತ್ತು ಇತರೆ ಬುಡಕಟ್ಟುಗಳ ಕೃಷಿ- ಪಾರಿಸರಿಕ ಅರಿವು ಎಷ್ಟು ನುರಿತದ್ದೆಂದರೆ, ಅವರ ಕುಟುಂಬಗಳು ಧಾನ್ಯಗಳು, ಬೇಳೆಕಾಳುಗಳು, ಗೆಡ್ಡೆಗಳು, ಬೇರುಗಳು, ಕಾಳುಗಳು- 70-80 ಬಗೆಯ ಬೆಳೆಗಳನ್ನು ಒಂದು ವರ್ಷದಲ್ಲಿ ಒಂದೇ ಹೊಲದಲ್ಲಿ ಬೆಳೆಯಬಲ್ಲವರಾಗಿದ್ದರು.” ಎನ್ನುತ್ತಾರೆ ಲಿವಿಂಗ್ ಫಾರ್ಮ್ಸ್ ನ ಪ್ರದೀಪ್ ಪಾತ್ರ. “ಈಗಲೂ ಹುಡುಕಿದರೆ ಎಲ್ಲೋ ಕೆಲವು ಕಡೆ ಸಿಗಬಹುದು, ಆದರೆ ಒಟ್ಟು ನೋಡುವುದಾದರೆ ಕಳೆದ 20 ವರ್ಷಗಳ ಕೆಳಗೆ ಇಲ್ಲಿಗೆ ಹತ್ತಿ ಬಂದದ್ದು, ಹರಡಿದ್ದು ಇಲ್ಲಿನ ಬೀಜ ವೈವಿಧ್ಯತೆಯನ್ನು ನಶಿಸುವಂತೆ ಮಾಡಿದೆ ಎಂಬುದು ಮಾತ್ರ ಸತ್ಯ.”

ಕುನೂಜಿಯವರು ರಾಸಾಯನಿಕ ಒಳಸುರಿಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸುತ್ತಾರೆ. ಆದಿವಾಸಿ ಕುಟುಂಬಗಳು ಅವರ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯಲು ಯಾವಾಗಲೋ ಒಮ್ಮೆ ಬಳಸಿದರೆ, ಹತ್ತಿಯು ಅದಿಲ್ಲದೆ ಬೆಳೆಯುವುದೇ ಇಲ್ಲ. “ಸುರೇಂದ್ರನು ಹತ್ತಿಗೆ ಹಾಕುವ ಆ ಎಲ್ಲ ಕೀಟನಾಶಕಗಳು, ಆ ಗೊಬ್ಬರಗಳು ಅವೆಲ್ಲವೂ ಮಣ್ಣನ್ನು ಹಾಳುಗೆಡವುದಿಲ್ಲವೆ, ಅದರಲ್ಲಿರುವುದನ್ನೆಲ್ಲ ಕೊಲ್ಲುವುದಿಲ್ಲವೆ? ನನ್ನ ಪಕ್ಕದ ಹೊಲದಲ್ಲಿ ಅವರು ಹತ್ತಿಯ ನಂತರ ರಾಗಿ ಹಾಕಿದ ಮೇಲೆ ಏನಾಗಿದೆಯೆಂಬುದನ್ನು ನನ್ನ ಸ್ವಂತ ಕಣ್ಣುಗಳಿಂದಲೇ ನೋಡಿದ್ದೇನೆ. ಅದು ಚೆನ್ನಾಗಿ ಬರುವುದಿಲ್ಲ, ಕುರುಟು ಬಿದ್ದಿದೆ.”

ಕಳೆನಾಶಕ ನಿರೋಧಕ ಹತ್ತಿ ಬೀಜಗಳಿಗೆ ಭಾರತದಲ್ಲಿ ಅನುಮತಿ ಇಲ್ಲ, ಆದರೆ ಇಲ್ಲಿ ರಾಯಗಡದಾದ್ಯಂತ ಅವುಗಳ ಜೊತೆಗೆ ಪ್ರಾಯಶಃ ‘ ಕ್ಯಾನ್ಸರ್ ಕಾರಕ ’ ಕಳೆನಾಶಕವಾದ ಗ್ಲೈಫೋಸೇಟಿನಂತಹ ರಾಸಾಯನಿಕಗಳೂ ಸೇರಿಕೊಂಡು ಕಾಳ್ಗಿಚ್ಚಿನಂತೆ ಹಬ್ಬುತ್ತಿವೆ. “ಕಳೆನಾಶಕಗಳನ್ನು ನಿರಂತರವಾಗಿ ಬಳಸುತ್ತಿರುವುದರಿಂದ,” ದೇವಲ್ ದೇವ್ ಮುಂದುವರೆಸಿದರು “ಕಳೆಗಳ ಜೊತೆಗೆ ಅಕ್ಕಪಕ್ಕದ ಬೇರೆಯ ಗಿಡಗಳು ಮತ್ತು ಹುಲ್ಲುಗಳು ಹೊಲದಿಂದ ಮಾಯವಾಗುತ್ತಿವೆ. ಬೇರೆಗಿಡಗಳನ್ನು ಅವಲಂಬಿಸಿರುವ ಚಿಟ್ಟೆಗಳು ಮತ್ತು ದುಂಬಿಗಳ ಸಂತಾನ ಕಡಿಮೆಯಾಗಲು ಕಾರಣವಾಗಿದೆ.

“ಈ ಪ್ರದೇಶದ ಜೀವಾವರಣದ ಅರಿವು (ಮತ್ತು ಇಲ್ಲಿನ ಜೀವವೈವಿಧ್ಯದ ಅರಿವು) ನಶಿಸುತ್ತಿರುವುದು ಅಪಾಯದ ಗಂಟೆಯಾಗಿದೆ. ಹೆಚ್ಚು ಹೆಚ್ಚು ರೈತರು ಅತಿಯಾಗಿ ಕೀಟನಾಶಕಗಳನ್ನು ಬೇಡುವ ಏಕಬೆಳೆಗಳಿಗಾಗಿ ಅವರ ಸಾಂಪ್ರದಾಯಿಕ ಬಹುಬೆಳೆ ಮತ್ತು ಅರಣ್ಯ ಕೃಷಿ ಪದ್ದತಿಗಳನ್ನು ತೊರೆಯುತ್ತಿದ್ದಾರೆ. ಹತ್ತಿ ಬೆಳೆಗಾರರೂ ಕಳೆನಾಶಕಗಳನ್ನು ಬಳಸುತ್ತಿದ್ದಾರೆ. ಅವರಲ್ಲಿ ಬಹುತೇಕರಿಗೆ ಆ ಕೀಟಗಳಲ್ಲಿ ಪೀಡಕಗಳಾವು ಮತ್ತು ಯಾವು ಅಲ್ಲ ಎಂಬುದೇ ಗೊತ್ತಿಲ್ಲ. ಒಟ್ಟು ಎಲ್ಲ ಕೀಟಗಳನ್ನು ಸಾಯಿಸಲು ಸಿಂಪಡನೆ ಮಾಡುತ್ತಾರೆ.”

“ಹತ್ತಿ ಬೆಳೆಗೆ ಬದಲಾಯಿಸಿಕೊಂಡ ಮೇಲೆ,” ಶರಣ್ಯ ನಾಯಕ್ ಹೇಳಿದರು, “ಪ್ರತಿಯೊಂದು ಕೀಟ, ಹಕ್ಕಿ, ಪ್ರಾಣಿಗಳನ್ನು ಕೇವಲ ಬೆಳೆಯ ಶತೃ ಎಂಬ ಒಂದೇ ಕನ್ನಡಕದಿಂದ ನೋಡಲಾಗುತ್ತಿದೆ. ರಾಸಾಯನಿಕ ಒಳಸುರಿಗಳನ್ನು ವಿವೇಚನೆಯಿಲ್ಲದೆ ಬಳಸಲು ಇದೊಂದು ಶುದ್ದ ನೆಪ ಅಷ್ಟೆ”

ಜನರು ಇದರ ದುಷ್ಪರಿಣಾಮಗಳನ್ನು ನೋಡುತ್ತಿರುವುದು ಕುನೂಜಿಯವರಿಗೆ ಗೊತ್ತು, ಆದರೂ ಜನರು ಹತ್ತಿಯನ್ನು ಬಿಡುತ್ತಿಲ್ಲ. “ಅವರು ಒಮ್ಮೆಲೇ ಇಷ್ಟೊಂದು ಹಣ ನೋಡುತ್ತಾರೆ” ಎಂದು ಎರಡೂ ಕೈಯಗಲಿಸಿ ತೋರಿಸಿ ಹೇಳಿದರು. “ಮತ್ತೆ ಮತ್ತೆ ಮರುಳಾಗುತ್ತಾರೆ”

PHOTO • Chitrangada Choudhury

ಬಿಟಿ ಹತ್ತಿಯ ಏಕಬೆಳೆ (ಮೇಲಿನ ಸಾಲು) ಮತ್ತು ಅದರ ಕೃಷಿ ರಾಸಾಯನಿಕಗಳು (ಕೆಳಗಿನ ಸಾಲು) ಇಲ್ಲಿನ ಶ್ರೀಮಂತ ಜೀವವೈವಿಧ್ಯಕ್ಕೆ ಮತ್ತೆಹುಟ್ಟದಂತೆ ಅಪಾಯವನ್ನು ಒಡ್ಡುತ್ತಿವೆ

ಹತ್ತಿಯು ಸಾಂಪ್ರದಾಯಿಕ ಬೆಳೆಗಳನ್ನು ಹೊರದಬ್ಬಿದ ಮೇಲೆ ಬೀಜಗಳನ್ನು ಹಂಚಿಕೊಳ್ಳುವ ಮತ್ತು ಕೊಡುಕೊಳ್ಳುವ ಕಟ್ಟುಪಾಡುಗಳು, ಹೊಲಗಳಲ್ಲಿ ಒಟ್ಟಾಗಿ ಎತ್ತುಗಳಿಂದ ಉಳುವುದು, ಮನೆಮಂದಿ ಕೆಲಸ ಮಾಡುವುದೂ ಸಹ ನಿಂತುಹೋಗಿದೆ” ಎನ್ನುತ್ತಾರೆ ಪಾತ್ರ. “ಈಗ ರೈತರ ಗಮನವಿರುವುದು ಲೇವಾದೇವಿಯವರು ಮತ್ತು ವ್ಯಾಪಾರಸ್ತರ ಕಡೆಗೆ”

ಜಿಲ್ಲೆಯ ಕೃಷಿ ಅಧಿಕಾರಿಯೊಬ್ಬರು (ಹೆಸರು ಹೇಳಲು ಇಚ್ಚಿಸಲಿಲ್ಲ) ಪಾತ್ರಾರ ಈ ಮಾತಿಗೆ ಸಹಮತಿ ವ್ಯಕ್ತಪಡಿಸುತ್ತಾರೆ. 1960ರ ಸಮಯದಲ್ಲಿ ಸರಕಾರವೇ ಹಳ್ಳಿ ಹಳ್ಳಿಗಳಲ್ಲಿ ಹತ್ತಿಯನ್ನು ತಂದು, ತಾನೇ ಪ್ರೋತ್ಸಾಹಿಸಿತು ಎಂಬುದನ್ನು ಒಪ್ಪುತ್ತಾರೆ. ಇದರ ನಂತರ ಆಂಧ್ರಪ್ರದೇಶದ ಖಾಸಗಿ ಬೀಜ ಮತ್ತು ಕೃ಼ಷಿರಾಸಾಯನಿಕ ಒಳಸುರಿಗಳ ಮಾರಾಟಗಾರರು ಜೋರಾಗಿಯೇ ಬೆಂಬಲಿಸಿದರು. ನಕಲಿ ಮತ್ತು ಕಾನೂನು ಬಾಹಿರ ಬೀಜಗಳ ಮೋಸ ಮತ್ತು ಅತಿಯಾದ ರಾಸಾಯನಿಕ ಬಳಕೆಗಳ ಸಮಸ್ಯೆ ಸರಕಾರಕ್ಕೆ ತಲೆನೋವಾದಾಗ ಏನೋ ಸ್ವಲ್ಪ ಮಾಡಿದಂತೆ ಮಾಡಿ ಕೈತೊಳೆದುಕೊಳ್ಳಲಾಗುತ್ತದೆ ಎಂಬುದನ್ನು ಅಧಿಕಾರಿಯೇ ಒಪ್ಪಿಕೊಂಡರು. “ಹತ್ತಿ ಈಗ ತಲೆನೋವಾಗಿ ಪರಿಣಮಿಸಿದೆ” ಎಂದರು.

ಆದರೂ ಹಣದ ಕಡೆಗಿನ ಸೆಳೆತ ಅದರಲ್ಲೂ ಈಗಿನ ಯುವರೈತರಿಗೆ ತುಂಬಾ ಜಾಸ್ತಿ. ತಮ್ಮ ಮಕ್ಕಳಿಗೆ ಇಂಗ್ಲಿಶ್ ಶಿಕ್ಷಣ ಕೊಡಿಸುವ, ಸ್ಮಾರ್ಟ್ ಫೋನ್ ಮತ್ತು ಮೋಟಾರು ಬೈಕುಗಳ ಮೇಲಿನ ಆಸೆ, ಮತ್ತು ಅಪ್ಪನ ಕಾಲದ ಬೇಸಾಯದ ಬಗೆಗಿನ ಅಸಹನೆಗಳು ಹತ್ತಿಯ ಗಂಡಾಂತರವನ್ನು ಮೈಮೇಲೆ ಎಳೆದುಕೊಳ್ಳುವಂತೆ ಮಾಡಿವೆ. ಈ ವರ್ಷ ಮಾರ್ಕೆಟ್ ಬಿದ್ದು ಹೋದರೂ ಮುಂದಿನ ವರ್ಷ ರೇಟು ಸಿಗುತ್ತದೆ. ಆದರೆ ಜೀವಾವರಣ ನಮ್ಮನ್ನು ಕ್ಷಮಿಸಲಾರದು.

“ಪದೇ ಪದೇ ಆಸ್ಪತ್ರೆಗೆ ಹೋಗುವವರ ಮತ್ತು ಹೊಸ ಹೊಸ ರೀತಿಯ ಕಾಯಿಲೆಗಳ ಸಂಖ್ಯೆ ಹೆಚ್ಚುತ್ತಿರುವುದು ದಾಖಲಾಗುತ್ತಿಲ್ಲ. ವಿವಿಧ ನರರೋಗಗಳು ಮತ್ತು ಮೂತ್ರಪಿಂಡ ಕಾಯಿಲೆಗಳಿಂದ ನರಳುತ್ತಿರುವವರ ಸಂಖ್ಯೆ ತುಸು ಹೆಚ್ಚಿದೆ.” ಎನ್ನುತ್ತಾರೆ ದೇವ್. “ಇದೆಲ್ಲ ಜಿಲ್ಲೆಯಲ್ಲಿ ಅತಿಯಾಗಿ ಬಳಸುತ್ತಿರುವ ಆರ್ಗನೋ ಫಾಸ್ಫೇಟ್ ಕೀಟನಾಶಕಗಳು ಮತ್ತು ಗ್ಲೈಫೋಸೇಟ್ ಕಳೆನಾಶಕಗಳಿಗೆ ಒಡ್ಡಿಕೊಳ್ಳುತ್ತಿರುವುದೇ ಕಾರಣ ಎಂಬುದು ನನ್ನ ಗುಮಾನಿ.”

ನಿರ್ದಿಷ್ಟ ಸಂಶೋಧನೆಗಳಿಲ್ಲದೆ ಇಂತಹ ಕಾರಣಗಳನ್ನು ಸಂಬಂಧಿಸುವುದು ಕಷ್ಟ ಎನ್ನುತ್ತಾರೆ ಬಿಸ್ಸಮಕಟಕ್ಕಿನ ಕ್ರಿಶ್ಚಿಯನ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ 54 ವರ್ಷದ ಡಾ. ಜಾನ್ ಊಮ್ಮನ್. “ಸರಕಾರದ ಗಮನ ಇನ್ನೂ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಕಡೆಗೇ ಇದೆ. ಆದರೆ ಇಲ್ಲಿ ಬುಡಕಟ್ಟು ಸಮುದಾಯದ ಜನರಲ್ಲಿ ಕಾಣಿಸುತ್ತಿರುವ, ವೇಗವಾಗಿ ಹೆಚ್ಚುತ್ತಿರುವ ಕಾಯಿಲೆಗಳೆಂದರೆ ಹೃದಯ ಮತ್ತು ಮೂತ್ರಪಿಂಡ ಸಮಸ್ಯೆಗಳು…. ನಿಜವಾಗಿಯೂ ತೀವ್ರ ಮೂತ್ರಪಿಂಡ ಕಾಯಿಲೆ, ಮತ್ತು ಅವರ ಸಂಖ್ಯೆಯೂ ಹೆಚ್ಚು”

ಅವರು ಗುರುತಿಸುವ ಹಾಗೆ “ಇಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆಗಳು ಡಯಾಲಿಸಿಸ್ ಕೇಂದ್ರಗಳನ್ನು ಶುರು ಮಾಡಿದ್ದಾರೆ, ಮತ್ತು ಅದು ಒಳ್ಳೆಯ ವ್ಯಾಪಾರ ಕೂಡ. ನಾವು ಉತ್ತರ ಹುಡುಕಬೇಕಾದ ಪ್ರಶ್ನೆ ಏನೆಂದರೆ – ಈ ಪ್ರಮಾಣದ ಕಿಡ್ನಿ ವೈಫಲ್ಯಗಳಿಗೆ ಕಾರಣ ಏನು? ಎಂಬುದು”. ನೂರಾರು ವರ್ಷಗಳ ಕಾಲ ಇಲ್ಲಿಯೇ ಬಾಳಿ ಬದುಕಿದ ಸಮುದಾಯಗಳು ತಾವು ನಿರೀಕ್ಷಿಸಿರದ ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತಿರುವ ಅಥವಾ ಬಲವಂತವಾಗಿ ಒಗ್ಗಿಕೊಳ್ಳುತ್ತಿರುವ ಬಗ್ಗೆ ಊಮ್ಮನ್ ಕಳವಳ ವ್ಯಕ್ತಪಡಿಸುತ್ತಾರೆ.

*****

ಮತ್ತೆ ನಿಯಮಗಿರಿ ಬೆಟ್ಟಗಳಲ್ಲಿ ಆ ವಾರದ ಒಂದು ಬೆಚ್ಚನೆಯ ಮುಂಜಾನೆ, ಮಹಾರಾಷ್ಟ್ರ ಮೂಲದ ಎಕ್ಸೆಲ್ ಕ್ರಾಪ್ ಲಿಮಿಟೆಡ್ ತಯಾರಿಸಿದ್ದ, ಗ್ಲೈಫೋಸೇಟಿನ ದ್ರಾವಣದಿಂದ ಮಾಡಿದ್ದ ಗ್ಲೈಸೆಲ್ ನ ಒಂದು ಲೀಟರ್ ಬಾಟಲು ಮತ್ತು ಒಂದು ಲೋಹದ ಬಿಂದಿಗೆಯೊಂದಿಗೆ ತನ್ನ ಹೊಲದ ಕಡೆಗೆ ಹೋಗುತ್ತಿದ್ದ ಮಧ್ಯ ವಯಸ್ಸಿನ ಕೊಂಡ ಸಮುದಾಯದ ಆದಿವಾಸಿ ರೈತರಾದ ಓಬಿ ನಾಗರನ್ನು ನಾವು ಭೇಟಿ ಮಾಡಿದೆವು.

ನಾಗರವರು ಅಂಗಿಯಿಲ್ಲದ ಬರಿ ಬೆನ್ನ ಮೇಲೆ ನೀಲಿ ಬಣ್ಣದ ಕೈಪಂಪಿನ ಸ್ಪ್ರೇಯರೊಂದನ್ನು ಏರಿಸಿಕೊಂಡು ಹೋಗುತ್ತಿದ್ದರು. ಚಿಕ್ಕ ಬೆಟ್ಟದ ಬದಿಯ ತೊರೆಯ ದಡದಲ್ಲಿ ನಿಂತ ಅವರು, ತಮ್ಮ ಬಿಂದಿಗೆಯ ಪಕ್ಕ ಬೆನ್ನ ಹೊರೆಯನ್ನು ಇಳಿಸಿದರು. ಬಿಂದಿಗೆಯಿಂದ, ಸ್ಪ್ರೇಯರಿಗೆ ನೀರು ತುಂಬಿಸಿದರು. ನಂತರ “ಅಂಗಡಿಯವರ ಸೂಚನೆಯಂತೆ” ಎರಡು ಲೋಟದ ತುಂಬಾ ಗ್ಲೈಫೋಸೇಟನ್ನು ಸೇರಿಸಿದರು. ಅದನ್ನು ಜೋರಾಗಿ ಗೂರಾಡಿ, ಸ್ಪ್ರೇಯರಿನ ಮುಚ್ಚಳ ಮುಚ್ಚಿದರು ಮತ್ತು ತಮ್ಮ ಹೊಲದಲ್ಲಿ ಬೆಳೆದಿದ್ದ ಕಳೆಗಿಡಗಳ ಮೇಲೆ ಸಿಂಪಡಿಸತೊಡಗಿದರು.  “ಇನ್ನು ಮೂರು ದಿನದಲ್ಲಿ ಇವೆಲ್ಲ ಸತ್ತುಹೋಗುತ್ತವೆ ಮತ್ತು ಹತ್ತಿಯನ್ನು ಬಿತ್ತಲು ಹೊಲ ಅಣಿಯಾಗಿರುತ್ತದೆ” ಎಂದರು.

PHOTO • Chitrangada Choudhury

ಜುಲೈ ತಿಂಗಳ ಒಂದು ಮುಂಜಾನೆ, ನಿಯಮಗಿರಿ ಬೆಟ್ಟಗಳಲ್ಲಿ, ಬರಿಮೈಯಲ್ಲಿದ್ದ ಓಬಿನಾಗ್ ಬಹುಶಃ ಕ್ಯಾನ್ಸರ್ ಕಾರಕ ಮತ್ತು ಕಳೆನಾಶಕವಾದ ಗ್ಲೈಫೋಸೇಟಿನ ಬಾಟಲಿಯ ಮುಚ್ಚಳ ತೆಗೆದರು. ಅದನ್ನು ಹೊಲದ ಬಳಿಯ ತೊರೆಯಲ್ಲಿ ಹರಿಯುತ್ತಿದ್ದ ನೀರಿನಿಂದ ತೆಳುವಾಗಿಸಿಕೊಂಡರು, ಮತ್ತು ಬಿಟಿ ಹತ್ತಿಯನ್ನು ಬಿತ್ತಲು ಅಣಿಯಾಗುವಂತೆ ಜಮೀನಿಗೆ ಸಿಂಪಡಿಸಿದರು (ಎಡ ಮತ್ತು ಮಧ್ಯದ ಚಿತ್ರ). ಮೂರು ದಿನಗಳ ನಂತರ ಜಮೀನಿನಲ್ಲಿದ್ದ ಗಿಡಗಳೆಲ್ಲ ಒಣಗಿದ್ದವು

ಗ್ಲೈಫೋಸೇಟ್ ಬಾಟಲಿನ ಮೇಲೆ ಇಂಗ್ಲೀಶ್, ಹಿಂದಿ ಮತ್ತು ಗುಜರಾತಿಯಲ್ಲಿದ್ದ ಈ ಎಚ್ಚರಿಕೆ ಸಂದೇಶಗಳಿದ್ದವು: ಆಹಾರ ಪದಾರ್ಥಗಳಿಂದ, ಆಹಾರ ಪದಾರ್ಥಗಳ ಖಾಲಿ ಪಾತ್ರೆಗಳಿಂದ ಮತ್ತು ಪಶು ಆಹಾರದಿಂದ ದೂರವಿಡಿ; ಬಾಯಿ, ಕಣ್ಣು ಮತ್ತು ಚರ್ಮಕ್ಕೆ ಸೋಕಿಸಬೇಡಿ; ಸಿಂಪಡಿಸಿದ ಹಾರುಮಂಜನ್ನು ಉಸಿರಲ್ಲಿ ಎಳೆದುಕೊಳ್ಳಬೇಡಿ; ಗಾಳಿ ಬೀಸುತ್ತಿರುವ ಕಡೆಗೆ ಸಿಂಪಡಿಸಿ; ಸಿಂಪಡಿಸಿದ ನಂತರ ಕಲುಷಿತವಾದ ಬಟ್ಟೆಗಳು ಮತ್ತು ದೇಹದ ಭಾಗಗಳನ್ನು ಚೆನ್ನಾಗಿ ತೊಳೆಯಿರಿ; ಬೆರೆಸುವಾಗ ಮತ್ತು ಸಿಂಪಡಿಸುವಾಗ ಮೈತುಂಬಾ ರಕ್ಷಣಾತ್ಮಕವಾದ ಬಟ್ಟೆ ಧರಿಸಿರಿ.

ಸೊಂಟಕ್ಕೆ ಸುತ್ತಿದ್ದ ಚಿಕ್ಕ ಬಟ್ಟೆಯೊಂದನ್ನು ಬಿಟ್ಟರೆ ನಾಗರು ಬರಿಮೈಯಲ್ಲಿದ್ದರು. ಅವರು ಸಿಂಪಡಣೆ ಮಾಡಿದಂತೆ, ಹನಿಗಳು ಅವರ ಪಾದ ಮತ್ತು ಕಾಲುಗಳ ಮೇಲೆ ಬಿದ್ದವು, ಹಾಗೆಯೇ ಗಾಳಿಯು ಆ ಹಾರುಮಂಜನ್ನು ನಮ್ಮ ಮೇಲೆ, ಹೊಲದ ಮಧ್ಯ ನಿಂತಿದ್ದ ಮರದ ಮೇಲೆ ಮತ್ತು ಅಕ್ಕಪಕ್ಕದ ಹೊಲಗಳ ಮೇಲೂ ಎರಚಿತು. ಹತ್ತಾರು ಮನೆಗಳ ಗುಂಪಿನ ಮತ್ತು ಅಲ್ಲಿನ ಒಂದು ಕೈಪಂಪಿನ ಸರಹದ್ದಿನ ಸುತ್ತಲೂ ಸುತ್ತುವ, ಇತರೆ ಹೊಲಗಳ ಮೂಲಕ ಹೋಗುವ, ಅವರ ಹೊಲದ ಬದಿಯಲ್ಲಿ ಹರಿಯುತ್ತಿದ್ದ ತೊರೆಗೂ ಸೇರಿಕೊಂಡಿತು.

ಮೂರು ದಿನಗಳ ಬಳಿಕ ಮತ್ತೆ ನಾವು ನಾಗರವರ ಹೊಲಕ್ಕೆ ಹೋದೆವು, ಅಲ್ಲೊಬ್ಬ ಸಣ್ಣ ಹುಡುಗ ಹತ್ತಿರದಲ್ಲಿ ಹಸುಗಳನ್ನು ಮೇಯಿಸುತ್ತಿದ್ದುದು ಕಂಡಿತು. ಒಂದು ವೇಳೆ ಅವರು ಸಿಂಪಡಿಸಿರುವ ಗ್ಲೈಫೋಸೇಟ್ ಹಸುಗಳಿಗೆ ತೊಂದರೆ ಮಾಡಬಹುದಲ್ಲವೆ ಎಂದು ನಾಗರನ್ನು ಕೇಳಿದೆವು, ಅವರು ದೃಡನಂಬುಗೆಯಿಂದಲೇ ಹೇಳಿದರು: “ಇಲ್ಲ, ಈಗಾಗಲೆ ಮೂರು ದಿನವಾಗಿದೆಯಲ್ಲ. ನಾನು ಸಿಂಪಡಿಸಿದ ದಿನವೇ ಅವರು ಮೇಯಿಸಿದ್ದರೆ, ಅವು ಕಾಯಿಲೆ ಬೀಳುತ್ತಿದ್ದವು ಮತ್ತು ಬಹುಶಃ ಸತ್ತು ಹೋಗುತ್ತಿದ್ದವು”.

ತನ್ನ ದನಗಳನ್ನು ಹೊಡೆದುಕೊಂಡು ಹೋಗದಿರಲು, ಯಾವ ಹೊಲಕ್ಕೆ ಹೊಸದಾಗಿ ಗ್ಲೈಫೋಸೇಟ್ ಹೊಡೆದಿದ್ದಾರೆ ಎಂದು ನಿನಗೆ ಹೇಗೆ ಗೊತ್ತಾಗುತ್ತದೆ ಎಂದು ಹುಡುಗನನ್ನು ಕೇಳಿದೆವು. “ರೈತರು ತಾವು ಕಳೆನಾಶಕಗಳನ್ನು ಹೊಡೆದರೆ ಅವರೇ ಹೇಳುತ್ತಾರೆ” ಎಂದು ನಿರ್ಲಕ್ಷ್ಯದಿಂದ ಹೇಳಿದನು. ಕಳೆದ ವರ್ಷ ಪಕ್ಕದ ಹಳ್ಳಿಯಲ್ಲಿ ಹೊಸದಾಗಿ ಸಿಂಪಡಿಸಿದ್ದ ಹೊಲದಲ್ಲಿ ದನ ಮೇಯಿಸಿದ ನಂತರ ಕೆಲವು ರಾಸುಗಳು ತೀರಿ ಹೋಗಿದ್ದನ್ನು ನೋಡಿದ್ದೇವೆ ಎಂದು ಹುಡುಗನ ತಂದೆ ಹೇಳಿದರು.

ನಾಗರವರ ಹೊಲದಲ್ಲಿದ್ದ ಬಹುತೇಕ ಹುಲ್ಲು ಒಣಗಿಹೋಗಿತ್ತು. ಅದು ಹತ್ತಿಯ ಬಿತ್ತನೆಗೆ ಸಿದ್ದವಾಗಿತ್ತು.

ಮುಖಪುಟ ಚಿತ್ರ: ರಾಯಗಡದ ಗುಣುಪುರ ಬ್ಲಾಕಿನ ಸವೋರಾ ಆದಿವಾಸಿ ಸಮುದಾಯದ ಗುತ್ತಿಗೆ ರೈತಮಹಿಳೆ, ಮೋಹಿನಿ ಶಬರ ಹೇಳುತ್ತಾರೆ, ಕೆಲವು ವರ್ಷಗಳ ಹಿಂದೆ ಅವರು ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದರು, ಈಗ ಬರಿಯ ಬಿಟಿ ಹತ್ತಿ ಬೆಳೆಯುತ್ತಿದ್ದಾರೆ ಎಂದು. (ಚಿತ್ರ: ಚಿತ್ರಾಂಗದಾ ಚೌಧುರಿ)

ಹವಾಮಾನ ಬದಲಾವಣೆಯನ್ನು ದೇಶವ್ಯಾಪಿ ವರದಿ ಮಾಡುವ ‘ಪರಿ’ಯ ಯೋಜನೆಯು ಶ್ರೀಸಾಮಾನ್ಯರ ದನಿ ಮತ್ತು ಬದುಕಿನ ಅನುಭವಗಳ ಮೂಲಕ ವಿದ್ಯಮಾನವನ್ನು ಸೆರಿಹಿಡಿಯುವ ಯು.ಎನ್.ಡಿ.ಪಿ ಸಹಭಾಗಿತ್ವದ ಒಂದು ಹೆಜ್ಜೆ.

ಈ ಲೇಖನವನ್ನು ಮರುಪ್ರಕಟಿಸಲು ಬಯಸುವಿರಾ? ದಯವಿಟ್ಟು [email protected] ಗೆ ಇ-ಮೇಲ್‌ ಬರೆಯಿರಿ. ccಯನ್ನು [email protected] ಈ ವಿಳಾಸಕ್ಕೆ ಸೇರಿಸಿ

ಅನುವಾದ: ಬಿ.ಎಸ್. ಮಂಜಪ್ಪ

Reporting : Aniket Aga

Aniket Aga is an anthropologist. He teaches Environmental Studies at Ashoka University, Sonipat.

Other stories by Aniket Aga
Reporting : Chitrangada Choudhury

Chitrangada Choudhury is an independent journalist.

Other stories by Chitrangada Choudhury

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Series Editors : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : B.S. Manjappa

Manjappa B. S. is an emerging writer and translator in Kannada.

Other stories by B.S. Manjappa