ರಾಜಿಂದರ್‌ ಎರಡು ಎಲೆ ಮತ್ತು ಒಂದು ಮೊಗ್ಗಿಗಾಗಿ ತೀವ್ರವಾಗಿ ಹುಡುಕುತ್ತಿದ್ದಾರೆ. ಇಳಿಜಾರಿನ ಬೆಟ್ಟಸಾಲಿನಲ್ಲಿ ನೆಟ್ಟ ಚಹಾದ ಗಿಡಗಳ ಮೇಲೆ ಅವರ ಬೆರಳುಗಳು ಓಡಾಡುತ್ತಿವೆ. ಅವರ ಹೆಂಡತಿ ಸುಮ್ನಾ ದೇವಿ ಬುಟ್ಟಿ ಹಿಡಿದು ಅವರ ಪಕ್ಕದಲ್ಲಿ ನಿಂತಿದ್ದಾರೆ. ಹಿಮಾಲಯದ ಧೌಲಾಧರ್‌ ಶ್ರೇಣಿಯಲ್ಲಿನ ಈ ಚಹಾ ಗಿಡಗಳ ಪೊದೆಯ ಮೇಲೆ ಎತ್ತರದ ಓಹಿ ಮರಗಳು ನೆರಳನ್ನು ಚೆಲ್ಲುತ್ತಿವೆ.

ಇದು ಕೊಯ್ಲಿನ ಸಮಯವಾಗಿದ್ದರೂ ರಾಜಿಂದರ್‌ ಸಿಂಗ್‌ ಅವರಿಗೆ ಎಲೆಗಳು ದೊರಕಲಿಲ್ಲ. ಅವರು ಪ್ರತಿದಿನ ಕಾಂಗ್ರಾ ಜಿಲ್ಲೆಯ ತಾಂಡಾ ಗ್ರಾಮದ ಹೊಲಕ್ಕೆ ಬರುತ್ತಾರೆ, ಮತ್ತು ಸುಮ್ನಾ ಅಥವಾ ಅವರ 20 ವರ್ಷದ ಮಗ ಆರ್ಯನ್ ಅವರೊಂದಿಗೆ ಬರುತ್ತಾರೆ. ಏಪ್ರಿಲ್ ಮತ್ತು ಮೇ ತಿಂಗಳುಗಳು ಚಹಾವನ್ನು ಎಲೆಗಳನ್ನು ಕೀಳುವ ಕಾಲವಾಗಿದ್ದು, ಇದನ್ನು ಮೊದಲ ಕೊಯ್ಲು ಎಂದು ಕರೆಯಲಾಗುತ್ತದೆ. ಆದರೆ ಅವರಿಗೆ ಅಂದು ಕೊಯ್ಯಲು ಎಲೆಗಳೇ ಇದ್ದಿರಲಿಲ್ಲ.

“ನಿಮಗೆ ಸೆಕೆ ಎಷ್ಟಿದೆಯೆಂದು ತಿಳಿಯುತ್ತಿರಬಹುದು. ಮಳೆಯಂತೂ ಸುದ್ದಿಯೇ ಇಲ್ಲ!” ಎಂದು ಹಿಮಾಚಲ ಪ್ರದೇಶದ ಪಾಲಂಪುರ್ ತೆಹ್ಸಿಲ್‌ನಲ್ಲಿರುವ ತಮ್ಮ ಚಹಾ ಪೊದೆಗಳ ಬಗ್ಗೆ ಚಿಂತಿತರಾಗಿ ಅವರು ಹೇಳಿದರು.

ಕಳೆದ ಎರಡು ವರ್ಷಗಳಿಂದ ಕಳಪೆ ಮಳೆಯಾಗಿರುವುದರಿಂದ ರಾಜಿಂದರ್ ಅವರ ಆತಂಕವನ್ನು ಅರ್ಥಮಾಡಿಕೊಳ್ಳಬಹುದು.  2016ರ ಎಫ್ಎಒ ಅಂತರ ಸರ್ಕಾರಿ ವರದಿಯು , "ಅನಿಯಮಿತ ಮಳೆಯು ಚಹಾ ತೋಟಗಳ ಹಾನಿಗೆ ಕಾರಣವಾಗಿದೆ" ಎಂದು ಉಲ್ಲೇಖಿಸಿದೆ. ಫೆಬ್ರವರಿಯಿಂದ ಏಪ್ರಿಲ್ ತಿಂಗಳ ನಡುವೆ ಮಳೆಯ ಅಗತ್ಯವಿರುವ ಚಹಾದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ವರದಿ ಅಧ್ಯಯನ ಮಾಡುತ್ತದೆ. ಅದೂ ಅಲ್ಲದೆ, ಏಪ್ರಿಲ್‌ ತಿಂಗಳ ಮೊದಲ ಫಸಲಿಗೆ ಅತ್ಯಧಿಕ ಬೆಲೆ ಇರುತ್ತದೆ. ಸಾಮಾನ್ಯವಾಗಿ 800 ರೂ ಮತ್ತು ಸಾಂದರ್ಭಿಕವಾಗಿ ಕಿಲೋಗ್ರಾಂಗೆ 1,200 ರೂ. ತನಕ ಇರುತ್ತದೆ.

2022 ರಾಜಿಂದರ್ ಅವರ ಪಾಲಿಗೆ ವಿಶೇಷ ವರ್ಷವಾಗಿತ್ತು, ಅವರು ಇನ್ನೂ ಎರಡು ಹೆಕ್ಟೇರ್ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಿದ್ದರು ಮತ್ತು ಅವರು ಉಲ್ಲೇಖಿಸಿದಂತೆ, "ನನ್ನ ಆದಾಯ ಹೆಚ್ಚಾಗುತ್ತದೆ ಎಂದು ನಾನು ಭಾವಿಸಿದ್ದೆ." ಒಟ್ಟು ಪ್ರದೇಶವು ಈಗ ಮೂರು ಹೆಕ್ಟೇರ್ ಆಗಿದ್ದು, ಋತುವಿನ ಕೊನೆಯಲ್ಲಿ 4,000 ಕಿಲೋ ಚಹಾ ಎಲೆಯ ಕೊಯ್ಲು ಎದುರು ನೋಡುತ್ತಿದ್ದಾರೆ.  ಅವರು ಗುತ್ತಿಗೆಗಾಗಿ 20,000 ರೂ.ಗಳನ್ನು ಖರ್ಚು ಮಾಡಿದರು ಮತ್ತು ಚಹಾ ಬೆಳೆಯಲ್ಲಿ ಕಾರ್ಮಿಕರ ವೇತನವು ಉತ್ಪಾದನಾ ವೆಚ್ಚದ 70 ಪ್ರತಿಶತದಷ್ಟಿದೆ ಎಂದು ಹೇಳುತ್ತಾರೆ. "ತೋಟವನ್ನು ನಿರ್ವಹಿಸಲು ಸಾಕಷ್ಟು ಶ್ರಮ ಮತ್ತು [ಒಳಸುರಿ] ವೆಚ್ಚಗಳು ಬೇಕಾಗುತ್ತವೆ" ಎಂದು ಅವರು ಗಮನಸೆಳೆದರು. ತದನಂತರ ಎಲೆಗಳನ್ನು ಸಂಸ್ಕರಿಸಲು ಮತ್ತಷ್ಟು ಖರ್ಚು ಮಾಡಬೇಕಾಗುತ್ತದೆ.

Rajinder searching for new leaves to pluck in the tea bushes. With his family (right), son Aryan and wife Sumna in their tea garden
PHOTO • Aakanksha
Rajinder searching for new leaves to pluck in the tea bushes. With his family (right), son Aryan and wife Sumna in their tea garden
PHOTO • Aakanksha

ರಾಜಿಂದರ್‌ ಚಹಾ ಗಿಡಗಳ ಪೊದೆಯಲ್ಲಿ ಎಲೆಗಳಿಗಾಗಿ ಹುಡುಕುತ್ತಿರುವುದು. ತನ್ನ ಕುಟುಂಬದೊಂದಿಗೆ (ಬಲ), ಮಗ ಆರ್ಯನ್ ಮತ್ತು ಪತ್ನಿ ಸುಮ್ನಾ ತಮ್ಮ ಚಹಾ ತೋಟದಲ್ಲಿ

ಈ ಕುಟುಂಬವು ಹಿಮಾಚಲ ಪ್ರದೇಶದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಎಂದು ಪಟ್ಟಿ ಮಾಡಲಾಗಿರುವ ಲಬಾನಾ ಸಮುದಾಯಕ್ಕೆ ಸೇರಿದೆ. "[ನನ್ನ ಕುಟುಂಬದ] ಹಿಂದಿನ ತಲೆಮಾರುಗಳು ಈ ಕೆಲಸದಲ್ಲಿ ತೊಡಗಿಕೊಂಡಿದ್ದವು" ಮತ್ತು ದೀರ್ಘಕಾಲದ ಅನಾರೋಗ್ಯದಿಂದಾಗಿ ತನ್ನ ತಂದೆಯ ಮರಣದ ನಂತರ ಅವರು ಕುಟುಂಬದ ಜಮೀನನ್ನು ವಹಿಸಿಕೊಂಡಾಗ ಅವರಿಗೆ 15 ವರ್ಷ ವಯಸ್ಸಾಗಿತ್ತು. ನಾಲ್ಕು ಒಡಹುಟ್ಟಿದವರಲ್ಲಿ ಹಿರಿಯವರಾದ ಅವರು ತೋಟವನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತರು ಮತ್ತು ಈ ಕಾರಣಕ್ಕಾಗಿ ಶಾಲೆಯಿಂದ ಹೊರಗುಳಿಯಬೇಕಾಯಿತು.

ಇಡೀ ಕುಟುಂಬವು ತೋಟ ನೋಡಿಕೊಳ್ಳುವುದರಲ್ಲಿ ಮತ್ತು ಚಹಾ ಪುಡಿ ತಯಾರಿಕೆಯ ಪ್ರಕ್ರಿಯಲ್ಲಿ ತೊಡಗಿಸಿಕೊಂಡಿದೆ. ಮಗಳು ಆಂಚಲ್‌ ಶಿಕ್ಷಣದ ಕುರಿತು ಪದವಿ ಓದುತ್ತಿದ್ದು ಅವರು ಕಳೆ ತೆಗೆಯುವುದು ಪ್ಯಾಕಿಂಗ್‌ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಅವರ ಮಗ ಆರ್ಯನ್‌ ಕಳೆ ಕೀಳುವುದರಿಂದ ಹಿಡಿದು ಎಲೆ ಕೀಳುವುದು, ಕತ್ತರಿಸುವುದು ಮತ್ತು ಪ್ಯಾಕಿಂಗ್‌ ಹೀಗೆ ಎಲ್ಲದರಲ್ಲೂ ಸಹಾಯ ಮಾಡುತ್ತಾರೆ. 20 ವರ್ಷದ ಗಣಿತ ವಿಷಯದಲ್ಲಿ ಪದವಿ ಓದುತ್ತಿದ್ದು ಬಿಡುವಿನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಾರೆ.

ಕಾಂಗ್ರಾದ ಚಹಾ ತೋಟಗಳು ಕಪ್ಪು ಮತ್ತು ಹಸಿರು ಪ್ರಭೇದಗಳನ್ನು ಉತ್ಪಾದಿಸುತ್ತವೆ, ಮತ್ತು ಎರಡೂ ಸ್ಥಳೀಯ ಮನೆಗಳಲ್ಲಿ ಜನಪ್ರಿಯವಾಗಿವೆ. "ನಿಮಗೆ ಇಲ್ಲಿ ಚಹಾ ಅಂಗಡಿ ಸಿಗುವುದಿಲ್ಲ, ಬದಲಿಗೆ ಪ್ರತಿ ಮನೆಯಲ್ಲೂ ನಿಮ್ಮನ್ನು ಚಹಾದೊಂದಿಗೆ ಸ್ವಾಗತಿಸಲಾಗುತ್ತದೆ. ನಾವು ನಮ್ಮ ಚಹಾಕ್ಕೆ ಹಾಲು ಅಥವಾ ಸಕ್ಕರೆಯನ್ನು ಸೇರಿಸುವುದಿಲ್ಲ. ಇದು ನಮಗೆ ಔಷಧಿ ಇದ್ದಂತೆ" ಎಂದು ಸುಮ್ನಾ ಹೇಳಿದರು, ಅವರು ಗ್ರೇಡಿಂಗ್ ಮತ್ತು ಪ್ಯಾಕೇಜಿಂಗ್ ಸಹ ಮಾಡುತ್ತಾರೆ. ರಾಜಿಂದರ್ ಅವರಂತಹ ಹೆಚ್ಚಿನ ಚಹಾ ಬೆಳೆಗಾರರು ತಾಜಾ ಎಲೆಗಳನ್ನು ರೋಲ್‌ ಮಾಡಲು ಮತ್ತು ಹುರಿಯಲು ಯಂತ್ರೋಪಕರಣಗಳೊಂದಿಗೆ ಸಣ್ಣ ತಾತ್ಕಾಲಿಕ ಸಂಸ್ಕರಣಾ ಕೋಣೆಯನ್ನು ಹೊಂದಿದ್ದಾರೆ. ಅವರು ಇತರ ಬೆಳೆಗಾರರಿಗೆ ಎಲೆಗಳನ್ನು ಸಂಸ್ಕರಿ ಕೊಡುತ್ತಾರೆ, ಸಿದ್ಧಪಡಿಸಿದ ಉತ್ಪನ್ನಕ್ಕೆ, ಕಿಲೋ ಒಂದಕ್ಕೆ 250 ರೂ.ಗಳನ್ನು ವಿಧಿಸುತ್ತಾರೆ.

1986ರಲ್ಲಿ ರಾಜಿಂದರ್ ಅವರ ತಂದೆ ಸಾಯುವ ಕೆಲವೇ ಮುನ್ನ ಸಾಲ ಪಡೆದು 8 ಲಕ್ಷ ಮೌಲ್ಯದ ಯಂತ್ರೋಪಕರಣಗಳನ್ನು ಖರೀದಿಸಲು ಭೂಮಿಯನ್ನು ಮಾರಾಟ ಮಾಡಿದ್ದರು. ಸಾಲವನ್ನು ಇನ್ನೂ ಪಾವತಿಸಲಾಗಿಲ್ಲ.

Many farmers have their own machines to process the leaves. Rajinder (left) standing next to his machine housed in a makeshift room outside his house that he refers to as his factory.
PHOTO • Aakanksha
Sumna (right) does the grading and packaging of tea
PHOTO • Aakanksha

ಎಲೆಗಳನ್ನು ಸಂಸ್ಕರಿಸಲು ಅನೇಕ ರೈತರು ತಮ್ಮದೇ ಆದ ಯಂತ್ರಗಳನ್ನು ಹೊಂದಿದ್ದಾರೆ. ರಾಜಿಂದರ್ (ಎಡ) ತನ್ನ ಯಂತ್ರದ ಪಕ್ಕದಲ್ಲಿ ತನ್ನ ಮನೆಯ ಹೊರಗಿನ ತಾತ್ಕಾಲಿಕ ಕೋಣೆಯಲ್ಲಿ ನಿಂತಿದ್ದಾರೆ, ಅದನ್ನು ಅವರು ತನ್ನ ಕಾರ್ಖಾನೆ ಎಂದು ಕರೆಯುತ್ತಾರೆ.  ಸುಮನ್ (ಬಲ) ಚಹಾದ ಗ್ರೇಡಿಂಗ್ ಮತ್ತು ಪ್ಯಾಕೇಜಿಂಗ್ ಮಾಡುತ್ತಾರೆ

ಕಾಂಗ್ರಾ ಜಿಲ್ಲೆಯಲ್ಲಿ, ರಾಜಿಂದರ್ ಅವರಂತಹ ಸಣ್ಣ ಬೆಳೆಗಾರರು ರಾಜ್ಯದ ಚಹಾ ಬೆಳೆಯ ಚಿತ್ರಣದಲ್ಲಿ ಪ್ರಾಬಲ್ಯ ಹೊಂದಿದ್ದಾರೆ - ಶೇಕಡಾ 96ರಷ್ಟು ಜನರು ಎರಡು ಹೆಕ್ಟೇರ್‌ಗಿಂತ ಕಡಿಮೆ ಹಿಡುವಳಿ ಹೊಂದಿದ್ದಾರೆ ಎಂದು 2022ರಲ್ಲಿ ಪ್ರಕಟವಾದ ರಾಜ್ಯ ಕೃಷಿ ಇಲಾಖೆಯ ಟಿಪ್ಪಣಿ ಹೇಳುತ್ತದೆ. ಅರ್ಧಕ್ಕಿಂತ ಹೆಚ್ಚು ತೋಟಗಳು ಪಾಲಂಪುರ್ ತಹಸಿಲ್‌ನಲ್ಲಿವೆ, ಮತ್ತು ಉಳಿದವು ಬೈಜ್ನಾಥ್, ಧರ್ಮಶಾಲಾ ಮತ್ತು ಡೆಹ್ರಾಡೂನ್ ತಹಸಿಲ್‌ಗಳಲ್ಲಿ ಹಂಚಿ ಹೋಗಿವೆ.

"ಹಿಮಾಚಲದ ಕೆಲವು ಜಿಲ್ಲೆಗಳು ಮಾತ್ರ ಚಹಾ ಬೆಳೆಯನ್ನು ಬೆಳೆಯುವ ಸಾಧ್ಯತೆಯನ್ನು ಹೊಂದಿವೆ ಏಕೆಂದರೆ ಚಹಾ ಬೆಳೆಗೆ ಆಮ್ಲೀಯ ಮಣ್ಣಿನ ಅವಶ್ಯಕತೆ ಇರುತ್ತದೆ ಮತ್ತು PH ಮಟ್ಟವು 4.5 ರಿಂದ 5.5 ರಷ್ಟಿರಬೇಕು," ಎಂದು ಡಾ. ಸುನಿಲ್ ಪಟಿಯಾಲ್ ಹೇಳುತ್ತಾರೆ. ಅವರು ರಾಜ್ಯದ ಕೃಷಿ ಇಲಾಖೆಯಲ್ಲಿ ಟೀ ತಾಂತ್ರಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಕಾಂಗ್ರಾದ ಚಹಾ ತೋಟಗಳು ಮತ್ತು ಪರ್ವತಮಯ ಪರಿಸರವು ಬಾಲಿವುಡ್ ಚಲನಚಿತ್ರಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ, ಇತ್ತೀಚಿಗೆ ಇಲ್ಲಿ ಚಿತ್ರೀಕರಿಸಲಾದ ಚಿತ್ರವೆಂದರೆ ಭೂತ್ ಪೊಲೀಸ್, ಇದು ಅಲೌಕಿಕ ಅಂಶಗಳ ಸುತ್ತಲಿನ ಕಥೆಯಾಗಿದೆ. "ಅನೇಕ ಪ್ರವಾಸಿಗರು ತಮ್ಮ ಕ್ಯಾಮೆರಾಗಳನ್ನು ಹೊರತೆಗೆದು ನಮ್ಮ ತೋಟಗಳನ್ನು ಚಿತ್ರೀಕರಿಸುತ್ತಾರೆ, ಆದರೆ ಅವರಿಗೆ ಅದರ ಬಗ್ಗೆ ಬಹಳ ಕಡಿಮೆ ತಿಳಿದಿದೆ" ಎಂದು ರಾಜಿಂದರ್ ಗಮನಸೆಳೆಯುತ್ತಾರೆ.

*****

ಹಿಮಾಚಲ ಪ್ರದೇಶದ ಚಹಾ ತೋಟಗಳು ಸೆಕೆ ಹೆಚ್ಚಾದಂತೆ ಮಳೆಯಾಗುವ ಒರೊಗ್ರಾಫಿಕ್ ಮಾದರಿಯ ಮಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿವೆ. ಇದು  ಚಹಾ ಗಿಡಗಳಿಗೆ ಜೀವವನ್ನು ತರುತ್ತದೆ. ಮಳೆಯಾಗದೆ ತಾಪಮಾನ ಏರಿಕೆಯು ದೊಡ್ಡ ಸಮಸ್ಯೆಯಾಗಿದೆ. ಚಹಾ ಸಸ್ಯಗಳಿಗೆ ತೇವಾಂಶದ ಅಗತ್ಯವಿದೆ, ಆದರೆ ಈಗ [2021 ಮತ್ತು 2022] ಕೇವಲ ಬಿಸಿಲಿರುತ್ತದೆ,” ಎಂದು ಪಟಿಯಾಲ್ ವಿವರಿಸುತ್ತಾರೆ.

ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಅಂಕಿಅಂಶಗಳ ಪ್ರಕಾರ, 2022ರ ಮಾರ್ಚ್ ಮತ್ತು ಏಪ್ರಿಲ್‌ ತಿಂಗಳಿನಲ್ಲಿ ಕಾಂಗ್ರಾ ಜಿಲ್ಲೆಯಲ್ಲಿ ಮಳೆಯು ಶೇಕಡಾ 90ಕ್ಕಿಂತ ಹೆಚ್ಚು ಮಳೆಯ ಕೊರತೆ ಕಂಡುಬಂದಿದೆ. ತರುವಾಯ, ಏಪ್ರಿಲ್ ಮತ್ತು ಮೇ 2022ರಲ್ಲಿ ಪಾಲಂಪುರ್ ಸಹಕಾರಿ ಚಹಾ ಕಾರ್ಖಾನೆಗೆ ಕಳುಹಿಸಲಾದ ಎಲೆಗಳ ತೂಕ ಒಂದು ಲಕ್ಷ ಕಿಲೋಗಳಿಗೆ ಇಳಿಯಿತು – ಇದು 2019ರ ಅದೇ ತಿಂಗಳ ಅಂಕಿಅಂಶಗಳ ಕಾಲು ಭಾಗ.

Left: The prized 'two leaves and a bud' that go to make tea.
PHOTO • Aakanksha
Right: Workers come from other states to pluck tea
PHOTO • Aakanksha

ಎಡ: ಚಹಾ ತಯಾರಿಸಲು ಬಳಸಲಾಗುವ ಅಮೂಲ್ಯವಾದ 'ಎರಡು ಎಲೆಗಳು ಮತ್ತು ಒಂದು ಮೊಗ್ಗು'. ಬಲ: ಚಹಾ ಎಲೆ ಕೀಳಲು ಹೊರ ರಾಜ್ಯಗಳಿಂದ ಕಾರ್ಮಿಕರು ಬರುತ್ತಾರೆ

Freshly plucked leaves drying (left) at the Palampur Cooperative Tea Factory (right) in Kangra district of Himachal Pradesh
PHOTO • Aakanksha
Freshly plucked leaves drying (left) a t the Palampur Cooperative Tea Factory (right) in Kangra district of Himachal Pradesh
PHOTO • Aakanksha

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪಾಲಂಪುರ್ ಸಹಕಾರಿ ಚಹಾ ಕಾರ್ಖಾನೆಯಲ್ಲಿ ಹೊಸದಾಗಿ ಕಿತ್ತ ಎಲೆಗಳು ಒಣಗುತ್ತಿರುವುದು

ಸಮಸ್ಯೆ ರಾಜಿಂದರ್‌ ಅವರನ್ನೂ ಬಿಟ್ಟಿಲ್ಲ. ಮೇ 2022ರ ಅಂತ್ಯದಲ್ಲಿ ಪರಿ ವಿಚಾರಿಸಿದಾಗ ಅವರು ಕೇವಲ 1,000 ಕಿಲೋ ಎಲೆಗಳನ್ನಷ್ಟೇ ಕೊಯ್ಲು ಮಾಡಲು ಸಾಧ್ಯವಾಗಿತ್ತು. ಅದರಲ್ಲಿ ಅರ್ಧದಷ್ಟನ್ನು ಸ್ಥಳೀಯವಾಗಿ ಮಾರಲು ಇಟ್ಟುಕೊಂಡು ಉಳಿದವನ್ನು ಪಾಲಂಪುರದ ಕರ್ಖಾನೆಗೆ ಕಳುಹಿಸಿದ್ದರು. "ನಾಲ್ಕು ಕೇಜಿ ಹಸಿರು ಎಲೆಯಿಂದ ಒಂದು ಕೇಜಿ ಚಹಾ ಪುಡಿ ತಯಾರಾಗುತ್ತದೆ. ನಾವು ಇಲ್ಲಿ ಮಾರುವುದಕ್ಕಾಗಿ ತಲಾ 1 ಕೇಜಿಯ 100 ಪ್ಯಾಕೇಟುಗಳನ್ನು ತಯಾರಿಸಿದ್ದೇವೆ" ಎಂದು ಅವರ ಮಗ ಆರ್ಯನ್ ಹೇಳಿದರು. ಒಂದು ಕಿಲೋ ಬ್ಲಾಕ್ ಟೀ 300ರೂ.ಗೆ ಮಾರಾಟವಾಗುತ್ತಿದೆ. ಮತ್ತು ಗ್ರೀನ್ ಟೀ ರೂ. 350.

ಚಹಾ ಬೆಳೆಯ ಬಹುಭಾಗವನ್ನು ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ನೀಲಗಿರಿಗಳಲ್ಲಿ ಬೆಳೆಯಲಾಗುತ್ತದೆ. 2021-22ರಲ್ಲಿ, ಭಾರತವು 1,344 ಮಿಲಿಯನ್ ಕಿಲೋಗಳನ್ನು ಉತ್ಪಾದಿಸಿದೆ ಮತ್ತು ಸಣ್ಣ ಬೆಳೆಗಾರರು ಅದರಲ್ಲಿ 50 ಪ್ರತಿಶತದಷ್ಟು ಕೊಡುಗೆ ನೀಡಿದ್ದಾರೆ ಎಂದು ಟೀ ಬೋರ್ಡ್ ಇಂಡಿಯಾ ತನ್ನ ವೆಬ್ಸೈಟಿನಲ್ಲಿ ತಿಳಿಸಿದೆ. ಈ ಸಂಸ್ಥೆಯು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುತ್ತದೆ, "ಸಣ್ಣ ಉತ್ಪಾದಕರು ಹೆಚ್ಚು ಅಸಂಘಟಿತರಾಗಿದ್ದಾರೆ ಮತ್ತು ಹಿಡುವಳಿಗಳ ಛಿದ್ರ ಮತ್ತು ಚದುರಿದ ಸ್ವಭಾವದಿಂದಾಗಿ, ಅವರು ಮೌಲ್ಯ ಸರಪಳಿಯ ಅತ್ಯಂತ ಕೆಳಭಾಗದಲ್ಲಿದ್ದಾರೆ" ಎಂದು ಹೇಳುತ್ತದೆ.

"ಹಿಮಾಚಲದ ಚಹಾ ಉತ್ಪನ್ನವು ಇತರ ಪ್ರದೇಶಗಳ ಚಹಾ ಉತ್ಪನ್ನಗಳೊಡನೆ ಸ್ಪರ್ಧಿಸುತ್ತದೆ. ಆದರೆ ರಾಜ್ಯದಲ್ಲಿ ಸೇಬು ಬೆಳೆಗಾರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. [ಸ್ಥಳೀಯ] ಆಡಳಿತದಿಂದ ಹೆಚ್ಚಿನ ಗಮನವನ್ನು ಪಡೆಯುತ್ತಾರೆ” ಎಂದು ಡಾ. ಪ್ರಮೋದ್ ವರ್ಮಾ ದೂರುತ್ತಾರೆ. ಅವರು ಪಾಲಂಪುರ್‌ನಲ್ಲಿರುವ ಹಿಮಾಚಲ ಪ್ರದೇಶ ಕೃಷಿ ವಿಶ್ವವಿದ್ಯಾಲಯದಲ್ಲಿ ಚಹಾ ತಂತ್ರಜ್ಞರಾಗಿದ್ದಾರೆ ಮತ್ತು ಒಂದು ದಶಕದಿಂದ ಚಹಾ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಚಹಾ ಉತ್ಪಾದನೆ ಕುಸಿತಕ್ಕೂ ಚಹಾ ಬೆಳೆಯುತ್ತಿರುವ ಪ್ರದೇಶಗಳ ಕುಸಿತಕ್ಕೂ ನೇರ ಸಂಬಂಧವಿದೆ. ಕಾಂಗ್ರಾ ಜಿಲ್ಲೆಯಲ್ಲಿ ಚಹಾ ಬೆಳೆಗೆ ಮೀಸಲಿರುವ 2,110 ಹೆಕ್ಟೇರ್‌ ಭೂಮಿಯ 1096.83 ಹೆಕ್ಟೇರ್ ಜಮೀನಿನಲ್ಲಿ ಮಾತ್ರವೇ ಚಹಾ ಬೆಳೆಯಲಾಗುತ್ತಿದೆ. ಎಂದರೆ ಅರ್ಧದಷ್ಟು ಕುಸಿತ. ಉಳಿದ ಭೂಮಿಯನ್ನು ಪಾಳು ಬಿಡಲಾಗಿದೆ ಅಥವಾ ವಸತಿಗಾಗಿ ಬಳಸಲಾಗಿದೆ. ಹೀಗೆ ವಸತಿಗಾಗಿ ಬಳಸುವುದು ಹಿಮಾಚಲ ಪ್ರದೇಶದ ಸೀಲಿಂಗ್ ಆನ್ ಲ್ಯಾಂಡ್ ಹೋಲ್ಡಿಂಗ್ಸ್ ಆಕ್ಟ್, 1972 ರ ಉಲ್ಲಂಘನೆಯಾಗಿದೆ, ಇದು ಚಹಾಕ್ಕಾಗಿ ಮೀಸಲಿಟ್ಟ ಭೂಮಿಯನ್ನು ಮಾರಾಟ ಮಾಡಲಾಗುವುದಿಲ್ಲ ಅಥವಾ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಎಂದು ಹೇಳುತ್ತದೆ.

Jaat Ram Bahman and wife Anjagya Bahman (right) are in their eighties and continue to work in their tea garden.
PHOTO • Aakanksha
Jaat Ram (left) in his factory
PHOTO • Aakanksha

ಜಾಟ್ ರಾಮ್ ಬಾಹ್ಮನ್ ಮತ್ತು ಪತ್ನಿ ಅಂಜಗ್ಯ ಬಾಹ್ಮನ್ (ಬಲ) ಇಬ್ಬರೂ ತಮ್ಮ ಬದುಕಿನ ಎಂಟು ದಶಕಗಳಿಗೆ ಸಾಕ್ಷಿಯಾಗಿದ್ದಾರೆ ಮತ್ತು ತಮ್ಮ ಚಹಾ ತೋಟದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ. ತನ್ನ ಕಾರ್ಖಾನೆಯಲ್ಲಿ ಜಾಟ್ ರಾಮ್ (ಎಡ)

Left: Many tea gardens in Kangra district have been abandoned.
PHOTO • Aakanksha
Right: Jaswant Bahman owns a garden in Tanda village and recalls a time when the local market was flourishing
PHOTO • Aakanksha

ಎಡ: ಕಾಂಗ್ರಾ ಜಿಲ್ಲೆಯ ಅನೇಕ ಚಹಾ ತೋಟಗಳನ್ನು ಪಾಳು ಬಿಡಲಾಗಿದೆ. ಬಲ: ಜಸ್ವಂತ್ ಭಾಮನ್ ತಾಂಡಾ ಗ್ರಾಮದಲ್ಲಿ ತೋಟವನ್ನು ಹೊಂದಿದ್ದಾರೆ ಮತ್ತು ಸ್ಥಳೀಯ ಮಾರುಕಟ್ಟೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ

"ಕೆಲವು ವರ್ಷಗಳ ಹಿಂದೆ ನನ್ನ ಜಮೀನಿನ ಹಿಂದೆ ಚಹಾ ತೋಟಗಳಿದ್ದವು. ಈಗ ನೀವು ಮನೆಗಳನ್ನು ನೋಡುತ್ತೀರಿ" ಎಂದು ತಾಂಡಾ ಗ್ರಾಮದ ರಾಜಿಂದರ್ ಅವರ ನೆರೆಹೊರೆಯವರಾದ ಜಾಟ್ ರಾಮ್ ಬಾಹ್ಮನ್ ಹೇಳುತ್ತಾರೆ. ಅವರು ಮತ್ತು ಅವರ ಪತ್ನಿ ಅಂಜಗ್ಯ ಬಾಹ್ಮನ್ ತಮ್ಮ 15 ಕಾಲುವೆಗಳ ತೋಟದಲ್ಲಿ (ಒಂದು ಹೆಕ್ಟೇರ್ ನ ಸರಿಸುಮಾರು ಮುಕ್ಕಾಲು ಭಾಗ) ಚಹಾ ತೋಟವನ್ನು ಹೊಂದಿದ್ದಾರೆ ಮತ್ತು ಅಲ್ಲಿ ಚಹಾ ಬೆಳೆಯುತ್ತಾರೆ.‌

87 ವರ್ಷದ ಜಾಟ್ ರಾಮ್ ಅವರು ತೋಟಗಳು ಲಾಭ ಗಳಿಸುತ್ತಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅಂತಹ ತೋಟಗಳು ಸುತ್ತಲೂ ಸಾಕಷ್ಟು ಇದ್ದವು. ಮೊದಲ ಸಸಿಗಳನ್ನು 1849 ರಲ್ಲಿ ನೆಡಲಾಯಿತು ಮತ್ತು 1880ರ ಹೊತ್ತಿಗೆ, ಕಾಂಗ್ರಾ ಚಹಾವು ಲಂಡನ್ ಮತ್ತು ಆಮ್ಸ್ಟರ್ಡ್ಯಾಮ್ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿತು. 2005ರಲ್ಲಿ, ಕಾಂಗ್ರಾ ಚಹಾ ತನ್ನ ವಿಶಿಷ್ಟ ಪರಿಮಳಕ್ಕಾಗಿ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ಪಡೆಯಿತು.

"ಅವುಗಳು ಸುವರ್ಣ ವರ್ಷಗಳು" ಜಸ್ವಂತ್ ಭಾಮನ್, 56, ಮತ್ತು ತಾಂಡಾ ಗ್ರಾಮದಲ್ಲಿ 10 ಕಾಲುವೆಗಳ (ಸರಿಸುಮಾರು ಅರ್ಧ ಹೆಕ್ಟೇರ್) ಚಹಾದ ಮಾಲೀಕ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. “ನಾವು ನಮ್ಮ ಮನೆಗಳಲ್ಲಿನ ಎಲೆಗಳನ್ನು ಯಂತ್ರಗಳಿಂದ (ಸಾಂಪ್ರದಾಯಿಕ) ಸಂಸ್ಕರಿಸಿ ಅಮೃತಸರದಲ್ಲಿ ಮಾರಾಟ ಮಾಡುತ್ತಿದ್ದೆವು. ಇದು ದೊಡ್ಡ ಮಾರುಕಟ್ಟೆಯಾಗಿತ್ತು. ”

ಭಾಮನ್ ಅವರು 1990ರ ದಶಕವನ್ನು ಉಲ್ಲೇಖಿಸುತ್ತಿದ್ದಾರೆ, ಸ್ಥಳೀಯ ಚಹಾ ಮಂಡಳಿಯ ಪ್ರಕಾರ, ಆ ಸಮಯದಲ್ಲಿ ಕಾಂಗ್ರಾ ವರ್ಷಕ್ಕೆ 18 ಲಕ್ಷ ಟನ್‌ಗಳಷ್ಟು ಸಿದ್ಧಪಡಿಸಿದ ಚಹಾವನ್ನು ಉತ್ಪಾದಿಸುತ್ತಿತ್ತು. ಚಹಾವನ್ನು ರಸ್ತೆಯ ಮೂಲಕ ಅಮೃತಸರದ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿತ್ತು - 200 ಕಿಲೋಮೀಟರ್‌ಗಳಿಗೂ ಹೆಚ್ಚಿನ ಪ್ರಯಾಣ - ಅಲ್ಲಿಂದ ಅದು ಅಂತರರಾಷ್ಟ್ರೀಯ ಹರಾಜಿನಲ್ಲಿ ಸೇರಿಕೊಳ್ಳುತ್ತು. ಇಂದು ಅದರ ಅರ್ಧಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸುತ್ತದೆ - 8,50,000 ಟನ್‌ಗಳು.

“ನಾವು [ನಮ್ಮ ಒಂದು ಹೆಕ್ಟೇರ್‌ನಲ್ಲಿ] ಉತ್ತಮ ಮೊತ್ತವನ್ನು ಗಳಿಸಬಹುದಿತ್ತು. ಆಗ ನಾವು ತಯಾರಿಸಿದ ಚಹಾ ಪುಡಿಯೊಂದಿಗೆ ಹಲವು ಬಾರಿ ಪ್ರಯಾಣಿಸುತ್ತಿದ್ದೆವು. ಒಂದು ಬಾರಿ ಹೋದಾಗ 13,000- 35,000 ರೂ. ದುಡಿಯುತ್ತಿದ್ದೆವು” ಎಂದು ರಾಜಿಂದರ್ ಪರಿಗೆ ಹಳೆಯ ಬಿಲ್‌ಗಳನ್ನು ತೋರಿಸಿದರು.

In Kangra district, 96 per cent of holdings of tea gardens are less than two hectares. More than half the gardens are in Palampur tehsil, and the rest are distributed across Baijnath, Dharamshala and Dehra tehsil
PHOTO • Aakanksha
In Kangra district, 96 per cent of holdings of tea gardens are less than two hectares. More than half the gardens are in Palampur tehsil, and the rest are distributed across Baijnath, Dharamshala and Dehra tehsil
PHOTO • Aakanksha

ಕಾಂಗ್ರಾ ಜಿಲ್ಲೆಯಲ್ಲಿ, ಚಹಾ ತೋಟಗಳ ಶೇಕಡಾ 96ರಷ್ಟು ಹಿಡುವಳಿಗಳು ಎರಡು ಹೆಕ್ಟೇರ್‌ಗಿಂತ ಕಡಿಮೆ ಅಳತೆಯವು. ಅರ್ಧಕ್ಕಿಂತ ಹೆಚ್ಚು ತೋಟಗಳು ಪಾಲಂಪುರ್ ತಹಸಿಲ್ನಲ್ಲಿವೆ, ಮತ್ತು ಉಳಿದವು ಬೈಜ್ನಾಥ್, ಧರ್ಮಶಾಲಾ ಮತ್ತು ಡೆಹ್ರಾ ತಹಸಿಲ್‌ಗಳಲ್ಲಿ ಹಂಚಿ ಹೋಗಿವೆ

ಸುವರ್ಣ ದಿನಗಳು ಹೆಚ್ಚು ಉಳಿಯಲಿಲ್ಲ. "ಅಮೃತಸರ ಮೇ ಭೋತ್ ಪಂಗಾ ಹೋನೆ ಲಗಾ," [ನಮಗೆ ಅಮೃತಸರದಲ್ಲಿ ತೊಂದರೆ ಶುರುವಾಯಿತು]" ಎಂದು ಜಸ್ವಂತ್ ಹೇಳುತ್ತಾರೆ. ಕಾಂಗ್ರಾದ ಚಹಾ ತೋಟಗಾರರು ಭಾರತದ ಮುಖ್ಯ ಚಹಾ ಹರಾಜು ಕೇಂದ್ರವಾದ ಕೋಲ್ಕತ್ತಾಗೆ ಸ್ಥಳಾಂತರಗೊಂಡರು. ಕಾರ್ಖಾನೆಗಳು ಕೋಲ್ಕತ್ತಾ ಹರಾಜಿನಲ್ಲಿ ನೇರವಾಗಿ ವ್ಯವಹರಿಸುವುದರಿಂದ ಹೆಚ್ಚಿನ ಬೆಳೆಗಾರರು ಮನೆಯಲ್ಲಿ ಸಂಸ್ಕರಣೆ ಮಾಡುವುದನ್ನು ಬಿಟ್ಟು ಪಾಲಂಪುರ್, ಬಿರ್, ಬೈಜನಾಥ್ ಮತ್ತು ಸಿದ್ಬರಿಯಲ್ಲಿರುವ ಸರ್ಕಾರಿ ಕಾರ್ಖಾನೆಗಳಿಗೆ ಬದಲಾಯಿಸಿದ್ದಾರೆ. ಹೀಗೆ, ಈ ಕಾರ್ಖಾನೆಗಳು ಮುಚ್ಚಲು ಪ್ರಾರಂಭಿಸಿದವು ಮತ್ತು ಸ್ಥಳೀಯ ಬೆಳೆಗಾರರು ಸ್ಥಳೀಯ ರಾಜ್ಯ ಬೆಂಬಲವನ್ನು ಕಳೆದುಕೊಂಡರು. ಇಂದು ಕೇವಲ ಒಂದು ಸಹಕಾರಿ ಕಾರ್ಖಾನೆ ಮಾತ್ರ ಕಾರ್ಯನಿರ್ವಹಿಸುತ್ತಿದೆ.

ಕೋಲ್ಕತಾ ಹರಾಜು ಕೇಂದ್ರವು ಕಾಂಗ್ರಾದಿಂದ ಸರಿಸುಮಾರು 2,000 ಕಿ.ಮೀ ದೂರದಲ್ಲಿದೆ, ಇದು ಸಾರಿಗೆ ವೆಚ್ಚಗಳು, ಗೋದಾಮಿನ ಶುಲ್ಕಗಳು ಮತ್ತು ಕಾರ್ಮಿಕ ವೆಚ್ಚವನ್ನು ಹೆಚ್ಚಿಸುತ್ತದೆ. ಇದು ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ನೀಲಗಿರಿಯ ಇತರ ಭಾರತೀಯ ಚಹಾಗಳೊಂದಿಗೆ ಸ್ಪರ್ಧಿಸುವುದನ್ನು ಕಷ್ಟಕರವಾಗಿಸಿತು ಮತ್ತು ಕಾಂಗ್ರಾ ಚಹಾ ತೋಟಗಾರರು ತಮ್ಮ ಲಾಭವನ್ನು ಕಳೆದುಕೊಳ್ಳತೊಡಗಿದರು.

"ಕಾಂಗ್ರಾ ಚಹಾವನ್ನು ರಫ್ತು ಮಾಡಲಾಗುತ್ತದೆ ಆದರೆ ಕಾಂಗ್ರಾ ಚಹಾದ ಹೆಸರಿನಲ್ಲಲ್ಲ, ಬದಲಿಗೆ ಖರೀದಿದಾರರು ಮತ್ತು ವ್ಯಾಪಾರಿ ಕಂಪನಿ ಹೆಸರಿನಿಂದ ವಿಭಿನ್ನ ಹೆಸರುಗಳೊಂದಿಗೆ ಮಾರಲಾಗುತ್ತಿದೆ. ಕೋಲ್ಕತಾ ಕಡಿಮೆ ಬೆಲೆಗೆ ಚಹಾವನ್ನು ತೆಗೆದುಕೊಳ್ಳುತ್ತದೆ ಮತ್ತು ಉತ್ತಮ ಬೆಲೆಗೆ ಮಾರಾಟ ಮಾಡುತ್ತದೆ ಮತ್ತು ರಫ್ತು ನೆಲೆಯನ್ನು ಸಹ ಹೊಂದಿದೆ" ಎಂದು ವರ್ಮಾ ತಿಳಿಸಿದರು.

*****

"ನನಗೆ ತೋಟಕ್ಕೆ ಸುಮಾರು 1,400 ಕಿಲೋ ಗೊಬ್ಬರ ಬೇಕು, ಮತ್ತು ಇದಕ್ಕೆ ನನಗೆ ಸುಮಾರು 20,000 ರೂ ವೆಚ್ಚವಾಗುತ್ತದೆ" ಎಂದು ರಾಜಿಂದರ್ ಹೇಳುತ್ತಾರೆ. ಈ ಹಿಂದೆ ರಾಜ್ಯ ಸರ್ಕಾರವು ಗೊಬ್ಬರದ ಮೇಲೆ ಶೇಕಡಾ 50ರಷ್ಟು ಸಬ್ಸಿಡಿಯನ್ನು ನೀಡುತ್ತಿತ್ತು, ಆದರೆ ಕಳೆದ 5 ವರ್ಷಗಳಲ್ಲಿ ಅದು ನಿಂತಿದೆ ಮತ್ತು ರಾಜ್ಯ ಇಲಾಖೆ ಸೇರಿದಂತೆ ಯಾರಿಗೂ ಏಕೆ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳುತ್ತಾರೆ.

ಚಹಾವು ಕೆಲಸಗಾರರನ್ನು ಬೇಡುವ ಬೆಳೆ ಮತ್ತು ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಎಲೆ ಕೀಳಲು ಮತ್ತು ನಂತರ ನವೆಂಬರ್‌ನಿಂದ ಕೊಂಬೆ ಸವರುವಿಕೆ ರೂಪಿಸಲು ಕಾರ್ಮಿಕರ ಅವಶ್ಯಕತೆ ಇರುತ್ತದೆ. ರಾಜ್ಯವು ಸವರುವಿಕೆಗೆ ಯಂತ್ರೋಪಕರಣಗಳನ್ನು ನೀಡಿದೆ ಮತ್ತು ರಾಜಿಂದರ್ ಮತ್ತು ಅವರ ಮಗ ಕಾರ್ಮಿಕ ಶುಲ್ಕವನ್ನು ಉಳಿಸಲು ಅದನ್ನು ನಿರ್ವಹಿಸುತ್ತಾರೆ, ಆದರೆ ಅವರು ಪೆಟ್ರೋಲ್‌ಗೆ ಹಣ ಖರ್ಚು ಮಾಡುತ್ತಾರೆ.

Machines for processing tea in Rajinder and Sumna’s factory in Tanda village of Kangra district
PHOTO • Aakanksha
Machines for processing tea in Rajinder and Sumna’s factory in Tanda village of Kangra district
PHOTO • Aakanksha

ಕಾಂಗ್ರಾ ಜಿಲ್ಲೆಯ ತಾಂಡಾ ಗ್ರಾಮದಲ್ಲಿರುವ ರಾಜಿಂದರ್ ಮತ್ತು ಸುಮ್ನಾ ಅವರ ಕಾರ್ಖಾನೆಯಲ್ಲಿನ ಚಹಾವನ್ನು ಸಂಸ್ಕರಿಸುವ ಯಂತ್ರಗಳು

ಕಳೆದ ವರ್ಷ, ಕುಟುಂಬವು ಮೂರು ಕಾರ್ಮಿಕರನ್ನು ರೂ. ದಿನಕ್ಕೆ 300. ದಿನಗೂಲಿಗೆ ಕೆಲಸಕ್ಕೆ ಇರಿಸಿಕೊಂಡಿತು "ಕೊಯ್ಲು ಮಾಡಲು ಏನೂ ಇರಲಿಲ್ಲ ಆದ್ದರಿಂದ [ಕೆಲಸದವರನ್ನು] ಇಟ್ಟುಕೊಳ್ಳುವುದರಲ್ಲಿ ಯಾವ ಅರ್ಥವಿದೆ. ಸಂಬಳ ಹೇಗೆ ಕೊಡುವುದು” ಎಂದು ರಾಜಿಂದರ್ ಅವರನ್ನು ಏಕೆ ಕಳುಹಿಸಬೇಕಾಯಿತು ಎಂದು ವಿವರಿಸುತ್ತಾರೆ. ಮತ್ತು 2022ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಸುಗ್ಗಿಯ ಸಮಯದಲ್ಲಿ, ಬೆಟ್ಟದ ಇಳಿಜಾರುಗಳು ಸಾಮಾನ್ಯವಾಗಿ ಕಾರ್ಮಿಕರಿಂದ ತುಂಬಿರುವ ಸಮಯ, ಆದರೆ ಯಾರೂ ಕಾಣುತ್ತಿರಲಿಲ್ಲ.

ಕುಗ್ಗುತ್ತಿರುವ ಲಾಭಗಳು ಮತ್ತು ಸರ್ಕಾರದ ಬೆಂಬಲದ ಕೊರತೆಯು ಇಲ್ಲಿನ ಯುವಕರನ್ನು ಈ ಕೆಲಸ ಮಾಡದಂತೆ ತಡೆಯುತ್ತಿದೆ. ತನ್ನ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಿವೆ ಎಂದು ಜಾಟ್ ರಾಮ್ ಹೇಳುತ್ತಾರೆ ಮತ್ತು ಅವರ ಪತ್ನಿ ಅಂಜಗ್ಯ, "ನಮ್ಮ ನಂತರ [ತೋಟವನ್ನು] ಯಾರು ನೋಡಿಕೊಳ್ಳುತ್ತಾರೆಂದು ನನಗೆ ತಿಳಿದಿಲ್ಲ" ಎಂದು ಹೇಳಿದರು.

ರಾಜೀಂದರ್ ಅವರ ಮಗ ಆರ್ಯನ್ ಕೂಡ ಇಲ್ಲಿಯೇ ಉಳಿಯಲು ಆಸಕ್ತಿ ಹೊಂದಿಲ್ಲ.  "ಅವರು [ಅವರ ಪೋಷಕರು] ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವುದನ್ನು ನಾನು ನೋಡಿದ್ದೇನೆ. ಸದ್ಯಕ್ಕೆ, ನಾನು ನನ್ನ ಹೆತ್ತವರೊಂದಿಗೆ ಕೆಲಸ ಮಾಡುತ್ತೇನೆ, ಆದರೆ ಮುಂದೆ ಅದನ್ನು ಮಾಡುವುದಿಲ್ಲ" ಎಂದು ಆರ್ಯನ್ ಹೇಳಿದರು.

ವರ್ಷದ ಅಂತ್ಯದ ವೇಳೆಗೆ, ರಾಜಿಂದರ್ 2.5 ಲಕ್ಷ ರೂ.ಗಳನ್ನು ಗಳಿಸುವ ಅಂದಾಜಿನಲ್ಲಿದ್ದಾರೆ, ಅದರಲ್ಲಿ ಹೆಚ್ಚಿನದು ಸೀಸನ್ನಿನ ಕೊನೆಯ ತಿಂಗಳಾದ ಅಕ್ಟೋಬರ್‌ ತಿಂಗಳಿನಲ್ಲಿ ಬರಬೇಕು. ಈ ಮೊತ್ತದಿಂದ, ಅವರು ಬಾಡಿಗೆ, ಒಳಸುರಿ ಮತ್ತು ಇತರ ವೆಚ್ಚಗಳನ್ನು ಭರಿಸಬೇಕು.

2022ರಲ್ಲಿ ಕುಟುಂಬವು ಉಳಿತಾಯದ ಮೇಲೆ ಅವಲಂಬಿತರಾಗಲು ಸಾಧ್ಯವಾಗಲಿಲ್ಲ ಎಂದು ರಾಜಿಂದರ್ ಹೇಳಿದರು. ಅವರು ತಮ್ಮ ಎರಡು ಹಸುಗಳ ಹಾಲನ್ನು ಮಾರಾಟ ಮಾಡುವ ಮೂಲಕ, ಇತರ ಸಣ್ಣ ತೋಟಗಳ ಎಲೆಗಳನ್ನು ಸಂಸ್ಕರಿಸುವ ಮೂಲಕ ಮತ್ತು ಆರ್ಯನ್ ಅವರ ಬೋಧನೆಯಿಂದ 5,000 ರೂ.ಗಳ ಆದಾಯವನ್ನು ಗಳಿಸಿದರು.

ಕಳಪೆ ಆದಾಯದ ಕಾರಣ, 2022ರಲ್ಲಿ ರಾಜಿಂದರ್ ಮತ್ತು ಸುಮ್ನಾ ಅವರು ಗುತ್ತಿಗೆಗೆ ತೆಗೆದುಕೊಂಡ ಎರಡು ಹೆಕ್ಟೇರ್ ತೋಟಗಳನ್ನು ಹಿಂದಿರುಗಿಸಿದರು.

ಅನುವಾದ: ಶಂಕರ. ಎನ್. ಕೆಂಚನೂರು

Aakanksha

Aakanksha is a reporter and photographer with the People’s Archive of Rural India. A Content Editor with the Education Team, she trains students in rural areas to document things around them.

Other stories by Aakanksha
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru