ಮರ್ಹಾಯಿ ಮಾತೆಯ ದೇವಾಲಯಕ್ಕೆ ಬರುವ ಹೆಚ್ಚಿನ ಭಕ್ತರು ತಲೆ ಬಗ್ಗಿಸಿಕೊಂಡು ನಾಲ್ಕು ಅಡಿ ಎತ್ತರ ಬಾಗಿಲನ್ನು ದಾಟಿಕೊಂಡು ಒಳಗೆ ಬರುತ್ತಾರೆ. ರೋಗ-ರುಜಿನಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುವ ಈ ದೇವಿಗೆ ಮರ್ಹಾ ಊರಿನ ಜನರು ಮಾತ್ರವಲ್ಲದೇ, ಸುತ್ತಮುತ್ತಲಿನ ಊರಿನವರೂ ತಲೆಬಾಗಿ ಭಕ್ತಿಯನ್ನು ತೋರಿಸುತ್ತಾರೆ.
"ನಿಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸರಿ ಇಲ್ಲದೇ ಇದ್ದರೆ, ನೀವು ಇಲ್ಲಿ ಬಂದು ಭಗವತಿಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಬಹುದು," ಎಂದು ಬಾಬು ಸಿಂಗ್ ಹೇಳುತ್ತಾರೆ. ವಿಶಾಲವಾಗಿ ಹರಡಿರುವ ಆಲದ ಮರದ ಕೆಳಗೆ ಕುಳಿತಿರುವ ಎಲ್ಲಾ ಭಕ್ತರಂತೆ, ಇವರೂ ಕೂಡ ಪೂಜೆ ಶುರುವಾಗಲು ಕಾಯುತ್ತಿದ್ದಾರೆ. ಇದು ಭಗವತಿಯ ದೇವಾಲಯ. "ಅನಾರೋಗ್ಯ ಇರಬಹುದು, ಇಲ್ಲವೇ ಭೂತ್ [ಪ್ರೇತ] ಅಥವಾ ಡಯಾನ್ [ಮಾಟಗಾರ] ಉಪದ್ರ ಇರಬಹುದು, ತಾಯಿ ನಮ್ಮ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸುತ್ತಾಳೆ," ಎಂದು ಅವರು ತುಂಬಾ ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಇವತ್ತು ಬುಧವಾರ, ವಿಶೇಷ ಪೂಜೆ ಇರುತ್ತದೆ - ಈ ದಿನ ಸ್ಥಳೀಯವಾಗಿ ಪಂಡಾ ಎಂದು ಕರೆಯುವ ದೇವಾಲಯದ ಅರ್ಚಕರ ಮೈಮೇಲೆ ದೇವಿ ಆವಾಹನೆಗೊಳ್ಳುತ್ತಾಳೆ. ಮೈಮೇಲೆ ಬಂದು ದರ್ಶನ ನೀಡುವ ದೇವಿ ಭಕ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ, ಅವರ ಸಮಸ್ಯೆಗಳಿಗೆ, ಅದರಲ್ಲೂ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕೋಡುತ್ತಾಳೆ.
ಇಲ್ಲಿಗೆ ಬರುವ ಹೆಚ್ಚಿನ ಭಕ್ತರು ಗಹದ್ರ, ಕೂಣಿ, ಕುಡಾನ್, ಖಮ್ರಿ, ಮಜೋಲಿ, ಮರ್ಹಾ, ರಕ್ಷೆಹಾ ಮತ್ತು ಕಠಾರಿ ಬಿಲ್ಹಟಾ ಗ್ರಾಮಗಳ ಗಂಡಸರು. ಕೆಲವು ಮಹಿಳೆಯರು ಕೂಡ ಬರುತ್ತಾರೆ, ಅವರು ತಲೆಗೆ ಸೆರಗು ಹೊದ್ದು ಬರುತ್ತಾರೆ.
"ಆಟ್ ಗಾಂವ್ ಕೆ ಲೋಗ್ ಆತೇ ಹೈ, [ಎಂಟು ಊರುಗಳ ಜನ ಇಲ್ಲಿಗೆ ಬರುತ್ತಾರೆ,]" ಎನ್ನುತ್ತಾ ದೇವಿಯನ್ನು ಆವಾಹಿಸಿಕೊಂಡು ಭಕ್ತರಿಗೆ ಅಭಯವನ್ನು ನೀಡುವ ಸ್ಥಳೀಯ ಅರ್ಚಕ ಭಯ್ಯಾ ಲಾಲ್ ಆದಿವಾಸಿ ಅವರು ತಮ್ಮ ಮಧ್ಯಾಹ್ನದ ಕೆಲಸದಲ್ಲಿ ತೊಡಗುತ್ತಾರೆ. ಆದಿವಾಸಿ ಗೊಂಡ ಸಮುದಾಯದ ಇವರ ಕುಟುಂಬವು ಅನೇಕ ತಲೆಮಾರುಗಳಿಂದ ದೇವಿಯ ಸೇವೆ ಮಾಡಿಕೊಂಡು ಬರುತ್ತಿದೆ.
ದೇವಾಲಯದ ಒಳಗೆ ಗಂಡಸರ ಗುಂಪೊಂದು ಢೋಲಕ್ ಮತ್ತು ಹಾರ್ಮೋನಿಯಂ ಸೇರಿದಂತೆ ಬೇರೆ ಬೇರೆ ವಾದ್ಯಗಳನ್ನು ನುಡಿಸುತ್ತಾ ರಾಮ ಮತ್ತು ಸೀತೆಯರ ನಾಮ ಸಂಕೀರ್ತನೆಯನ್ನು ಪಠಿಸುತ್ತಿತ್ತು.
ಒಂದು ಮೂಲೆಯಲ್ಲಿ ತಟ್ಟೆಯಿಂದ ಮುಚ್ಚಲಾಗಿದ್ದ ಮಡಕೆಯೊಂದನ್ನು ಇಡಲಾಗಿತ್ತು. "ಥಾಲಿ ಬಜೆಗಿ ಆಜ್ [ಇವತ್ತು ಅವರು ತಟ್ಟೆಯನ್ನು ಬಡಿಯುತ್ತಾರೆ]," ಎಂದು ತನ್ನ ಪಾಡಿಗೆ ಸುಮ್ಮನೆ ಕೂತಿರುವ ಆ ತಟ್ಟೆಯನ್ನು ಉಲ್ಲೇಖಿಸಿ ಪನ್ನಾ ಊರಿನ ನೀಲೇಶ್ ತಿವಾರಿ ಹೇಳಿದರು.
ಭಯ್ಯಾ ಲಾಲ್ ಅವರು ಹಿಂದೆ ಮುಂದೆ ಓಲಾಡುತ್ತಾ ದೇವಿಯ ಮುಂದೆ ಬಂದು ತಮ್ಮ ಜಾಗದಲ್ಲಿ ಕುಳಿತುಕೊಂಡರು. ಆಗಾಗಲೇ ಸುಮಾರು 20 ಮಂದಿ ನೆರೆದಿದ್ದರು. ಆ ಕೋಣೆಯ ತುಂಬಾ ತಟ್ಟೆಯನ್ನು ಬಡಿಯುವ ಸದ್ದು ತುಂಬಿತು, ಅಗರಬತ್ತಿಯ ಹೊಗೆ ಹರಡಿತ್ತು, ದೇಗುಲದ ಮುಂದೆ ಸಣ್ಣ ದೀಪವೊಂದು ಪ್ರಕಾಶಮಾನವಾಗಿ ಉರಿಯುತ್ತಿತ್ತು. ಅರ್ಚಕನ ಮೈಮೇಲೆ ದೇವಿ ಬರುವ ಸಮಯವಾಗಿತ್ತು.
ವಾದ್ಯದ ಸದ್ದು ತಾರಕ್ಕೇರಿದಂತೆ ಪಂಡಾ ಎದ್ದುನಿಂತರು, ತಮ್ಮ ಕಾಲುಗಳ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದರು. ಯಾರೂ ಏನೂ ಮಾತನಾಡುತ್ತಿಲ್ಲ, ಎಲ್ಲರಿಗೂ ದೇವಿ ಅವರ ಮೈಮೇಲೆ ಬಂದಿದ್ದಾಳೆ ಎಂಬುದು ತಿಳಿದಿತ್ತು. ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ಭಕ್ತರು ನೂಕುನುಗ್ಗಲಿನಲ್ಲಿ ಸೇರಿದ್ದರು. ಭಕ್ತರ ಪ್ರಶ್ನೆಗಳು ಭಯ್ಯಾ ಲಾಲ್ ಅವರ ಕಿವಿಗಳಿಗೆ ಬೀಳುತ್ತಿದ್ದಂತೆ ಅವರು ಒಂದು ಹಿಡಿ ಧಾನ್ಯಗಳನ್ನು ಕೈಯಲ್ಲಿ ತೆಗೆದುಕೊಳ್ಳುತ್ತಾರೆ. ಕಾಳನ್ನು ನೆಲದ ಮೇಲೆ ಎಸೆಯುತ್ತಾರೆ. ನೆಲದ ಮೇಲೆ ಬಿದ್ದ ಕಾಳುಗಳನ್ನು ಎಣಿಸಿ ದೇವಿ ಸಂತುಷ್ಟಳಾಗಿದ್ದಾಳೋ, ಇಲ್ಲವೇ ಕೋಪಗೊಂಡಿದ್ದಾಳೋ ಎಂದು ಜನ ಅರ್ಥ ಮಾಡಿಕೊಳ್ಳುತ್ತಿದ್ದರು.
ಭಕ್ತರು ದೂಪದ ಬೂದಿಯನ್ನು ಪವಿತ್ರ ವಿಭೂತಿಯಂತೆ ಕೈಗೆತ್ತಿಕೊಂಡು ಸೇವಿಸುತ್ತಿದ್ದರು. ಅದೇ ಅವರ ಕಾಯಿಲೆಗೆ ಮದ್ದು. ಮರ್ಹಾಯಿ ಮಾತೆಯ ಈ ಪ್ರಸಾದ ತಮ್ಮ ಎಲ್ಲಾ ಸಮಸ್ಯೆಗಳನ್ನೂ ದೂರ ಮಾಡುತ್ತದೆ ಎಂದು ಭಕ್ತರು ನಂಬುತ್ತಾರೆ. "ನನಗೆ ಗೊತ್ತಿರುವಂತೆ, ಇದು ಯಾವತ್ತೂ ಕೈಕೊಟ್ಟಿಲ್ಲ,” ಎಂದು ಪ್ರಸಾದದ ಶಕ್ತಿಯ ಬಗ್ಗೆ ಪಂಡಾ ಅವರು ನಗುತ್ತಾ ಹೇಳುತ್ತಾರೆ.
ತಮ್ಮ ರೋಗ ಗುಣವಾಗಲು ಎಂಟು ದಿನಗಳು ಬೇಕು ಎಂದು ಜನರು ಹೇಳುತ್ತಾರೆ. ಭಯ್ಯಾ ಲಾಲ್ ತಮ್ಮ ಮಾತನ್ನು ಮುಂದುವರಿಸುತ್ತಾ, "ನೀವು ದೇವಿಗೆ ನಿಮ್ಮ ಇಷ್ಟದ ಯಾವುದೇ ನೈವೇದ್ಯವನ್ನು ಇಡಬಹುದು: ತೆಂಗಿನಕಾಯಿ ಅಥವಾ ಅಥ್ವಾಯಿ [ಗೋಧಿ ಹಿಟ್ಟಿನಿಂದ ಮಾಡಿದ ಸಣ್ಣ ಪೂರಿಗಳು] ಇರಬಹುದು, ಕನ್ಯಾ ಭೋಜನ್ ಅಥವಾ ಭಾಗವತ್ - ಯಾವ ನೈವೇದ್ಯ ಅರ್ಪಿಸಬೇಕು ಎಂಬುದು ಭಕ್ತರಿಗೆ ಬಿಟ್ಟಿದ್ದು,” ಎಂದು ಹೇಳುತ್ತಾರೆ.
'ನಾವು ನಮ್ಮ ಈ ನೆಲವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಬೇಸರ ಎಲ್ಲರಿಗೂ ಇದೆ. ನಾವು ಈ ಪವಿತ್ರವಾದ ಸ್ಥಳವನ್ನು ಕಳೆದುಕೊಳ್ಳುತ್ತೇವೆ ಎಂದು ನನಗೂ ಅನ್ನಿಸುತ್ತದೆ. ಹಳ್ಳಿಯ ಜನ ಕೆಲಸ ಹುಡುಕಿಕೊಂಡು ಹೋದರೆ, ನಮ್ಮ ಜನರಿಗೆ ಏನಾಗಬಹುದು ಎಂದು ಯಾರಿಗೆ ಗೊತ್ತುʼ
ಸ್ಥಳೀಯರು ಬಾಬಾಜು ಕಿ ಬಿಮಾರಿ ಎಂದು ಕರೆಯುವ, ಬಾಬಾಜು ಎಂಬ ದೈವಶಕ್ತಿ ತರುವ ರೋಗವೆಂದು ನಂಬಲಾಗಿರುವ ಟೈಫಾಯಿಡ್ ಎಲ್ಲಾ ಕಡೆಗಳಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಜನರು ಆತಂಕಗೊಂಡಿದ್ದಾರೆ. ರಾಜ್ಯಾದ್ಯಂತ ಮಹಿಳೆಯರ ಮತ್ತು ಬಾಣಂತಿಯರ ಆರೋಗ್ಯವನ್ನು ನಿರ್ಲಕ್ಷಿಸಲಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5, 2019-21 ರ ಪ್ರಕಾರ, ಹುಟ್ಟುವ 1,000 ಶಿಶುಗಳಲ್ಲಿ 41 ಸಾಯುತ್ತವೆ, ಮಧ್ಯಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಶಿಶು ಮರಣ ಪ್ರಮಾಣವನ್ನು ಹೊಂದಿದೆ.
ಪನ್ನಾ ಟೈಗರ್ ರಿಸರ್ವ್ ಮತ್ತು ಸುತ್ತಮುತ್ತಲಿನ ಗ್ರಾಮಗಳು ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳಿಗಾಗಿ ಕಾಯುತ್ತಿವೆ. ಹತ್ತಿರ ಇರುವ ಸರ್ಕಾರಿ ಆಸ್ಪತ್ರೆಯು ಸುಮಾರು 54 ಕಿಲೋ ಮೀಟರ್ ದೂರದ ಪನ್ನಾ ಪಟ್ಟಣದಲ್ಲಿದೆ, ಇನ್ನೊಂದು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ) ಸುಮಾರು 22 ಕಿಲೋ ಮೀಟರ್ ದೂರದ ಅಮಂಗಂಜ್ನಲ್ಲಿದೆ.
"ಇಲ್ಲಿನ ಜನರು ಆಸ್ಪತ್ರೆಗಳಿಗೆ ಹೋಗಿ ವೈದ್ಯರನ್ನು ನೋಡಿ ಅವರು ಹೇಳಿದ ಮದ್ದನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ," ಎಂದು ಪನ್ನಾದಲ್ಲಿ ಸುಮಾರು ಏಳು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೋಶಿಕಾ ಎಂಬ ಸರ್ಕಾರೇತರ ಸಂಸ್ಥೆಯ ದೇವಶ್ರೀ ಸೋಮಾನಿ ಹೇಳುತ್ತಾರೆ. "ನಾಟಿ ಮದ್ದನ್ನು ನಂಬುವ ಇವರನ್ನು ವೈದ್ಯರ ಬಳಿಗೆ ಹೋಗುವಂತೆ ಮಾಡುವುದು ಒಂದು ದೊಡ್ಡ ಸವಾಲು. ಇಲ್ಲಿನ ಹಳ್ಳಿಗಳ ಜನರು ದೇವರು ಅಥವಾ ಸತ್ತುಹೋಗಿರುವ ತಮ್ಮ ಹಿರಿಯರ ಕೋಪದಿಂದಾಗಿ ರೋಗಗಳು ಬರುತ್ತವೆ ಎಂದು ನಂಬುತ್ತಾರೆ,” ಎಂದು ದೇವಶ್ರೀ ಹೇಳುತ್ತಾರೆ.
ಇವರಿಗೆ ಸಿಗುವ ಅಲೋಪತಿ 'ಚಿಕಿತ್ಸೆ'ಯೂ ಹೆಚ್ಚಾಗಿ ಅವರ ಜಾತಿಯ ಗುರುತಿನಿಂದ ಪ್ರಭಾವಿತವಾಗಿರುತ್ತದೆ, ಹೀಗಾಗಿ ಅವರು ತಮ್ಮ ಆರೋಗ್ಯದ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರ ಕಂಡುಕೊಳ್ಳಲು ಹಿಂದೆಮುಂದೆ ನೋಡುತ್ತಾರೆ ಎಂದು ದೇವಶ್ರೀ ವಿವರಿಸುತ್ತಾರೆ.
*****
ಈ ಪ್ರದೇಶದಲ್ಲಿ ಬರಲಿರುವ ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ (ಕೆಬಿಆರ್ಎಲ್ಪಿ) ಪನ್ನಾ ಮತ್ತು ಛತ್ತರ್ಪುರದ ಹಲವು ಗ್ರಾಮಗಳನ್ನು ಮುಳುಗಿಸುತ್ತದೆ. ದಶಕಗಳಿಂದ ಪೈಪ್ಲೈನ್ನಲ್ಲಿ ವಾಸಿಸುತ್ತಿದ್ದರೂ, ಈ ಜನರಿಗೆ ಎಲ್ಲಿಗೆ ಹೋಗಬೇಕು ಮತ್ತು ಯಾವಾಗ ಹೋಗಬೇಕು ಎಂಬುದು ಇನ್ನೂ ಗೊತ್ತಿಲ್ಲ. “ಖೇತಿ ಬಂದ್ ಹೈ ಅಬ್” [ಕೃಷಿ ಕೆಲಸ ನಿಂತಿದೆ],” ಎಂದು ಹೇಳುವ ಗಂಡಸರಿಗೆ ಎಲ್ಲವೂ ಕೆಲಕಾಲದ ನಂತರ ಬದಲಾಗಲಿದೆ ಎಂಬುದು ಗೊತ್ತಾಗಿದೆ. (ಇದನ್ನು ಓದಿ: ಮುಳುಗು ನೀರಿನಲ್ಲಿ ಪನ್ನಾ ಹುಲಿ ಮೀಸಲು ಪ್ರದೇಶದ ಆದಿವಾಸಿ ಜನರ ಬದುಕು ).
"ನಾವು ನಮ್ಮ ಭಗವತಿಯನ್ನು ಕೂಡ ನಮ್ಮೊಂದಿಗೆ ಕರೆದುಕೊಂಡು ಹೋಗುತ್ತೇವೆ," ಎಂದು ಭೈಯಾ ಲಾಲ್ ಹೇಳುತ್ತಾರೆ. “ಎಲ್ಲರೂ ತಾವು ತಮ್ಮ ನೆಲವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ನೋವಿನಲ್ಲಿದ್ದಾರೆ. ಆದರೆ ನಾವು ಈ ಪವಿತ್ರವಾದ ಸ್ಥಳವನ್ನು ಕಳೆದುಕೊಳ್ಳುತ್ತೇವೆ. ಹಳ್ಳಿಯ ಜನ ಕೆಲಸ ಹುಡುಕಿಕೊಂಡು ಹೋದರೆ, ನಮ್ಮ ಜನರಿಗೆ ಏನಾಗಬಹುದು ಎಂದು ಯಾರಿಗೆ ಗೊತ್ತು. ಗ್ರಾಮ ನುಚ್ಚುನೂರಾಗುತ್ತದೆ. ನಮಗೆ ಬೇರೆ ಕಡೆ ಹೋಗಲು ಸ್ವಲ್ಪ ಜಾಗವನ್ನು ಕೊಟ್ಟರೆ, ಅಲ್ಲಿ ಭಗವತಿಯನ್ನು ಮರುಪ್ರತಿಷ್ಠೆ ಮಾಡಬಹುದು, ಆಗ ನಾವೆಲ್ಲರೂ ಕ್ಷೇಮವಾಗಿರುತ್ತೇವೆ,” ಎಂದು ಅವರು ಹೇಳುತ್ತಾರೆ.
ಸಂತೋಷ್ ಕುಮಾರ್ ಅವರು ಸುಮಾರು 10 ಕಿಲೋ ಮೀಟರ್ ದೂರದ ಮಜ್ಗವಾನ್ನಿಂದ ಬಂದಿದ್ದಾರೆ. ಸುಮಾರು 40 ವರ್ಷಗಳಿಂದ ನಿರಂತರವಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾ ಬಂದಿರುವ 58 ವರ್ಷ ವಯಸ್ಸಿನ ಇವರು, "ತಸಲ್ಲಿ ಮಿಲ್ತೀ ಹೈ [ಮನಸ್ಸಿಗೆ ಶಾಂತಿ ಸಿಗುತ್ತದೆ],” ಎಂದು ಹೇಳುತ್ತಾರೆ.
"ಈಗ ನಾವು ಜಾಗ ಖಾಲಿ ಮಾಡಬೇಕು, ಬಹುಶಃ ಮುಂದಿನ ಒಂದೆರಡು ವರ್ಷ ದೇವಿಯ ದರ್ಶನ ಪಡೆಯಲು ಬರಲು ಸಾಧ್ಯವಿಲ್ಲವೆಂದು ನಾನು ಈಗ ಬಂದಿದ್ದೇನೆ,” ಎಂದು ತಮ್ಮ ಐದಾರು ಎಕರೆ ಭೂಮಿಯಲ್ಲಿ ಮಸೂರ್ [ದ್ವಿದಳ ಧಾನ್ಯ], ಚನ್ನಾ [ಕಡಲೆ] ಮತ್ತು ಗೆಹುನ್ [ಗೋಧಿ] ಬೆಳೆಯುವ ಈ ರೈತ ಹೇಳುತ್ತಾರೆ.
ಈಗ 20ರ ಹರೆಯದಲ್ಲಿರುವ ತಮ್ಮ ಮಗ ದೇವಿಯ ಸೇವೆ ಮಾಡುವ ಸಂಪ್ರದಾಯವನ್ನು ಮುಂದುವರಿಸುತ್ತಾನೋ ಇಲ್ಲವೋ ಎಂಬ ಖಚಿತತೆ ಇಲ್ಲದ ಭಯ್ಯಾ ಲಾಲ್ ಅವರು, “ವೋ ತೋ ಉನ್ಕೆ ಊಪರ್ ಹೈ [ಅದೆಲ್ಲಾ ಅವನ ಕೈಯಲ್ಲಿದೆ],” ಎಂದು ನಗುತ್ತಾ ಹೇಳುತ್ತಾರೆ. ಅವರ ಮಗ ತಮ್ಮ ಐದು ಎಕರೆ ಜಮೀನಿನಲ್ಲಿ ಗೆಹುನ್ [ಗೋಧಿ] ಮತ್ತು ಸಾರ್ಸನ್ [ಸಾಸಿವೆ] ಕೃಷಿ ಮಾಡುತ್ತಾರೆ. ಬೆಳೆದ ಸ್ವಲ್ಪ ಬೆಳೆಯನ್ನು ಮಾರಿ ಉಳಿದದ್ದನ್ನು ತಮ್ಮ ಮನೆ ಬಳಕೆಗೆ ಇಟ್ಟುಕೊಳ್ಳುತ್ತಾರೆ.
ಅಮಂಗಂಜ್ನಿಂದ ದೇವಾಲಯಕ್ಕೆ ಬಂದಿರುವ ರೈತ ಮಹಿಳೆ ಮಧು ಬಾಯಿಯವರು "ಆರಾಮ್ ಮಿಲ್ತೀ ಹೈ [ನೆಮ್ಮದಿ ಸಿಗುತ್ತದೆ]," ಎಂದು ಹೇಳುತ್ತಾರೆ. "ದರ್ಶನ್ ಕೆ ಲಿಯೇ ಆಯೇ ಹೈ [ದರ್ಶನ ಪಡೆಯಲು ಬಂದಿದ್ದೇವೆ]," ಎಂದು ಇತರ ಹೆಂಗಸರೊಂದಿಗೆ ನೆಲದ ಮೇಲೆ ಕುಳಿತುಕೊಂಡಿರುವ 40 ವರ್ಷ ವಯಸ್ಸಿನ ಮಧು ಬಾಯಿ ಹೇಳುತ್ತಾರೆ. ಇವರು ಮಾತನಾಡುವಾಗ ಡೋಲು ಬಡಿಯುತ್ತಾ ಹಾಡುವ ಲಯಬದ್ಧ ಸದ್ದು ಕೇಳುತ್ತಿರುತ್ತದೆ.
ಅವರು ಮಾತನಾಡುತ್ತಿರುವಂತೆ, ಅಕ್ಕಪಕ್ಕ ಕೂತವರ ಮಾತುಗಳೂ ಪರಸ್ಪರ ಕೇಳದಷ್ಟು ಜೋರಾಗಿ ಢೋಲ್ ಮತ್ತು ಹಾರ್ಮೋನಿಯಂನ ಸದ್ದು ತಾರಕಕ್ಕೇರುತ್ತದೆ. “ದರ್ಶನ್ ಕರ್ಕೆ ಆತೇ ಹೈ, [ದರ್ಶನ ಮಾಡಿ ಬರುತ್ತೇವೆ],” ಎಂದು ಮಧು ಬಾಯಿ ತಮ್ಮ ಸೀರೆಯನ್ನು ಸರಿಪಡಿಸಿಕೊಳ್ಳುತ್ತಾ ಎದ್ದುನಿಲ್ಲುತ್ತಾರೆ.
ಅನುವಾದ: ಚರಣ್ ಐವರ್ನಾಡು