ನವಾಲ್‌ಗಾವ್ಹಾಣ್ ಗ್ರಾಮದಲ್ಲಿ ಸೂರ್ಯ ಮುಳುಗಲು ಪ್ರಾರಂಭಿಸುತ್ತಿದ್ದಂತೆ, ಯುವಕರು ಮತ್ತು ಹಿರಿಯರು ಸೇರಿ ಶಾಲೆಯ ಆಟದ ಮೈದಾನದ ಕಡೆಗೆ ನಡೆಯುತ್ತಾರೆ. ಅಲ್ಲಿ ಅವರು ಕ್ರೀಡಾ ಮೈದಾನವನ್ನು ಸ್ವಚ್ಛಗೊಳಿಸುವುದು, ಕಲ್ಲುಗಳು ಮತ್ತು ಕಸವನ್ನು ಹೆಕ್ಕಿ ತೆಗೆಯುವುದು, ಸುಣ್ಣದ ಪುಡಿಯಿಂದ ಗಡಿ ರೇಖೆಗಳನ್ನು ಗುರುತಿಸುವುದು ಮತ್ತು ಫ್ಲಡ್ ಲೈಟುಗಳನ್ನು ಪರಿಶೀಲಿಸುವ ಕೆಲಸಗಳಲ್ಲಿ ನಿರತರಾಗುತ್ತಾರೆ.

8ರಿಂದ 16 ವರ್ಷದ ಮಕ್ಕಳು ಶೀಘ್ರದಲ್ಲೇ ತಮ್ಮ ನೀಲಿ ಜರ್ಸಿ ತೊಟ್ಟು ಸಿದ್ಧರಾಗುತ್ತಾರೆ. ನಂತರ ಅವರನ್ನು ತಲಾ ಏಳು ಆಟಗಾರರ ತಂಡಗಳಾಗಿ ವಿಂಗಡಿಸಲಾಗುತ್ತದೆ.

ಕಬ್ಬಡ್ಡಿ! ಕಬ್ಬಡ್ಡಿ! ಕಬ್ಬಡ್ಡಿ!

ಆಟವು ಪ್ರಾರಂಭವಾಗುತ್ತದೆ ಮತ್ತು ಕತ್ತಲೆ ದಟ್ಟವಾಗುವ ತನಕ, ಮರಾಠಾವಾಡಾದ ಹಿಂಗೋಲಿ ಜಿಲ್ಲೆಯ ಹಳ್ಳಿಯ ಕುಟುಂಬಗಳು ಮತ್ತು ಸ್ನೇಹಿತರು ಈ ಹುರುಪಿನ ರಾಷ್ಟ್ರೀಯ ಆಟವನ್ನು ಆನಂದಿಸುತ್ತಾ ತಮ್ಮ ಉತ್ಸಾಹಭರಿತ ಕೂಗಿನಿಂದ ಸಂಜೆಯ ಮೌನಕ್ಕೆ ಒಂದಷ್ಟು ಕಲರವವನ್ನು ತುಂಬುತ್ತಾರೆ.

ಒಬ್ಬ ಆಟಗಾರ ಉಸಿರು ಬಿಗಿಹಿಡಿದು ಅಂಗಣದ ಎದುರಾಳಿ ತಂಡದ ಬದಿಗೆ ಪ್ರವೇಶಿಸುತ್ತಾನೆ. ತನ್ನ ಅಂಕಣಕ್ಕೆ ಮರಳುವ ಮೊದಲು ಅವನು ಸಾಧ್ಯವಾದಷ್ಟು ಆಟಗಾರರನ್ನು ಮುಟ್ಟಿ ಹೊರಹಾಕಲು ಪ್ರಯತ್ನಿಸುತ್ತಾನೆ. ಮರಳಿ ತನ್ನ ಅಂಕಣಕ್ಕೆ ಬರುವವರೆಗೆ ಆಟಗಾರ ಕಬ್ಬಡ್ಡಿ ಜಪವನ್ನು ನಿಲ್ಲಿಸುವಂತಿಲ್ಲ. ಒಂದು ವೇಳೆ ಎದುರಾಳಿ ತಂಡಕ್ಕೆ ಸಿಕ್ಕಿಬಿದ್ದರೆ, ಅವನನ್ನು ಆಟದಿಂದ ಹೊರಹಾಕಲಾಗುತ್ತದೆ.

ಕಬ್ಬಡ್ಡಿ ಆಟವನ್ನು ನೋಡಿ!

ನವಾಲ್‌ಗಾಂವ್ಹಾಣ್‌ ಗ್ರಾಮದ ಆಟಗಾರರು ಸಾಮಾನ್ಯ ಹಿನ್ನೆಲಯವರು ಮತ್ತು ಹೆಚ್ಚಿನವರು ಮರಾಠಾ ಸಮುದಾಯಕ್ಕೆ ಸೇರಿದವರು ಮತ್ತು ಕೃಷಿಕರು

ಶುಭಂ ಕೊರ್ಡೆ ಮತ್ತು ಕನ್ಬಾ ಕೊರ್ಡೆ ಎಂಬ ಇಬ್ಬರು ಮುಖ್ಯ ಆಟಗಾರರನ್ನು ಎಲ್ಲರೂ ನೋಡುತ್ತಿದ್ದಾರೆ. ಎದುರಾಳಿಗಳು ಕೂಡ ಅವರಿಗೆ ಹೆದರುತ್ತಾರೆ. "ಅವರು ತಮ್ಮ ರಕ್ತನಾಳಗಳಲ್ಲಿ ಕಬಡ್ಡಿ ಹರಿಯುತ್ತಿರುವಂತೆ ಆಡುತ್ತಾರೆ" ಎಂದು ಗುಂಪಿನಲ್ಲಿದ್ದ ಯಾರೋ ನಮಗೆ ಹೇಳಿದರು.

ಶುಭಂ ಮತ್ತು ಕಾನ್ಬಾ ತಮ್ಮ ತಂಡಕ್ಕಾಗಿ ಈ ಪಂದ್ಯವನ್ನು ಗೆದ್ದರು. ಎಲ್ಲರೂ ಸೇರಿ ಮಾತಿನಲ್ಲಿ ಮುಳುಗುತ್ತಾರೆ. ಆಟವನ್ನು ಸೂಕ್ಷ್ಮವಾಗಿ ಚರ್ಚಿಸಲಾಗುತ್ತದೆ ಮತ್ತು ಮರುದಿನಕ್ಕೆ ಹೊಸ ಯೋಜನೆಯನ್ನು ತಯಾರಿಸಲಾಗುತ್ತದೆ. ನಂತರ ಆಟಗಾರರು ಮನೆಗೆ ತೆರಳುತ್ತಾರೆ.

ಇದು ಮಹಾರಾಷ್ಟ್ರದ ನವಾಲ್‌ಗಾಂವ್ಹಾಣ್‌ ಗ್ರಾಮದ ದೈನಂದಿನ ನೋಟ. "ನಮ್ಮ ಹಳ್ಳಿಯಲ್ಲಿ ಕಬಡ್ಡಿ ಆಟದ ಸುದೀರ್ಘ ಸಂಪ್ರದಾಯವಿದೆ. ಅನೇಕ ತಲೆಮಾರುಗಳು ಈ ಕ್ರೀಡೆಯನ್ನು ಆಡಿವೆ ಮತ್ತು ಇಂದಿಗೂ, ಪ್ರತಿ ಮನೆಯಲ್ಲಿ ಕನಿಷ್ಠ ಒಬ್ಬ ಆಟಗಾರನನ್ನು ನೀವು ಕಾಣಬಹುದು " ಎಂದು ಮಾರೋತಿರಾವ್ ಕೊರ್ಡೆ ಹೇಳುತ್ತಾರೆ. ಅವರು ಗ್ರಾಮದ ಸರಪಂಚ್. "ಒಂದು ದಿನ ನವಾಲ್‌ಗಾಂವ್ಹಾಣ್‌ ಮಕ್ಕಳು ದೊಡ್ಡ ಸ್ಥಳಗಳಲ್ಲಿ ಆಡಲಿದ್ದಾರೆ. ಅದು ನಮ್ಮ ಕನಸು.”

ಕಬಡ್ಡಿಯನ್ನು ಭಾರತ ಉಪಖಂಡದಲ್ಲಿ ಅನೇಕ ಶತಮಾನಗಳಿಂದ ಆಡಲಾಗುತ್ತಿದೆ. 1918ರಲ್ಲಿ ಈ ಕ್ರೀಡೆಯು ರಾಷ್ಟ್ರೀಯ ಆಟದ ಸ್ಥಾನಮಾನವನ್ನು ಪಡೆಯಿತು. 1936 ರಲ್ಲಿ ಬರ್ಲಿನ್ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಇದು ತನ್ನ ಮೊದಲ ಅಂತರರಾಷ್ಟ್ರೀಯ ಮಾನ್ಯತೆಯನ್ನು ಪಡೆಯಿತು. 2014ರಲ್ಲಿ ಪ್ರೊ ಕಬಡ್ಡಿ ಲೀಗ್ ಪ್ರಾರಂಭವಾದಾಗಿನಿಂದ, ಈ ಆಟವು ಹೊಸ ಜನಪ್ರಿಯತೆಯನ್ನು ಗಳಿಸಿದೆ.

ಈ ಹಳ್ಳಿಯ ಆಟಗಾರರು ಸಾಧಾರಣ ಹಿನ್ನೆಲೆಯಿಂದ ಬಂದವರು. ಕೆಲವು ಕುಟುಂಬಗಳನ್ನು ಹೊರತುಪಡಿಸಿ, ಇಲ್ಲಿನ ಹೆಚ್ಚಿನ ನಿವಾಸಿಗಳು ಮರಾಠಾ ಸಮುದಾಯಕ್ಕೆ ಸೇರಿದವರು ಮತ್ತು ಕೃಷಿಕರು. ಈ ಪ್ರದೇಶವು ಕಲ್ಲಿನ ಹರವುಗಳೊಂದಿಗೆ ಕೆಂಪು ಲ್ಯಾಟರೈಟ್ ಮಣ್ಣನ್ನು ಹೊಂದಿದೆ.

Left: Shubham and Kanba Korde won the first and second prize for best players in the Matrutva Sanman Kabaddi tournament in 2024.
PHOTO • Pooja Yeola
Right: Trophies and awards won by kabaddi players from Navalgavhan
PHOTO • Pooja Yeola

ಎಡ: ಶುಭಂ ಮತ್ತು ಕಾನ್ಬಾ ಕೊರ್ಡೆ 2024ರಲ್ಲಿ ಮಾತೃತ್ವ ಸಮ್ಮಾನ್ ಕಬಡ್ಡಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರರಿಗಾಗಿ ಮೊದಲ ಮತ್ತು ಎರಡನೇ ಬಹುಮಾನವನ್ನು ಗೆದ್ದರು. ಬಲ: ನವಾಲ್‌ಗಾಂವ್ಹಾಣ್‌ ಗ್ರಾಮದ ಕಬಡ್ಡಿ ಆಟಗಾರರು ಗೆದ್ದ ಟ್ರೋಫಿಗಳು ಮತ್ತು ಪ್ರಶಸ್ತಿಗಳು

Left: Kabaddi has been played in the Indian subcontinent for many centuries. The Pro-Kabaddi league started in 2014 has helped popularise the game.
PHOTO • Nikhil Borude
Right: Players sit down after practice to discuss the game
PHOTO • Pooja Yeola

ಎಡ: ಕಬಡ್ಡಿಯನ್ನು ಭಾರತ ಉಪಖಂಡದಲ್ಲಿ ಅನೇಕ ಶತಮಾನಗಳಿಂದ ಆಡಲಾಗುತ್ತಿದೆ. 2014ರಲ್ಲಿ ಪ್ರಾರಂಭವಾದ ಪ್ರೊ ಕಬಡ್ಡಿ ಲೀಗ್ ಆಟವನ್ನು ಜನಪ್ರಿಯಗೊಳಿಸಲು ಸಹಾಯ ಮಾಡಿದೆ.  ಬಲ: ಆಟಗಾರರು ಅಭ್ಯಾಸದ ನಂತರ ಕುಳಿತು ಆಟದ ಬಗ್ಗೆ ಚರ್ಚಿಸುತ್ತಿದ್ದಾರೆ

ಶುಭಂ ಕೂಡ ಕೃಷಿ ಕುಟುಂಬಕ್ಕೆ ಸೇರಿದವಳು. ಅವರು ಆರು ವರ್ಷದವರಾಗಿದ್ದಾಗಿನಿಂದ ಕಬಡ್ಡಿ ಆಡುತ್ತಿದ್ದಾರೆ. "ನನ್ನ ಹಳ್ಳಿಯ ವಾತಾವರಣ ಸ್ಪೂರ್ತಿದಾಯಕವಾಗಿದೆ. ನಾನು ಪ್ರತಿದಿನ ಇಲ್ಲಿಗೆ ಬಂದು ಕನಿಷ್ಠ ಅರ್ಧ ಗಂಟೆ ಅಭ್ಯಾಸ ಮಾಡುತ್ತೇನೆ" ಎಂದು 6ನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಅವನು ಹೇಳುತ್ತಾನೆ. "ನಾನು ಪುಣೇರಿ ಪಲ್ಟಣ್ (ಪ್ರೊ ಕಬಡ್ಡಿ ಲೀಗ್ ತಂಡ) ತಂಡದ ದೊಡ್ಡ ಅಭಿಮಾನಿ. ಭವಿಷ್ಯದಲ್ಲಿ ಆ ತಂಡದ ಪರವಾಗಿ ಆಡಬೇಕು" ಎನ್ನುತ್ತಾನೆ.

ಶುಭಮ್ ಮತ್ತು ಕನ್ಬಾ ನೆರೆಯ ಗ್ರಾಮವಾದ ಭಂಡೆಗಾಂವ್ ಎನ್ನುವ ಊರಿನ ಸುಖದೇವಾನಂದ್ ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ಕನ್ಬಾ 10ನೇ ತರಗತಿಯಲ್ಲಿದ್ದಾನೆ. ಅವರೊಂದಿಗೆ ವೇದಾಂತ್ ಕೊರ್ಡೆ ಮತ್ತು ಆಕಾಶ್ ಕೊರ್ಡೆ ಇಬ್ಬರು ಭರವಸೆಯ ರೈಡರ್‌ಗಳು - ಅವರು ಒಂದೇ ಬಾರಿಗೆ 4-5 ಆಟಗಾರರನ್ನು ಔಟ್ ಮಾಡುತ್ತಾರೆ. "ಬ್ಯಾಕ್-ಕಿಕ್, ಸೈಡ್-ಕಿಕ್ ಮತ್ತು ಸಿಂಹಾಚಿ ಉಡಿ [ಜಿಗಿದು ಔಟ್‌ ಮಾಡಲು ಪ್ರಯತ್ನಿಸುವುದು] ಆಟದ ನೆಚ್ಚಿನ ಭಾಗಗಳಾಗಿವೆ" ಎಂದು ಅವರು ಹೇಳುತ್ತಾರೆ. ಅವರೆಲ್ಲರೂ ಆಟದಲ್ಲಿ ಆಲ್ ರೌಂಡರುಗಳು.

ನವಾಲ್‌ಗಾಂವ್ಹಾಣ್‌ ಗ್ರಾಮದಲ್ಲಿ ತೂಕದ ಆಧರಿಸಿ ತಂಡಗಳನ್ನು ರಚಿಸಲಾಗುತ್ತದೆ. 30 ಕೇಜಿಗಿಂತ ಕಡಿಮೆ, 50 ಕೆ.ಜಿ.ಗಿಂತ ಕಡಿಮೆ ಮತ್ತು ಓಪನ್ ಗುಂಪು.

ಕೈಲಾಸ್ ಕೊರ್ಡೆ ಓಪನ್ ತಂಡದ ನಾಯಕ. "ನಾವು ಇಲ್ಲಿಯವರೆಗೆ ಅನೇಕ ಟ್ರೋಫಿಗಳನ್ನು ಗೆದ್ದಿದ್ದೇವೆ" ಎಂದು 26 ವರ್ಷದ ಕೈಲಾಸ್ ಹೇಳುತ್ತಾರೆ. ಅವರು 2024ರಲ್ಲಿ ಮಾತೃತ್ವ ಸಮ್ಮಾನ್ ಕಬಡ್ಡಿ ಪಂದ್ಯಾವಳಿ, 2022, 23ರಲ್ಲಿ ವಸುಂಧರಾ ಫೌಂಡೇಶನ್ ಕಬಡ್ಡಿ ಚಶಕ್ ಪಂದ್ಯಾವಳಿಗಳನ್ನು ಗೆದ್ದರು. ಸುಖದೇವಾನಂದ ಕಬಡ್ಡಿ ಕ್ರೀಡಾ ಮಂಡಲ್ ಆಯೋಜಿಸಿದ್ದ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿಯೂ ಅವರು ಗೆದ್ದಿದ್ದಾರೆ.

"ಜನವರಿ 26, ಗಣರಾಜ್ಯೋತ್ಸವದಂದು ನಡೆಯುವ ಪಂದ್ಯಗಳು ವಿಶೇಷವಾಗಿರುತ್ತವೆ. ನಾವು ಆಡುವುದನ್ನು ನೋಡಲು ಜನರು ಬರುತ್ತಾರೆ - ನೆರೆಯ ಹಳ್ಳಿಗಳ ತಂಡಗಳು ಸ್ಪರ್ಧಿಸಲು ಬರುತ್ತವೆ. ನಾವು ಪ್ರಶಸ್ತಿಗಳು ಮತ್ತು ನಗದು ಬಹುಮಾನಗಳನ್ನು ಸಹ ಪಡೆಯುತ್ತೇವೆ.”  ಇನ್ನೂ ಅನೇಕ ಸ್ಪರ್ಧೆಗಳು ನಡೆಯಬೇಕು ಎನ್ನುವುದು ಅವರ ಬಯಕೆ. ಪ್ರಸ್ತುತ, ಇವುಗಳನ್ನು ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಮಾತ್ರ ನಡೆಸಲಾಗುತ್ತದೆ. ಯುವ ಆಟಗಾರರಿಗೆ ಹೆಚ್ಚು ಹೆಚ್ಚು ಪಂದ್ಯಾಟಗಳು ಬೇಕಾಗುತ್ತವೆ ಎಂದು ಕೈಲಾಸ್ ಹೇಳುತ್ತಾರೆ.

Left : Kailas Korde captains and trains the young men’s kabaddi group in Navalgavhan. Last year he attended a 10-day training session in Pune
PHOTO • Pooja Yeola
Right: Narayan Chavan trains young boys and is also preparing for police recruitment exams. He says playing kabaddi has helped him build stamina
PHOTO • Pooja Yeola

ಎಡ: ಕೈಲಾಸ್ ಕೊರ್ಡೆ ನವಾಲ್‌ಗಾಂವ್ಹಾಣ್‌ ಯುವಕರ ಕಬಡ್ಡಿ ಗುಂಪನ್ನು ಮುನ್ನಡೆಸುತ್ತಾರೆ ಮತ್ತು ತರಬೇತಿ ನೀಡುತ್ತಾರೆ. ಕಳೆದ ವರ್ಷ ಅವರು ಪುಣೆಯಲ್ಲಿ ನಡೆದ 10 ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಬಲ: ನಾರಾಯಣ್ ಚವಾಣ್ ಚಿಕ್ಕ ಹುಡುಗರಿಗೆ ತರಬೇತಿ ನೀಡುತ್ತಾರೆ ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಕಬಡ್ಡಿ ಆಟ ತ್ರಾಣ ಹೆಚ್ಚಿಸಲು ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ

ಕೈಲಾಸ್ ಪೊಲೀಸ್ ನೇಮಕಾತಿಗಾಗಿ ತಯಾರಿ ನಡೆಸುತ್ತಿರುವ ಅವರು ಪ್ರತಿದಿನ 13 ಕಿಲೋಮೀಟರ್ ದೂರದಲ್ಲಿರುವ ಹಿಂಗೋಲಿಗೆ ಹೋಗಿ ಅಲ್ಲಿನ ಸ್ಟಡಿ ರೂಮ್‌ ಒಂದರಲ್ಲಿ ಎರಡು ಗಂಟೆಗಳ ಕಾಲ ಓದುತ್ತಾರೆ. ನಂತರ ಅವರು ಆಟದ ಮೈದಾನಕ್ಕೆ ಹೋಗಿ ತಮ್ಮ ವ್ಯಾಯಾಮ ಮತ್ತು ದೈಹಿಕ ತರಬೇತಿ ಅಭ್ಯಾಸ ಮಾಡುತ್ತಾರೆ. ಕ್ರೀಡೆ, ವ್ಯಾಯಾಮ ಮತ್ತು ಅವರ ಶಿಕ್ಷಣದ ಕುರಿತಾದ ಅವರ ಬದ್ಧತೆ ಅನೇಕ ಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದೆ.

"ನವಾಲ್‌ಗಾಂವ್ಹಾಣ್‌ ಮತ್ತು ಸುತ್ತಮುತ್ತಲಿನ ಹಳ್ಳಿಗಳಾದ ಸತಾಂಬ, ಭಂಡೆಗಾಂವ್ ಮತ್ತು ಇಂಚಾದ ಅನೇಕ ಯುವಕರಿಗೆ ಕಬಡ್ಡಿ ಅವರ ವೃತ್ತಿಜೀವನಕ್ಕೆ ಸಹಾಯ ಮಾಡಿದೆ" ಎಂದು ನಾರಾಯಣ್ ಚವಾಣ್ ಹೇಳುತ್ತಾರೆ. ಕೈಲಾಸ್ ಅವರಂತೆ, ಈ 21 ವರ್ಷದ ಯುವಕ ಕೂಡ ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ ಮತ್ತು ಕಬಡ್ಡಿ ಅವರ ದೈಹಿಕ ತರಬೇತಿ ಮತ್ತು ತ್ರಾಣಕ್ಕೆ ಸಹಾಯ ಮಾಡುತ್ತದೆ. "ನಾವು ಕಬಡ್ಡಿಯನ್ನು ಪ್ರೀತಿಸುತ್ತೇವೆ. ನಾವು ಚಿಕ್ಕವರಿದ್ದಾಗಿನಿಂದಲೂ ಇದನ್ನು ಆಡುತ್ತಿದ್ದೇವೆ.”

ಹಿಂಗೋಲಿಯ ಅನೇಕ ಸಣ್ಣ ಪಟ್ಟಣಗಳು ವಿವಿಧ ವಯೋಮಾನದವರಿಗಾಗಿ ವಾರ್ಷಿಕ ಕಬಡ್ಡಿ ಸ್ಪರ್ಧೆಗಳನ್ನು ಆಯೋಜಿಸುತ್ತವೆ. ಇವುಗಳನ್ನು ಶ್ರೀಪತರಾವ್ ಕಾಟ್ಕರ್ ಫೌಂಡೇಶನ್ ಆಯೋಜಿಸುತ್ತದೆ ಮತ್ತು ಇದನ್ನು 'ಮಾತೃತ್ವ ಸಮ್ಮಾನ್ ಕಬಡ್ಡಿ ಸ್ಪರ್ಧೆ' ಎಂದು ಕರೆಯಲಾಗುತ್ತದೆ. ಕಾಟ್ಕರ್ ಫೌಂಡೇಶನ್ ಸ್ಥಾಪಕ ಸಂಜಯ್ ಕಾಟ್ಕರ್ ಅವರು ಕಬಡ್ಡಿ ತರಬೇತುದಾರರ ತರಬೇತಿಯೊಂದಿಗೆ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಸ್ಥಳೀಯ ವ್ಯಾಪಾರ ಮತ್ತು ವ್ಯವಹಾರವನ್ನು ಉತ್ತೇಜಿಸಲು ಮತ್ತು ದೀರ್ಘಾವಧಿಯಲ್ಲಿ ವಲಸೆಯನ್ನು ತಡೆಗಟ್ಟಲು ಗ್ರಾಮೀಣ ಸಮುದಾಯಗಳೊಂದಿಗೆ ಕೆಲಸ ಮಾಡುವ ಗುರಿಯನ್ನು ಫೌಂಡೇಶನ್ ಹೊಂದಿದೆ. ಹಿಂಗೋಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಕಬಡ್ಡಿ ಪಂದ್ಯಾವಳಿಗಳಿಂದ ಸಂಜಯ್ ಹೆಸರುವಾಸಿ.

2023ರಲ್ಲಿ, ವಿಜಯ್ ಕೊರ್ಡೆ ಮತ್ತು ಕೈಲಾಸ್ ಕೊರ್ಡೆ ಪುಣೆಯಲ್ಲಿ ನಡೆದ ಇಂತಹದ್ದೇ ಒಂದು 10 ದಿನಗಳ ತರಬೇತಿಯಲ್ಲಿ ಭಾಗವಹಿಸಿದ್ದರು. ಇಂದು ಅವರು ನವಾಲ್‌ಗಾಂವ್ಹಾಣ್‌ ಮಕ್ಕಳು ಮತ್ತು ಯುವಕರಿಗೆ ತರಬೇತಿ ನೀಡುತ್ತಾರೆ. "ಬಾಲ್ಯದಿಂದಲೂ ನಾನು ಈ ಕ್ರೀಡೆಯಿಂದ ಆಕರ್ಷಿತನಾಗಿದ್ದೇನೆ ಮತ್ತು ಅದರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಸದಾ ಪ್ರಯತ್ನಿಸಿದ್ದೇನೆ. ಈ ಯುವಕರು ಉತ್ತಮ ತರಬೇತಿ ಪಡೆಯಬೇಕು ಮತ್ತು ಉತ್ತಮವಾಗಿ ಆಡಬೇಕು ಎನ್ನುವುದು ನನ್ನಾಸೆ" ಎಂದು ವಿಜಯ್ ಹೇಳುತ್ತಾರೆ.

Left: The zilla parishad school grounds in Navalgavhan where young and old come every evening.
PHOTO • Pooja Yeola
Right: Boys in Blue ready to play!
PHOTO • Pooja Yeola

ಎಡಕ್ಕೆ: ನವಾಲ್‌ಗಾಂವ್ಹಾಣ್‌ ಜಿಲ್ಲಾ ಪರಿಷತ್ ಶಾಲಾ ಮೈದಾನದಲ್ಲಿ ಯುವಕರು ಮತ್ತು ಹಿರಿಯರು ಪ್ರತಿದಿನ ಸಂಜೆ ಸೇರುತ್ತಾರೆ. ಬಲ: ನೀಲಿ ಬಣ್ಣದ ಉಡುಪಿನ ಹುಡುಗರು ಆಡಲು ಸಿದ್ಧರಾಗಿದ್ದಾರೆ !

ಇಲ್ಲಿನ ಮಕ್ಕಳು ಉತ್ತಮ ಸಾಮರ್ಥ್ಯವನ್ನು ಹೊಂದಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಬಹುದು ಎಂದು ಅವರು ಹೇಳುತ್ತಾರೆ. ಆದರೆ ಅವರಿಗೆ ಎಲ್ಲಾ ಹವಾಮಾನದ ಆಡಬಹುದಾದ ಆಟದ ಮೈದಾನದಂತಹ ಉತ್ತಮ ಸೌಲಭ್ಯಗಳ ಕೊರತೆಯಿದೆ. "ಮಳೆ ಬಂದಾಗ ನಾವು ಅಭ್ಯಾಸ ಮಾಡಲು ಸಾಧ್ಯವಿಲ್ಲ" ಎಂದು ವಿಜಯ್ ಹೇಳುತ್ತಾರೆ.

ವೇದಾಂತ್ ಮತ್ತು ನಾರಾಯಣ್ ಕೂಡ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. "ನಮಗೆ ಮೈದಾನವಿಲ್ಲ. ಇತರ ಆಟಗಾರರಂತೆ, ನಮಗೂ ಮ್ಯಾಟ್‌ ಮೇಲೆ ತರಬೇತಿ ಪಡೆಯುವ ಅವಕಾಶ ಸಿಕ್ಕರೆ , ನಾವು ಉತ್ತಮ ಆಟಗಾರರಾಗಿ ಹೊರಹೊಮ್ಮಬಲ್ಲೆವು” ಎಂದು ಅವರು ಹೇಳುತ್ತಾರೆ.

ನವಾಲ್‌ಗಾಂವ್ಹಾಣ್‌ ಗ್ರಾಮದಲ್ಲಿ ಕಬಡ್ಡಿ ಸಂಪ್ರದಾಯವು ಹುಡುಗಿಯರಿಗೆ ಅಷ್ಟೇನೂ ಅವಕಾಶಗಳನ್ನು ನೀಡಿಲ್ಲ. ಹಳ್ಳಿಯ ಅನೇಕರು ಶಾಲಾ ಮಟ್ಟದಲ್ಲಿ ಆಡುತ್ತಾರೆ ಆದರೆ ಯಾವುದೇ ಸೌಲಭ್ಯಗಳು ಅಥವಾ ತರಬೇತುದಾರರನ್ನು ಹೊಂದಿಲ್ಲ.

*****

ಕಬಡ್ಡಿಯಂತಹ ಯಾವುದೇ ಹೊರಾಂಗಣ ಕ್ರೀಡೆಯು ಕೆಲವು ಸವಾಲುಗಳನ್ನು ಸಹ ಹೊಂದಿರುತ್ತದೆ. ಪವನ್ ಕೊರಡೆ ಅವರಿಗೂ ಇದು ತಿಳಿದಿದೆ.

ಕಳೆದ ವರ್ಷ, ಹೋಳಿ ದಿನದಂದು, ನವಾಲ್‌ಗಾಂವ್ಹಾಣ್‌ ಗ್ರಾಮದಲ್ಲಿ ಪಂದ್ಯಗಳು ನಡೆದವು. ಇಡೀ ಗ್ರಾಮವು ಆಟವನ್ನು ವೀಕ್ಷಿಸಲು ಜಮಾಯಿಸಿತ್ತು. ಪವನ್ ಕೊರ್ಡೆ 50 ಕೆಜಿ ವಿಭಾಗದಲ್ಲಿ ಆಡುತ್ತಿದ್ದರು. "ನಾನು ಎದುರಾಳಿಯ ಅಂಕಣಕ್ಕೆ ಪ್ರವೇಶಿಸಿ ಕೆಲವು ಆಟಗಾರರನ್ನು ಔಟ್ ಮಾಡಿದೆ. ನನ್ನ ಅಂಕಣಕ್ಕೆ ಹಿಂದಿರುಗುತ್ತಿದ್ದಾಗ, ಇದ್ದಕ್ಕಿದ್ದಂತೆ ಸಮತೋಲನವನ್ನು ಕಳೆದುಕೊಂಡು ಅಂಗಾತ ಬಿದ್ದೆ" ಎಂದು ಪವನ್ ಹೇಳುತ್ತಾರೆ. ಅಂದು ಅವರು ತೀವ್ರವಾಗಿ ಗಾಯಗೊಂಡಿದ್ದರು.

Left: Kabaddi player Pa w an Korde suffered a severe injury to his back during a match. After six months he is finally able to walk and run slowly.
PHOTO • Pooja Yeola
Right: Unable to sustain himself, Vikas Korde stopped playing and purchased a second-hand tempo to transport farm produce from his village to the market in Hingoli
PHOTO • Pooja Yeola

ಎಡ: ಕಬಡ್ಡಿ ಆಟಗಾರ ಪವನ್ ಕೊರ್ಡೆಯವರಿಗೆ ಪಂದ್ಯದ ವೇಳೆ ಬೆನ್ನಿಗೆ ತೀವ್ರ ಗಾಯವಾಗಿದೆ. ಆರು ತಿಂಗಳ ನಂತರ ನಿಧಾನವಾಗಿ ನಡೆಯಲು ಮತ್ತು ಓಡಲು ಸಾಧ್ಯವಾಗುತ್ತಿದೆ. ಬಲ: ದುಡಿಮೆ ಸಾಲದೆ ವಿಕಾಸ್ ಕೊರ್ಡೆ ಆಟವಾಡುವುದನ್ನು ನಿಲ್ಲಿಸಿ, ತನ್ನ ಹಳ್ಳಿಯಿಂದ ಹಿಂಗೋಲಿಯ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸೆಕೆಂಡ್ ಹ್ಯಾಂಡ್ ಟೆಂಪೊ ಖರೀದಿಸಿದರು

ನಂತರ ಅವರನ್ನು ತಕ್ಷಣ ಹಿಂಗೋಲಿಗೆ ಕರೆದೊಯ್ಯಲಾಯಿತಾದರೂ, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಅಲ್ಲಿಂದ ಅವರನ್ನು ನಾಂದೇಡ್ ಆಸ್ಪತ್ರೆಗೆ ಕಳುಹಿಸಲಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು ಆದರೆ ಅವರು ಮೊದಲಿನಂತೆ ಆಡಲು ಸಾಧ್ಯವಿಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದರು.

"ಇದನ್ನು ಕೇಳಿ ನಾವು ವಿಚಲಿತರಾಗಿದ್ದೆವು" ಎಂದು ಅವರು ಹೇಳುತ್ತಾರೆ. ಆದರೆ ಅವರು ಬಿಟ್ಟುಕೊಡಲಿಲ್ಲ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ, ಪವನ್ ತರಬೇತಿಯನ್ನು ಪ್ರಾರಂಭಿಸಿದರು. ಮತ್ತು ಆರು ತಿಂಗಳ ನಂತರ, ಅವರು ನಡೆಯಲು ಮತ್ತು ಓಡಲು ಪ್ರಾರಂಭಿಸಿದರು. "ಅವನು ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಬಯಸುತ್ತಾನೆ" ಎಂದು ಅವರ ತಂದೆ ಹೇಳುತ್ತಾರೆ.

ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಕಾಟ್ಕರ್ ಫೌಂಡೇಶನ್ ಭರಿಸಿತು.

ನವಾಲ್‌ಗಾಂವ್ಹಾಣ್‌ ಕಬಡ್ಡಿ ವಿಷಯದಲ್ಲಿ ಹೆಮ್ಮೆ ಪಡುತ್ತಿದ್ದರೂ, ಎಲ್ಲರಿಗೂ ಅದನ್ನು ಮುಂದುವರಿಸಲು ಸಾಧ್ಯವಿಲ್ಲ. ವಿಕಾಸ್ ಕೊರ್ಡೆ ಅವರು ಬದುಕು ನಡೆಸಲು ಸಂಪಾದಿಸಬೇಕಾಗಿದ್ದ ಕಾರಣ ಆಡುವುದನ್ನು ನಿಲ್ಲಿಸಬೇಕಾಯಿತು. "ಕಬಡ್ಡಿ ಆಡಲು ಇಷ್ಟವಿತ್ತು, ಆದರೆ ಆರ್ಥಿಕ ಬಿಕ್ಕಟ್ಟು ಮತ್ತು ಕೃಷಿ ಕೆಲಸದಿಂದಾಗಿ ನಾನು ಓದು ಮತ್ತು ಕ್ರೀಡೆಯನ್ನು ತ್ಯಜಿಸಬೇಕಾಯಿತು" ಎಂದು 22 ವರ್ಷದ ಅವರು ಹೇಳುತ್ತಾರೆ. ವಿಕಾಸ್ ಕಳೆದ ವರ್ಷ ಟೆಂಪೋ ಖರೀದಿಸಿದ್ದರು. "ನಾನು ಕೃಷಿ ಉತ್ಪನ್ನಗಳನ್ನು [ಅರಿಶಿನ, ಸೋಯಾಬೀನ್ ಮತ್ತು ತಾಜಾ ಉತ್ಪನ್ನಗಳನ್ನು] ನನ್ನ ಹಳ್ಳಿಯಿಂದ ಹಿಂಗೋಲಿಗೆ ಸಾಗಿಸುತ್ತೇನೆ ಮತ್ತು ಆ ಮೂಲಕ ಸ್ವಲ್ಪ ಹಣವನ್ನು ಸಂಪಾದಿಸುತ್ತೇನೆ" ಎಂದು ಅವರು ಹೇಳುತ್ತಾರೆ.

ಕಬಡ್ಡಿಗೆ ಹೆಸರುವಾಸಿಯಾದ ಹಳ್ಳಿಯಾದ ಕಬಡ್ಡೀಚಾ ಗಾಂವ್ ಎಂದು ಕರೆಸಿಕೊಳ್ಳಲು ನವಾಲ್‌ಗಾಂವ್ಹಾಣ್‌ ಬಯಸುತ್ತದೆ. ಇಲ್ಲಿನ ಯುವಕರಿಗೆ, "ಕಬಡ್ಡಿಯೇ ಅಂತಿಮ ಗುರಿ!"

ಅನುವಾದ: ಶಂಕರ. ಎನ್. ಕೆಂಚನೂರು

Student Reporter : Pooja Yeola

Pooja Yeola is a student of journalism at Chhatrapati Sambhajinagar in Maharashtra.

Other stories by Pooja Yeola
Editor : Medha Kale

Medha Kale is based in Pune and has worked in the field of women and health. She is the Marathi Translations Editor at the People’s Archive of Rural India.

Other stories by Medha Kale
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru