ಅದೊಂದು ಅನಿರೀಕ್ಷಿತ ಮ್ಯಾಜಿಕ್‌ ಶೋ. ಫಾತಿಮಾ ತಮ್ಮ ಅಂಗಡಿಯ ಹಿಂದಿನಿಂದ ಹಳೆಯ ನೀಲಿ ಬಣ್ಣದ ಬಾಕ್ಸ್‌ ಒಂದನ್ನು ತಂದರು. ಅದರಲ್ಲಿ ನಿಧಿಯಿತ್ತು. ಒಂದೊಂದು ಕೂಡಾ ಕಲಾಕೃತಿಯಂತಿತ್ತು. ತೂತುಕುಡಿಯ ಕಡಲಿನಲ್ಲಿ ಬದುಕಿಕೊಂಡಿದ್ದ ದೊಡ್ಡ ಮೀನೊಂದು ಈಗ ಸೂರ್ಯನ ಬಿಸಿಲು, ಉಪ್ಪು ಮತ್ತು ಕೈಚಳಕ ಸೇರಿ ಸಂರಕ್ಷಣೆಗೊಂಡು ಒಣ ಮೀನಾಗಿ ಪರಿವರ್ತನೆ ಹೊಂದಿತ್ತು.

ಫಾತಿಮಾ ತಮ್ಮ ಕೈಯಲ್ಲಿ ಕಟ್ಟ ಪರೈ ಮೀನನ್ನು (ರಾಣಿ ಮೀನು) ತಮ್ಮ ಕೈಯಲ್ಲಿ ಹಿಡಿದಿದ್ದರು. ಅದು ಫಾತಿಮಾರ ಎತ್ತರದ ಅರ್ಧದಷ್ಟು ಎತ್ತರವಿದ್ದು ಅವರ ಕೈಯಳತೆಯ ಬಾಯಿಯನ್ನು ಹೊಂದಿತ್ತು. ಅದರ ಅಗಲ ಬಾಯಿಯಿಂದ ಅದರ ಬಾಲದ ತನಕ ಚೂಪಾದ ಚಾಕು ಬಳಸಿ ಕೊಯ್ದು, ಅದಕ್ಕೆ ಉಪ್ಪು ಹಾಕಿ ಒಣಗಿಸುತ್ತಾರೆ. ನಂತರ ಅದನ್ನು ಚುರುಕಾದ ಬಿಸಿಲಿನಲ್ಲಿ ಇರಿಸಲಾಗುತ್ತದೆ. ಈ ಬಿಸಿಲು ಮೀನು, ಮನುಷ್ಯರು ಹೀಗೆ ತನ್ನ ಕೆಳಗೆ ಬಂದ ಎಲ್ಲವನ್ನೂ ಒಣಗಿಸುತ್ತದೆ…

ಅವರ ಕೈಗಳು ಹಾಗೂ ಮುಖದ ಮೇಲಿನ ಸುಕ್ಕುಗಳೇ ಈ ಸುಡುವ ಬಿಸಿಲಿನ ಕತೆಯನ್ನು ಹೇಳುತ್ತವೆ. ಆದರೆ ಅವರು ಅದರತ್ತ ಗಮನ ಕೊಡದೆ ಇನ್ನೊಂದು ಮೀನನ್ನು ಕೊಯ್ದು ಒಣಗಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಒಂದಾನೊಂದು ಕಾಲದಲ್ಲಿ ಅವರ ಆಚಿ (ಅಜ್ಜಿ) ಉಪ್ಪು ಹಾಕಿ ಮೀನು ಒಣಗಿಸುವುದು ಮತು ಮೀನು ಮಾರುವ ಕೆಲಸವನ್ನು ಮಾಡುತ್ತಿದ್ದರು. ಅದು ಬೇರೆಯದೇ ನಗರವಾಗಿತ್ತು, ಆಗ ಅಲ್ಲಿ ಕಾಲುವೆ ಕೆಲವೇ ಅಡಿಗಳ ಅಗಲದಲ್ಲಿತ್ತು. ಅದರ ಪಕ್ಕದಲ್ಲೇ ಅವರ ಮನೆಯಿತ್ತು. 2004ರ ಸುನಾಮಿಯು ಅವರ ಬದುಕಿಗೆ ಚರಂಡಿ ಮತ್ತು ಕೆಸರನ್ನು ತಂದು ಸುರಿಯಿತು. ಜೊತೆಗೆ ಹೊಸ ಮನೆಯ ಭರವಸೆಯನ್ನೂ. ಆದರೆ ಹೀಗೆ ಯೋಜನಾಬದ್ಧವಾಗಿ ಕಟ್ಟಿದ ಮನೆ ಇಲ್ಲಿಂದ “ರೊಂಬಾ ದೂರಂ [ಬಹಳ ದೂರ]” ಎನ್ನತ್ತಾ ಕೈಯೆತ್ತಿ ತೋರಿಸುತ್ತಾರೆ ತಲೆ ಬಾಗಿಸಿಕೊಂಡು ಕುಳಿತಿದ್ದ ಫಾತಿಮಾ. ಬಸ್ಸಿನಲ್ಲಿ ಹೋದರೆ ಅದು ಇಲ್ಲಿಂದ ಅರ್ಧ ಗಂಟೆಯ ದಾರಿ. ಅವರು ಮೀನು ಖರೀದಿಗೆ ಇಲ್ಲಿಗೆ ಬರಲೇಬೇಕಿತ್ತು.

ಒಂಬತ್ತು ವರ್ಷಗಳ ನಂತರ ಫಾತಿಮಾ ಮತ್ತು ಅವರ ಸಹೋದರಿಯರು ತಮ್ಮ ಹಳೆಯ ಊರಾದ ಥೆರೇಸಪುರಂಗೆ ವಾಪಸ್‌ ಬಂದರು. ಇದು ತೂತುಕುಡಿ ಪಟ್ಟಣದ ತುದಿಯಲ್ಲಿದೆ. ಈಗಿನ ಅಂಗಡಿ ಮತ್ತು ಮನೆ ಅಗಲಗೊಂಡಿರುವ ಕಾಲುವೆಯ ಪಕ್ಕದಲ್ಲಿದೆ. ಇಲ್ಲಿ ನೀರು ನಿಧಾನಗತಿಯಲ್ಲಿ ಹರಿಯುತ್ತಿರುತ್ತದೆ. ಅಂದಿನ ಮಧ್ಯಾಹ್ನವು ನಿಶ್ಚಲವಾಗಿತ್ತು. ಒಂದಷ್ಟು ಉಪ್ಪು ಮತ್ತು ಬಹಳಷ್ಟು ಬಿಸಿಲು ಸೇರಿ ಮಹಿಳೆಯರ ಬದುಕನ್ನೂ ನಿಶ್ಚಲಗೊಳಿಸಿದ್ದವು.

ಫಾತಿಮಾ ಅವರಿಗೆ ಪ್ರಸ್ತುತ 64 ವರ್ಷ್.‌ ಅವರಿಗೆ ಮದುವೆಯಾಗುವವರೆಗೂ ಅಜ್ಜಿಯೊಂದಿಗೆ ಮೀನಿನ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ನಂತರ ಗಂಡ ತೀರಿಕೊಂಡ ನಂತರ ಪುನಃ ಈ ವ್ಯವಹಾರಕ್ಕೆ ಮರಳಿದರು. ಅವರ ಪತಿ ತೀರಿಕೊಂಡು ಎರಡು ದಶಕಗಳು ಕಳೆದಿವೆ. ತಾನು ಸಣ್ಣವಳಿದ್ದಾಗ ಬಲೆಯಲ್ಲಿ ಮೀನುಗಳು ಸಾವು-ಬದುಕಿನ ನಡುವೆ ಬಡಿದಾಡುತ್ತಿದ್ದವು. ಮೀನುಗಳು ಆಗೆಲ್ಲ ಅಷ್ಟು ತಾಜಾ ಸಿಗುತ್ತಿದ್ದವು. ಈಗ 56 ವರ್ಷಗಳ ನಂತರ ಸಿಗುತ್ತಿರುವುದೆಲ್ಲವೂ ಬರೀ ಐಸ್‌ ಮೀನು ಎಂದು ಅವರು ದೂರುತ್ತಾರೆ. ಈಗ ದೊಡ್ಡ ದೊಡ್ಡ ಮೀನುಗಳ ವ್ಯವಹಾರ ಲಕ್ಷಗಳಲ್ಲಿರುತ್ತದೆ. “ಆಗಿನ ಕಾಲದಲ್ಲಿ ನಾವು ಆಣೆ, ಪೈಸೆಗಳಲ್ಲಿ ವ್ಯವಹಾರ ಮಾಡುತ್ತಿದ್ದೆವು. ಆಗ ನೂರು ರೂಪಾಯಿಯೆಂದರೆ ಬಹಳ ದೊಡ್ಡ ಮೊತ್ತವಾಗಿತ್ತು. ಈಗಿನ ಸಾವಿರ, ಲಕ್ಷಗಳಿಗೆ ಸಮವಾಗಿತ್ತು.”

Fathima and her sisters outside their shop
PHOTO • Tehsin Pala

ತಮ್ಮ ಅಂಗಡಿಯ ಹೊರಗೆ ಕುಳಿತಿರುವ ಫಾತಿಮಾ ಮತ್ತು ಅವರ ಸಹೋದರಿಯರು

Fathima inspecting her wares
PHOTO • M. Palani Kumar

ಫಾತಿಮಾ ತಮ್ಮ ಸರಕುಗಳನ್ನು ಪರಿಶೀಲಿಸುತ್ತಿರುವುದು

ಅವರ ಆಚಿಯ ಕಾಲದಲ್ಲಿ ಮಹಿಳೆಯರು ತಾಳೆಗರಿಯ ಬುಟ್ಟಿಯಲ್ಲಿ ಮೀನನ್ನು ತುಂಬಿಕೊಂಡು ಎಲ್ಲೆಡೆ ನಡೆದುಕೊಂಡೇ ಹೋಗುತ್ತಿದ್ದರು. “ಅವರು 10 ಕಿಲೋಮೀಟರ್ ದೂರ ನಡೆದು ಪಟ್ಟಿಕಾಡುಗಳಿಗೆ (ಕುಗ್ರಾಮಗಳು) ಹೋಗಿ ಮೀನು ವ್ಯಾಪಾರ ಮಾಡಿ ಬರುತ್ತಿದ್ದರು.” ಈಗ ಅವರು ಮೀನನ್ನು ಅಲ್ಯೂಮಿನಿಯಮ್‌ ಬುಟ್ಟಿಯಲ್ಲಿ ತುಂಬಿಕೊಂಡು ಬಸ್ಸಿನಲ್ಲಿ ಹೋಗುತ್ತಾರೆ. ಅಕ್ಕಪಕ್ಕದ ಹಳ್ಳಿಗಳು ಮತ್ತು ಬ್ಲಾಕ್‌ಗಳಿಗೆ ಹೋಗಿ ಅವುಗಳನ್ನು ಮಾರುತ್ತಾರೆ.

“ಕೊರೋನಾ ಬರುವ ಮೊದಲು ನಾವು ತಿರುನಲ್ವೇಲಿ, ತಿರುಚೆಂದೂರ್‌ ರಸ್ತೆಯಲ್ಲಿನ ಹಳ್ಳಿಗಳಿಗೆ ಹೋಗಬಹುದಿತ್ತು” ಎಂದು ಫಾತಿಮಾ ತನ್ನ ಬೆರಳಿನಲ್ಲೇ ದಾರಿಯ ನಕ್ಷೆ ಬಿಡಿಸುತ್ತಾ ತೋರಿಸಿದರು. 2022ರ ಆಗಸ್ಟ್‌ ತಿಂಗಳಿನಲ್ಲಿ ಪರಿ ಫಾತಿಮಾ ಅವರ ಬೇಟಿಗೆ ತೆರಳಿತ್ತು. “ಇತ್ತೀಚೆಗೆ ನಾವು ಕೇವಲ ಎರಾಳ್‌ ಟೌನಿನಲ್ಲಿ ಸೋಮವಾರ ನಡೆಯುವ ಸಂತೆಗೆ ಮಾತ್ರ ಹೋಗಲು ಸಾಧ್ಯವಾಗುತ್ತಿದೆ.” ಅವರಿಗೆ ಅಲ್ಲಿಗೆ ತೆರಳಲು ಇನ್ನೂರು ರೂಪಾಯಿ ಬೇಕಾಗುತ್ತದೆ. ಇದರಲ್ಲಿ ಬಸ್‌ ಡಿಪೋಗೆ ಹೋಗುವ ಆಟೋ ಚಾರ್ಜ್‌ ಮತ್ತು ಅವರ ಮೀನು ಬುಟ್ಟಿಗೆ ಬಸ್ಸಿನಲ್ಲಿ ವಿಧಿಸುವ ಫುಲ್‌ ಟಿಕೇಟ್‌ ಮೊತ್ತವೂ ಸೇರಿದೆ. “ಇದರ ಜೊತೆಗೆ ಐನೂರು [ರೂಪಾಯಿ] ಮಾರ್ಕೆಟ್‌ ಎಂಟ್ರಿ ಫೀ ಕೂಡಾ ಕಟ್ಟುತ್ತೇನೆ. ನಾವು ಅಲ್ಲಿ ಬಿಸಿಲಿನಲ್ಲೇ ಕೂರುತ್ತೇವೆ [ ತೆರೆದ ಸ್ಥಳದಲ್ಲಿ] ಆದರೂ ಅಷ್ಟು ದುಡ್ಡು ಕಟ್ಟಬೇಕು.” ಅಲ್ಲಿ ಸುಮಾರು ಐದರಿಂದ ಏಳು ಸಾವಿರ ರೂಪಾಯಿಯ ತನಕ ವ್ಯಾಪಾರವಾಗುವುದರಿಂದಾಗಿ ಅಷ್ಟು ಕಟ್ಟುವುದು ನಷ್ಟವೇನಲ್ಲ ಎನ್ನುವುದು ಅವರ ಅಭಿಪ್ರಾಯ.

ಆದರೆ ತಿಂಗಳ ನಾಲ್ಕು ಸೋಮವಾರವೂ ಹೀಗಿರುತ್ತದೆ ಎನ್ನಲು ಸಾಧ್ಯವಿಲ್ಲ. ಈ ವ್ಯವಹಾರದಲ್ಲಿನ ಲಾಭ-ನಷ್ಟಗಳ ಕುರಿತು ಫಾತಿಮಾರಿಗೆ ಸ್ಪಷ್ಟವಾದ ನೋಟವಿದೆ. “ಕೆಲವು ದಶಕಗಳ ಹಿಂದೆ ತೂತುಕುಡಿಯಿಂದ ಹೆಚ್ಚು ದೂರ ಸಾಗದೆ ರಾಶಿ ರಾಶಿ ಮೀನು ಹಿಡಿದು ತರುತ್ತಿದ್ದರು. ಆದರೆ ಈಗ ಬಹಳ ದೂರದವರೆಗೆ ಹೋಗಿ ಆಳ ಸಮುದ್ರ ಮೀನುಗಾರಿಕೆ ಮಾಡಿಯೂ ಬರಿಗೈಯಲ್ಲಿ ಬರುವುದಿರುತ್ತದೆ.”

ತನ್ನ ಬದುಕಿನ ಅನುಭವದಿಂದ ಮಾತನಾಡುವ ಫಾತಿಮಾ ಒಂದು ನಿಮಿಷದ ವಿವರಣೆಯಲ್ಲಿ ಮೀನುಗಾರಿಕೆಯಲ್ಲಿನ ಕ್ಷೀಣತೆಯನ್ನು ವಿವರಿಸುತ್ತಾರೆ. “ಆಗ ಮೀನುಗಾರರು ರಾತ್ರಿ ಹೋದವರು ಮರುದಿನ ಸಂಜೆ ಮೀನಿನೊಂದಿಗೆ ಹಿಂದಿರುಗುತ್ತಿದ್ದರು. ಇಂದು ಕನ್ಯಾಕುಮಾರಿ, ಸಿಲೋನ್‌, ಅಂಡಮಾನ್‌ ಎಂದು 10 -15 ದಿನ ಹೋಗುತ್ತಾರೆ.”

ಇದೊಂದು ದೊಡ್ಡ ಕ್ಷೇತ್ರವಾಗಿದ್ದು, ಅದರ ಸಮಸ್ಯೆಯೂ ಅಷ್ಟೇ ವ್ಯಾಪಕವಾಗಿದೆ. ತೂತುಕುಡಿ ಕಿನಾರೆಯಲ್ಲಿ ಮೀನಿನ ಲಭ್ಯತೆ ಕಡಿಮೆಯಾಗುತ್ತಿದ್ದು ಅದರ ಮೇಲೆ ಫಾತಿಮಾರಿಗೆ ಯಾವುದೇ ನಿಯಂತ್ರಣವಿಲ್ಲ. ಆದರೆ ಈ ಮೀನಿನ ಕೊರತೆ ಅವರ ಜೀವನ ಮತ್ತು ಜೀವನೋಪಾಯ ಎರಡನ್ನೂ ನಿಯಂತ್ರಿಸುತ್ತದೆ.

ಫಾತಿಮಾ ಹೇಳುತ್ತಿರುವ ವಿದ್ಯಮಾನಕ್ಕೆ ಒಂದು ಹೆಸರಿದೆ: ಅತಿಯಾದ ಮೀನುಗಾರಿಕೆ. ಇದನ್ನು ಗೂಗಲ್ ಮಾಡಿ ನೋಡಿದರೆ, ನೀವು ಒಂದು ಸೆಕೆಂಡಿನ ಒಂದು ಭಾಗದಲ್ಲಿ ಸುಮಾರು 18 ಮಿಲಿಯನ್ ಉತ್ತರಗಳನ್ನು ಕಾಣಬಹುದು. ಇದು ತೀರಾ ಸಾಮಾನ್ಯ. ಏಕೆಂದರೆ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ವರದಿಯು ಹೇಳುವಂತೆ, "ಜಾಗತಿಕವಾಗಿ, ಜಲ ಆಹಾರಗಳು 2019ರಲ್ಲಿ ಸುಮಾರು 17 ಪ್ರತಿಶತದಷ್ಟು ಪ್ರಾಣಿಗಳ ಪ್ರೋಟೀನುಗಳನ್ನು ಮತ್ತು 7 ಪ್ರತಿಶತದಷ್ಟು ಇತರ ಎಲ್ಲಾ ಪ್ರೋಟೀನ್ಗಳನ್ನು ಒದಗಿಸಿವೆ." ಅಂದರೆ, ಪ್ರತಿ ವರ್ಷ, ನಾವು "ಸಮುದ್ರದಿಂದ 80ರಿಂದ 90 ಮಿಲಿಯನ್ ಮೆಟ್ರಿಕ್ ಟನ್ ಸಮುದ್ರಾಹಾರವನ್ನು ಹೊರತೆಗೆಯುತ್ತೇವೆ" ಎಂದು ಅಮೇರಿಕನ್ ಕ್ಯಾಚ್ ಅಂಡ್ ಫೋರ್ ಫಿಶ್ ಲೇಖಕ ಪಾಲ್ ಗ್ರೀನ್ಬರ್ಗ್ ಹೇಳುತ್ತಾರೆ. ಮತ್ತು ಇದು ದಿಗ್ಭ್ರಮೆಗೊಳಿಸುತ್ತದೆ ಏಕೆಂದರೆ ಇದು " ಚೀನಾದ ಒಟ್ಟು ಮಾನವ ತೂಕಕ್ಕೆ ಸಮಾನವಾದುದು " ಎಂದು ಗ್ರೀನ್ಬರ್ಗ್ ಹೇಳುತ್ತಾರೆ .

ಆದರೆ ಇಲ್ಲೊಂದು ವಿಷಯವಿದೆ. ಹಿಡಿದ ಎಲ್ಲಾ ಮೀನುಗಳನ್ನೂ ತಾಜಾ ಇರುವಾಗಲೇ ತಿನ್ನಲಾಗುವುದಿಲ್ಲ. ಇತರ ಮಾಂಸ ತರಕಾರಿಗಳಂತೆ ಮೀನನ್ನು ಕೂಡ ಮುಂದಿನ ದಿನಗಳಿಗಾಗಿ ಸಂರಕ್ಷಿಸಿ ಇಡಲಾಗುತ್ತದೆ. ಹಾಗೆ ಸಂರಕ್ಷಿಸಿ ಇಡುವ ವಿಧಾನಗಳಲ್ಲಿ ಮೀನುಗಳಿಗೆ ಉಪ್ಪೂಡಿ ಬಿಸಿಲಿನಲ್ಲಿ ಒಣಗಿಸುವುದೂ ಒಂದು.

Left: Boats docked near the Therespuram harbour.
PHOTO • M. Palani Kumar
Right: Nethili meen (anchovies) drying in the sun
PHOTO • M. Palani Kumar

ಎಡ: ಥೆರೇಸಪುರಂ ಬಂದರಿನ ಬಳಿ ಲಂಗರು ಹಾಕಿರುವ ದೋಣಿಗಳು. ಬಲ: ನೆಥಿಲಿ ಮೀನನ್ನು (ಬೊಳಿಂಜೆ/ಬಿಳಿ ಮೀನು) ಬಿಸಿಲಿನಲ್ಲಿ ಒಣ ಹಾಕಿರುವುದು‌

*****

ನಾವು ಒಣ ಹಾಕಿದ
ಕೊಬ್ಬಿದ ತಾಟೆ ಮೀನಿನ
ತುಣುಕನ್ನು ತಿನ್ನಲು ಬರುವ
ಹಕ್ಕಿಗಳ ಹಿಂಡನ್ನು ಓಡಿಸುತ್ತೇವೆ
ನಿನ್ನ ಸದ್ಗುಣದಿಂದ ನಮಗೇನು ಸಿಗುವುದು?
ಮೀನು ತಿನ್ನುವವರು ನಾವು! ಹೋಗು ಇಲ್ಲಿಂದ ದೂರ!

ನಟ್ರಿನೈ 45 , ನೇ ತಾಲ್ ತಿನೈ (ಸಮುದ್ರ ತೀರದ ಹಾಡುಗಳು)

ಅಜ್ಞಾತ ಕವಿಯ ಈ ಕವಿತೆಯಲ್ಲಿ, ನಾಯಕಿಯ ಗೆಳತಿ ನಾಯಕನಿಗೆ ಈ ಮಾತುಗಳನ್ನು ಹೇಳುತ್ತಿದ್ದಾಳೆ.

ಈ ಪುರಾತನ ಕವಿತೆ ಸುಮಾರು 2,000 ಸಾವಿರ ವರ್ಷಗಳಷ್ಟು ಹಳೆಯದು. ಇದು ತಮಿಳು ಸಂಗಮ್‌ ಕಾವ್ಯದ ಭಾಗ. ಇದು ಇದರ ಜೊತೆಗೆ ಉಪ್ಪಿನ ವ್ಯಾಪಾರಿಗಳು ಅವರ ವ್ಯಾಗನ್‌ಗಳು ಕರಾವಳಿಯಿಂದ ಘಟ್ಟದ ಕಡೆಗೆ ಸಾಗುವ ಕುರಿತೂ ಉಲ್ಲೇಖಗಳಿವೆ. ಉಪ್ಪು ಊಡಿ ಹೀಗೆ ಬಿಸಿಲಿನಲ್ಲಿ ಒಣಗಿಸುವ ಇಂತಹ ಸಂಪ್ರದಾಯಗಳು ಇತರ ಸಂಸ್ಕೃತಿಗಳಲ್ಲಿಯೂ ಇವೆಯೇ?

ಹೌದು ಎನ್ನುತ್ತಾ ಆಹಾರ ಅಧ್ಯಯನ ವಿದ್ವಾಂಸ ಕೃಷ್ಣೇಂದು ರೇ. “ಹೊರಗಿನ ವ್ಯಾಪಾರವನ್ನು ನಂಬಿಕೊಂಡ. ವಿಶೇಷವಾಗಿ ಸಮುದ್ರಯಾನಿ ಸಾಮ್ರಾಜ್ಯಗಳು ಮೀನುಗಾರಿಕೆಯೊಡನೆ ವಿಶೇಷವಾದ ಸಂಬಂಧವನ್ನು ಹೊಂದಿವೆ. ಏಕೆಂದರೆ ಇವರಿಗೆ ಬೇಕಾಗುವ ದೋಣಿಗಳನ್ನು ತಯಾರಿಸುವ, ನಡೆಸುವ ಕೌಶಲವಿದ್ದಿದ್ದು ಮೀನುಗಾರರಿಗೆ ಮಾತ್ರ. ದೋಣಿಗಳು ಈ ಸಾಮ್ರಾಜ್ಯದ ಒಂದು ಭಾಗವೇ ಆಗಿದ್ದವು. ವೈಕಿಂಗ್, ಜೆನೋಯಿಸ್, ವೆನೆಟಿಯನ್, ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಸಾಮ್ರಾಜ್ಯಗಳು ಮೀನುಗಾರಿಕೆಯ ಹಿನ್ನೆಲೆಯಿಂದಲೇ ಬಂದವು ಎನ್ನವುದು ಇತ್ತೀಚೆಗೆ ತಿಳಿಯುತ್ತಿದೆ.”

ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿರುವ ಅವರು ಈ ವಿಷಯದ ಕುರಿತು ಇನ್ನಷ್ಟು ಹೇಳುತ್ತಾ, "ಶೈತ್ಯೀಕರಣದ ಮೊದಲು, ಉಪ್ಪು ಊಡುವುದು, ಗಾಳಿಯಲ್ಲಿ ಒಣಗಿಸುವುದು, ಹೊಗೆಯಲ್ಲಿ ಒಣಗಿಸುವುದು ಮತ್ತು ಹುದುಗಿಸುವುದು (ಮೀನಿನ ಸಾಸ್ ರೂಪದಲ್ಲಿ) ಹೆಚ್ಚು ಮೌಲ್ಯಯುತ ಪ್ರೋಟೀನ್ಗಳನ್ನು ಸಂರಕ್ಷಿಸಲು ಇದ್ದ ಮಾರ್ಗಗಳಾಗಿದ್ದವು; ದೂರದ ಊರುಗಳಿಗೆ ಹಡಗಿನ ಮೂಲಕ ತಲುಪಿಸುವಾಗ ದೀರ್ಘಕಾಲದವರೆಗೆ ಅವು ಕೆಡದಂತೆ ನೋಡುಕೊಳ್ಳಲು ಈ ತಂತ್ರವನ್ನು ಬಳಸಲಾಗುತ್ತಿತ್ತು. ಇದೇ ಕಾರಣದಿಂದ ಮೆಡಿಟರೇನಿಯನ್ ಸಮುದ್ರದ ಸುತ್ತಲಿದ್ದ, ರೋಮನ್ ಸಾಮ್ರಾಜ್ಯದಲ್ಲಿ ಹೆಚ್ಚು ಮೌಲ್ಯಯುತವಾಗಿದ್ದ ರು ಮ್ [ಹುದುಗಿಸಿದ ಮೀನು ಸಾಸ್] ರೋಮ್ ನ ಪತನದೊಂದಿಗೆ ಕಣ್ಮರೆಯಾಯಿತು."

ತಮಿಳುನಾಡಿನ ಸಾಂಪ್ರದಾಯಿಕ ಸಂಸ್ಕರಣಾ ಪದ್ಧತಿಯು “ಸಾಮಾನ್ಯವಾಗಿ ಮೀನನ್ನು ಕೊಳೆಯುವಂತೆ ಮಾಡುವ ಬ್ಯಾಕ್ಟೀರಿಯಾ ಮತ್ತು ಕಿಣ್ವಗಳನ್ನು ನಾಶಪಡಿಸುವುದು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆ ಮತ್ತು ಪ್ರಸರಣಕ್ಕೆ ಸೂಕ್ತವಲ್ಲದ ಪರಿಸ್ಥಿತಿಗಳನ್ನು ಸೃಷ್ಟಿಸುವುದನ್ನು ಒಳಗೊಂಡಿರುತ್ತದೆ." ಎಂದು ಮತ್ತೊಂದು ಎಫ್ಎಒ ವರದಿ ಹೇಳುತ್ತದೆ.

Salted and sun dried fish
PHOTO • M. Palani Kumar

ಉಪ್ಪು ಊಡಿ ಬಿಸಿಲಿನಲ್ಲಿ ಒಣಗಿಸಲಾದ ಮೀನು

Karuvadu stored in containers in Fathima's shop
PHOTO • M. Palani Kumar

ಫಾತಿಮಾ ಅವರ ಅಂಗಡಿಯಲ್ಲಿ ಕರುವಾಡನ್ನು ಪೆಟ್ಟಿಗೆಯೊಂದರ ಒಳಗೆ ಇಟ್ಟಿರುವುದು

“ಉಪ್ಪು ಹಾಕಿ ಒಣಗಿಸಿ ಮೀನು ಸಂರಕ್ಷಿಸುವ ಪ್ರಕ್ರಿಯೆಯು ಬಹಳ ಕಡಿಮೆ ವೆಚ್ಚದ ಪ್ರಕ್ರಿಯೆಯೂ ಹೌದು. ಹೀಗೆ ಉಪ್ಪು ಊಡಿ ಸಂರಕ್ಷಿಸುವ ಎರಡು ಬಗೆಯ ಪ್ರಕ್ರಿಯೆಗಳಿವೆ : ಮೀನಿನ ಮೇಲೆ ನೇರವಾಗಿ ಉಪ್ಪು ಹಚ್ಚುವುದು. ಇನ್ನೊಂದು ಉಪ್ಪುನೀರಿನಲ್ಲಿ ಮೀನನ್ನು ಮುಳುಗಿಸಿಡುವುದು. ಇದರಿಂದ ಬಹಳ ದಿನಗಳವರೆಗೆ ಮೀನನ್ನು ಸಂರಕ್ಷಿಸಿಡಬಹುದು” ಎನ್ನುತ್ತದೆ ಅದೇ ಎಫ್‌ಎಒ.

ಗತಕಾಲದ ಇತಿಹಾಸವಿರುವ ಮತ್ತು ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಿರುವ ಪ್ರೋಟೀನ್ ಮೂಲವಾಗಿರುವ, ಕರುವಾಡು ಜನಪ್ರಿಯ ಸಂಸ್ಕೃತಿಯಲ್ಲಿ [ಉದಾಹರಣೆಗೆ, ತಮಿಳು ಸಿನೆಮಾದಲ್ಲಿ] ಹೆಚ್ಚು ಅಪಹಾಸ್ಯಕ್ಕೆ ಒಳಗಾಗುತ್ತದೆ. ಹಾಗಿದ್ದರೆ ರುಚಿಯ ಶ್ರೇಣೀಕರಣದಲ್ಲಿ ಅದರ ಸ್ಥಾನ ಯಾವುದು?

ಡಾ. ರೇ ಹೇಳುವಂತೆ “ಇದರಲ್ಲಿ ಶ್ರೇಣಿಕೃತ ಚಿಂತನೆಯ ಎಳೆಗಳಿವೆ. ಎಲ್ಲೆಲ್ಲಿ ಭೂಸ್ವಾಮ್ಯದ ಪ್ರಾಬಲ್ಯದ ಸ್ವರೂಪಗಳು ಹರಡಿವೆಯೋ ಅಲ್ಲೆಲ್ಲಾ - ಬ್ರಾಹ್ಮಣತ್ವದ ಕೆಲವು ರೂಪಗಳ ಜೊತೆಗೆ - ನೀರಿನ ಮೇಲೆ, ಅದರಲ್ಲೂ ವಿಶೇಷವಾಗಿ ಉಪ್ಪುನೀರಿನ ಅವಲಂಬಿತವಾದ ಜೀವನ ಮತ್ತು ಜೀವನೋಪಾಯಗಳ ಬಗ್ಗೆ ದೊಡ್ಡ ದೊಡ್ಡ ಅಸಡ್ಡೆ ಮತ್ತು ಗುಮಾನಿಗಳಿವೆ… ಜಾತಿಗಳು ವಾಸದ ಪ್ರದೇಶ ಮತ್ತು ಉದ್ಯೋಗದ ಮೂಲಕ ಗುರುತಿಸಲ್ಪಡುತ್ತವೆಯಾದ ಕಾರಣ ಮೀನುಗಾರಿಕೆಯನ್ನು ಕೆಳಹಂತದ ಉದ್ಯೋಗವನ್ನಾಗಿ ಮಾಡಲಾಗಿದೆ.”

“ನಾವು ಗೌರವಿಸಲಿ, ಗೌರವಿಸದಿರಲಿ ಮೀನು ನಾವು ತೀವ್ರವಾಗಿ ಹಿಡಿದು ತಿನ್ನುವ ಕೊನೆಯ ಕೃಷಿಯೇತರ ಉತ್ಪನ್ನವಾಗಿದೆ. ಸಂಸ್ಕೃತೀಕೃತ ಭಾರತದ ಅನೇಕ ಭಾಗಗಳಲ್ಲಿ ಪ್ರಾದೇಶಿಕತೆ, ದೇಶೀಯತೆ ಮತ್ತು ಧಾನ್ಯ ಉತ್ಪಾದನೆಯೊಂದಿಗೆ ಕೃಷಿಯೋಗ್ಯ ಭೂಮಿಯಲ್ಲಿ ಸಂಬಂಧಿತ ಹೂಡಿಕೆ, ದೇವಾಲಯ ಹೂಡಿಕೆ ಮತ್ತು ಜಲಚಾಲಿತ ಮೂಲಸೌಕರ್ಯವನ್ನು ಆರ್ಥಿಕ ಮತ್ತು ಸಾಂಸ್ಕೃತಿಕ ಸರಕು ಎಂದು ಪರಿಗಣಿಸಿದಾಗ ಇದನ್ನು ತಿರಸ್ಕರಿಸಲಾಯಿತು.” ಎನ್ನುತ್ತಾರೆ ರೇ.

*****

ಒಂದು ಸಣ್ಣ ನೆರಳಿನಡಿ ಕುಳಿತು ಸಹಾಯಪುರಾಣಿ ಪೂಮೀನ್‌ (ಮಲ್ಲಾಸ್‌ ಮೀನು) ಸ್ವಚ್ಛ ಮಾಡುತ್ತಿದ್ದರು. ಅವರು ಅದರ ಮೇಲಿನ ಕಿವಿರುಗಳನ್ನು ಚಾಕುವಿನಿಂದ ತೆಗೆಯುವಾಗ ಸರ್‌ ಸರ್‌ ಸರ್‌ ಎನ್ನುವ ಸದ್ದು ಹೊರಡುತ್ತಿತ್ತು. ಮೂರು ಕೇಜಿಯಷ್ಟಿದ್ದ ಮೀನನ್ನು ಅವರು 300 ರೂಪಾಯಿ ಕೊಟ್ಟು ಥೆರೇಸಪುರಂ ಹರಾಜು ಕೇಂದ್ರದಿಂದ ತಂದಿದ್ದರು. ಅವರ ಕೆಲಸದ ಸ್ಥಳವೂ ಫಾತಿಮಾರ ಅಂಗಡಿಯಿರುವ ಕಾಲುವೆ ಬದಿಯಲ್ಲಿಯೇ ಇದೆ. ಮೀನಿನ ಕಿವಿರುಗಳು ಎಲ್ಲೆಡೆ ಹಾರುತ್ತಿದ್ದವು. ಕೆಲವು ಪೂಮೀನ್‌ ಸುತ್ತಲೂ ಕೆಲವು ಇನ್ನೂ ಕೆಲವು ಗಾಳಿಯಲ್ಲಿ ಹಾರುತ್ತಿದ್ದವು. ಕೆಲವು ನನ್ನ ಬಟ್ಟೆಯ ಮೇಲೆ ಬಿದ್ದಾಗ ಅವರು ತಲೆಯೆತ್ತಿ ನೋಡಿ ನಕ್ಕರು. ಅವರದು ಬಹಳ ಚುರುಕಿನ ಮತ್ತು ಗಡಿಬಿಡಿಯ ನಗು. ನಾವೆಲ್ಲ ಸೇರಿಕೊಂಡ ನಂತರ ಸಹಾಯಪುರಾಣಿ ತನ್ನ ಕೆಲಸವನ್ನು ಮುಂದುವರೆಸಿದರು. ಸರಿಯಾದ ಎರಡು ಹೊಡೆತಕ್ಕೆ ಮೀನಿನ ಎರಡೂ ಬದಿಯ ರೆಕ್ಕೆಗಳು ಕತ್ತರಿಸಿಬಿದ್ದವು. ಮೀನಿನ ಕುತ್ತಿಗೆಯನ್ನು ಕುಡುಗೋಲಿನಿಂದ ಕಚಕ್‌ ಕಚಕ್‌ ಎಂದು ಮೂರು ಪೆಟ್ಟಿಗೆ ಕತ್ತರಿಸಿ ತುಂಡು ಮಾಡಿದರು.

ಅವರ ಹಿಂದೆಯೇ ಒಂದು ಬಿಳಿನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಸೆಕೆಗೆ ಅದು ನಾಲಗೆಯನ್ನು ಹೊರಹಾಕಿ ಉಸಿರಾಡುತ್ತಿತ್ತು. ನಂತರ ಸಹಾಯಪುರಾಣಿ ಮೀನಿನ ಕರುಳನ್ನು ಹೊರತೆಗೆದು ಮೀನನ್ನು ಮಧ್ಯದಿಂದ ಕತ್ತರಿಸುತ್ತಾರೆ. ಮೀನು ಪುಸ್ತಕದಂತೆ ಎರಡು ಬದಿಗೆ ತೆರೆದುಕೊಳ್ಳುತ್ತದೆ. ಕುಡುಗೋಲಿನಿಂದ ಮೀನಿನ ಮೇಲೆ ಬರೆಗಳನ್ನು ಎಳೆದು ನಂತರ ಒಂದು ಮುಷ್ಟಿ ಉಪ್ಪನ್ನು ಕೈಗೆತ್ತಿಕೊಳ್ಳುತ್ತಾರೆ. ಅದನ್ನು ಮೀನಿನ ಮೈತುಂಬಾ ಹಾಕಿ ತಿಕ್ಕುತ್ತಾರೆ. ಮೀನಿನ ಗುಲಾಬಿ ಬಣ್ಣವು ಉಪ್ಪಿನ ಹರಳುಗಳಿಂದ ಹೊಳೆಯುವ ತನಕವೂ ಹೀಗೆ ಉಜ್ಜುತ್ತಲೇ ಇರುತ್ತಾರೆ. ಮೀನು ಒಣ ಹಾಕಲು ತಯಾರಾಗುತ್ತಿದ್ದ ಹಾಗೆ ಚಾಕು ಮತ್ತು ಕುಡುಗೋಲನ್ನು ತೊಳೆದಿಡುತ್ತಾರೆ. ನಂತರ ತಮ್ಮ ಕೈಗಳನ್ನು ನೀರಿನಲ್ಲಿದ್ದ ಕೊಡವಿ ಒಣಗಿಸಿಕೊಂಡರು. ನಂತರ ನಮ್ಮ “ಬನ್ನಿ” ಎಂದು ಕರೆದರು. ನಾವು ಅವರನ್ನು ಹಿಂಬಾಲಿಸಿದೆವು.

Sahayapurani scrapes off the scales of Poomeen karuvadu as her neighbour's dog watches on
PHOTO • M. Palani Kumar

ಸಹಾಯಪುರಾಣಿ ಮಲ್ಲಾಸ್‌ ಮೀನಿನ ಕಿವಿರುಗಳನ್ನು ತೆಗೆಯುತ್ತಿರುವಾಗ ಅವರ ಪಕ್ಕದ ಮನೆಯ ನಾಯಿ ನೋಡುತ್ತಿರುವುದು

Sahayapurani rubs salt into the poomeen 's soft pink flesh
PHOTO • M. Palani Kumar

ಸಹಾಯಪುರಾಣಿ ಪೂಮೀನಿನ ಮೃದು ಗುಲಾಬಿ ಮೈಯಿಗೆ ಉಪ್ಪು ಹಚ್ಚುತ್ತಿರುವುದು

ತಮಿಳುನಾಡಿನ ಸಾಗರ ಮೀನುಗಾರಿಕೆ ಗಣತಿ 2016ರ ಪ್ರಕಾರ , ರಾಜ್ಯದ ಮೀನುಗಾರರಲ್ಲಿ 2.62 ಲಕ್ಷ ಮಹಿಳೆಯರು ಮತ್ತು 2.74 ಲಕ್ಷ ಪುರುಷರಿದ್ದಾರೆ. ಶೇ.91ರಷ್ಟು ಸಮುದ್ರ ಮೀನುಗಾರರ ಕುಟುಂಬಗಳು ಬಡತನ ರೇಖೆಗಿಂತ (ಬಿಪಿಎಲ್) ಕೆಳಗಿವೆ.

ಸೂರ್ಯನ ಪ್ರಕರ ಬೆಳಕಿನಿಂದ ಒಂದಷ್ಟು ದೂರ ಕುಳಿತು ನಾನು ಸಹಾಯಪುರಾಣಿಯವರ ಬಳಿ ನೀವು ದಿನಕ್ಕೆ ಎಷ್ಟು ವ್ಯಾಪಾರ ಮಾಡುತ್ತೀರೆಂದು ಕೇಳಿದೆ. “ಅದೆಲ್ಲವೂ ಆಡಂವರ್‌ [ಯೇಸು] ಇಂದು ನಮಗೆ ಏನು ನೀಡಬೇಕೆಂದು ಬಯಸಿರುತ್ತಾರೋ ಅದರ ಮೇಲೆ ಅವಲಂಬಿತ. ನಾವು ಆತನ ಕೃಪೆಯಿಂದ ಬದುಕುತ್ತಿದ್ದೇವೆ” ಎಂದರು. ನಮ್ಮ ಸಂಭಾಷಣೆಯ ನಡುವೆ ಯೇಸು ಹಲವು ಬಾರಿ ಬಂದು ಹೋದರು. “ಅವರು ಒಣಗಿದ ಎಲ್ಲಾ ಮೀನುಗಳನ್ನೂ ಮಾರಟ ಮಾಡಲು ಸಹಾಯ ಮಾಡಿದಲ್ಲಿ ನಾವು 10:30ಕ್ಕೆ ಮನೆಗೆ ಬರುತ್ತೇವೆ.”

ಅವರ ಈ ಶಾಂತ ಸ್ವೀಕಾರ ಗುಣ ಅವರ ಕೆಲಸದ ಸ್ಥಳದಲ್ಲೂ ಕಾಣುತ್ತದೆ. ಅವರು ಮೀನು ಒಣಗಿಸುವ ಸ್ಥಳವಿರುವುದು ಕಾಲುವೆಯ ಪಕ್ಕದಲ್ಲಿ. ಇದು ಅದಕ್ಕೆ ಹೇಳಿ ಮಾಡಿಸಿದ ಸ್ಥಳವಲ್ಲ. ಆದರೆ ಅವರಿಗೆ ಪರ್ಯಾಯವಾದರೂ ಎಲ್ಲಿದೆ? ಇಲ್ಲಿ ಸುಡುವ ಬಿಸಿಲು ಮಾತ್ರವಲ್ಲ, ಕೆಲವೊಮ್ಮೆ ಅವರ ಸರಕು ಅಕಾಲಿಕ ಮಳೆಗೂ ತುತ್ತಾಗುತ್ತದೆ. “ಅವತ್ತೊಂದು ದಿನ ಮೀನುಗಳಿಗೆ ಉಪ್ಪೂಡಿ ಒಣಗಿಸಿ ಬಂದು ಮನೆಯೊಳಗೆ ಬಂದು ಸ್ವಲ್ಪ ಹೊತ್ತು ಕಣ್ಣು ಮುಚ್ಚಿದ್ದೆ… ಇದ್ದಕ್ಕಿದ್ದ ಹಾಗೆ ಒಬ್ಬರು ಬಂದು ಮಳೆ ಬರುತ್ತಿರುವುದಾಗಿ ತಿಳಿಸಿದರು. ಓಡಿ ಹೋಗಿ ನೋಡುವುದರೊಳಗೆ ಅರ್ಧದಷ್ಟು ಮೀನು ನೆನೆದಿದ್ದವು. ಸಣ್ಣ ಮೀನುಗಳು ಮಳೆಯಲ್ಲಿ ನೆನದರೆ ಅವು ಉಳಿಯುವುದಿಲ್ಲ. ಹಾಳಾಗುತ್ತವೆ.”

ಪ್ರಸ್ತುತ 67 ವರ್ಷದ ಸಹಾಯಪುರಾಣಿ ತನ್ನ ಚಿತ್ತಿ – ತಾಯಿಯ ತಂಗಿಯ ಬಳಿ ಮೀನು ಒಣಗಿಸುವ ಕಲೆಯನ್ನು ಕಲಿತರು. ಮೀನಿನ ವ್ಯವಹಾರ ಬಹಳ ದೊಡ್ಡದಾಗಿ ಬೆಳೆದಿದ್ದರೂ ಒಣ ಮೀನಿನ ವ್ಯಾಪಾರ ಕುಗ್ಗುತ್ತಿದೆಯೆಂದು ಅವರು ಹೇಳುತ್ತಾರೆ. “ಇದಕ್ಕೆ ಕಾರಣ ಈಗೆಲ್ಲ ಮೀನು ತಿನ್ನಲು ಬಯಸುವವರು ಹಸಿ ಮೀನನ್ನೇ ಸಾರು ಮಾಡುತ್ತಾರೆ. ಈಗ ಅದು ಸುಲಭವಾಗಿ ಸಿಗುತ್ತದೆ. ಕೆಲವೊಮ್ಮೆ ಕಡಿಮೆ ಬೆಲೆಗೂ ಮಾರಲಾಗುತ್ತದೆ. ಜೊತೆಗೆ ಬರೀ ಈ ಮೀನೊಂದನ್ನೇ ವಾರವಿಡೀ ಯಾರೂ ತಿನ್ನುವುದಿಲ್ಲ. ವಾರದಲ್ಲಿ ಎರಡು ದಿನ ಮೀನು ಮಾಡಿದೆ ಒಂದು ದಿನ ಬಿರಿಯಾನಿ, ಒಂದು ದಿನ ಸಾಂಬಾರ್‌, ರಸಂ, ಸೋಯಾ ಬಿರಿಯಾನಿ ಹೀಗೆ ಬೇರೆ ಬೇರೆ ಮಾಡುತ್ತಾರೆ…”

ಇದಕ್ಕಿರುವ ಮುಖ್ಯ ಕಾರಣವೆಂದರೆ ವೈದ್ಯರು ಇದರ ವಿರುದ್ಧ ಸಲಹೆ ನೀಡುವುದು. “ಕರುವಾಡು ತಿನ್ನಬೇಡಿ. ಅದರಲ್ಲಿ ಬಹಳ ಉಪ್ಪಿರುತ್ತದೆ. ಇದರಿಂದ ಬಿಪಿ ಹೆಚ್ಚಾಗುತ್ತದೆ ಎಂದು ಡಾಕ್ಟರ್‌ ಸಲಹೆ ನೀಡುತ್ತಾರೆ. ಆಗ ಜನರು ಒಣ ಮೀನಿನಿಂದ ದೂರವಿರುತ್ತಾರೆ” ಎಂದು ಹೇಳುವಾಗ ಅವರು ಸಣ್ಣ ಮಕ್ಕಳಂತೆ ಬಾಯಿ ಮುಚ್ಚಿಕೊಂಡೇ ಕೆಳತುಟಿಯನ್ನು ಹೊರಚಾಚುತ್ತಾರೆ. ಇದು ನಿರಾಶೆ ಮತ್ತು ದುರ್ಬಲತೆ ಎರಡನ್ನೂ ಹೊರಹೊಮ್ಮಿಸುತ್ತದೆ.

ಕರುವಾಡು ಸಿದ್ಧವಾದ ನಂತರ ಅದನ್ನು ಅವರು ಮನೆಯಲ್ಲಿ ಸಂಗ್ರಹಿಸಿಡುತ್ತಾರೆ. ಇದಕ್ಕೆಂದೇ ಅವರು ಒಂದು ಕೋಣೆಯನ್ನು ಮೀಸಲಿಟ್ಟಿದ್ದಾರೆ. “ದೊಡ್ಡ ಮೀನುಗಳು ಸಾಮಾನ್ಯವಾಗಿ ಒಂದು ತಿಂಗಳ ತನಕ ಬಾಳಿಕೆ ಬರುತ್ತವೆ” ಎನ್ನುತ್ತಾರವರು. ಅವರ ಕೆಲಸದ ಕುರಿತು ಅವರಿಗೆ ಬಹಳ ವಿಶ್ವಾಸ; ಅವರು ಮೀನನ್ನು ಕತ್ತರಿಸಿ ಉಪ್ಪು ಊಡುವ ರೀತಿ ಅದರ ಬಾಳಿಕೆಗೆ ಕಾರಣವಾಗುತ್ತದೆ. “ಗ್ರಾಹಕರು ಕೂಡಾ ಅವುಗಳನ್ನು ಕೆಲವು ವಾರಗಳ ಕಾಲ ಇರಿಸಿಕೊಳ್ಳಬಹುದು. ಅದಕ್ಕೆ ಒಂದಿಷ್ಟು ಉಪ್ಪು ಮತ್ತು ಅರಿಶಿನ ಬಳಿದು ನ್ಯೂಸ್‌ ಪೇಪರ್‌ ಸುತ್ತಿ ಅದನ್ನು ಗಾಳಿಯಾಡದ ಡಬ್ಬದಲ್ಲಿಟ್ಟು ಫ್ರಿಡ್ಜಿನಲ್ಲಿಟ್ಟರೆ ಬಹಳ ಕಾಲದವರೆಗೆ ಬಾಳಿಕೆ ಬರುತ್ತವೆ.”

Sahayapurani transferring fishes from her morning lot into a box. The salt and ice inside will help cure it
PHOTO • M. Palani Kumar

ಸಹಾಯಪುರಣಿ ಬೆಳಗಿನ ಮೀನು ರಾಶಿಯನ್ನು ಪೆಟ್ಟಿಗೆಗೆ ಹಾಕುತ್ತಿರುವುದು. ಐಸ್‌ ಮತ್ತು ಉಪ್ಪು ಮೀನಿನ ಕ್ಯೂರಿಂಗ್‌ಗೆ ಸಹಾಯ ಮಾಡುತ್ತದೆ

ಅವರ ತಾಯಿಯ ಕಾಲದಲ್ಲಿ ಒಣ ಮೀನನ್ನು ಹೆಚ್ಚು ಹೆಚ್ಚು ಬಳಸಲಾಗುತ್ತಿತ್ತು. ಆಗೆಲ್ಲ ರಾಗಿ ಗಂಜಿಯ ಜೊತೆ ಹುರಿದ ಒಣ ಮೀನನ್ನು ಕಚ್ಚಿಕೊಂಡು ತಿನ್ನಲಾಗುತ್ತಿತ್ತು. “ಮೊದಲು ದೊಡ್ಡ ಮಡಕೆಯೊಂದರೊಳಗೆ ಒಂದಷ್ಟು ನುಗ್ಗೆಕಾಯಿ, ಬದನೆಕಾಯಿ ಮತ್ತು ಮೀನು ಸೇರಿಸಿ ಸಾರು ಮಾಡುತ್ತಿದ್ದರು. ನಂತರ ಅದನ್ನು ಗಂಜಿಯ ಮೇಲೆ ಸುರಿಯುತ್ತಿದ್ದರು. ಈಗೆಲ್ಲ ಬಹಳ ʼನೀಟ್‌ʼ ಮಾಡುವುದು ಶುರುವಾಗಿದೆ” ಎಂದು ಅವರು ಜೋರಾಗಿ ನಕ್ಕರು. “ಅದೆಲ್ಲ ಯಾಕೆ ಈಗ ಅನ್ನ ಕೂಡಾ ʼನೀಟ್‌ʼ ಆಗಿರುತ್ತದೆ. ತರಕಾರಿ ‌ʼಕೂಟ್ʼ [ಬೇಳೆ ಮತ್ತು ತರಕಾರಿಯ ಮೇಲೋಗರ], ಮತ್ತೆ ಮೊಟ್ಟೆಯನ್ನ ಸೈಡ್ಸ್‌ ಆಗಿ ಇಟ್ಕೊತಾರೆ. 40 ವರ್ಷಗಳ ಕೆಳಗೆ ನಾನು ಕೂಟ್‌ ಎನ್ನುವ ಹೆಸರನ್ನೇ ಕೇಳಿರಲಿಲ್ಲ.”

ಸಾಮಾನ್ಯವಾಗಿ ಸಹಾಯಪುರಣಿ ಬೆಳಗಿನ 4:30ಕ್ಕೆ ಮನೆಬಿಟ್ಟು ಸುಮಾರು 15 ಕಿಲೋಮೀಟರ್‌ ವ್ಯಾಪ್ತಿಯ ಊರುಗಳಿಗೆ ಬಸ್‌ ಮೂಲಕ ಹೋಗಿ ಒಣಮೀನು ಮಾರುತ್ತಾರೆ. 2021ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಮ್‌ ಕೆ ಸ್ಟಾಲಿನ್‌ ಆರಂಭಿಸಿದ ಸ್ತ್ರೀಯರಿಗಾಗಿ ಉಚಿತ ಬಸ್‌ ಪ್ರಯಾಣ ಯೋಜನೆಯನ್ನು ಉಲ್ಲೇಖಿಸುತ್ತಾ “ನಮಗೆ ಗುಲಾಬಿ ಬಸ್ಸುಗಳಲ್ಲಿ ಟಿಕೆಟ್‌ ಇಲ್ಲ” ಎನ್ನುತ್ತಾರೆ. “ಆದರೆ ನಮ್ಮ ಬುಟ್ಟಿಗೆ ರೂಪಾಯಿ 10ರಿಂದ 24ರವರೆಗೆ ನೀಡಿ ಫುಲ್‌ ಟಿಕೇಟ್‌ ಪಡೆಯುತ್ತೇವೆ. ಅದು ನಾವು ಹೋಗುವ ದೂರವನ್ನು ಅವಲಂಬಿಸಿರುತ್ತದೆ.” ಕೆಲವೊಮ್ಮೆ ಅವರು ಕಂಡಕ್ಟರ್‌ ಕೈಯಿಂದ ತಪ್ಪಿಸಿಕೊಳ್ಳುತ್ತಾರೆ, “ಅದು ಅವನು ಒಳ್ಳೆಯವನಾಗಿದ್ದರೆ ಮಾತ್ರ” ಎಂದು ನಗುತ್ತಾರೆ.

ಸಹಾಯಪುರಾಣಿ ತಮ್ಮ ನಿಗದಿತ ಸ್ಥಳ ತಲುಪಿದ ನಂತರ ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಊರಿನ ದಾರಿಯುದ್ದಕ್ಕೂ ನಡೆದುಕೊಂಡೇ ಒಣಮೀನು ಮಾರುತ್ತಾರೆ. ಈ ಕೆಲಸ ಬಹಳ ಶ್ರಮ, ಭಾರ ಹೊರುವಿಕೆ ಹೊಂದಿರುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಜೊತೆಗೆ ಇದರಲ್ಲಿ ಪೈಪೋಟಿಯೂ ಇದೆ. “ನಾವು ಹಸಿ ಮೀನುವ ಸಮಯದಲ್ಲಿ ಇನ್ನೂ ಕಷ್ಟವಿತ್ತು. ಗಂಡಸರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಬುಟ್ಟಿಯನ್ನು ಕಟ್ಟಿಕೊಂಡು ಮಾರಾಟಕ್ಕೆ ಬರುತ್ತಾರೆ. ಅವರು ನಾವು ಒಂದು ಹೊಗ್ಗಿ ಬರುವುದರೊಳಗೆ ಏಳೆಂಟು ಮನೆಯಲ್ಲಿ ವ್ಯಾಪಾರ ಮುಗಿಸಿರುತ್ತಿದ್ದರು. ಅವರ ಬಳಿ ವಾಹನವಿದ್ದ ಕಾರಣ ಅವರಿಗೆ ನಡೆಯುವ ಕಷ್ಟವಿರಲಿಲ್ಲ. ಆದರೆ ನಮ್ಮ ಕತೆ ಹಾಗಿರಲಿಲ್ಲ ನಾವು ನಡೆದೇ ಸಾಗಬೇಕಿತ್ತು. ಜೊತೆಗೆ ಗಂಡಸರು ಯಾವಾಗಲೂ ನಮ್ಮನ್ನು ಕಡೆಗಣಿಸುತ್ತಿದ್ದರು” ಎಂದು ಅವರು ಹೇಳುತ್ತಾರೆ.

ತಿಂಗಳುಗಳು ಬದಲಾದ ಹಾಗೆ ಒಣಮೀನಿನ ಬೇಡಿಕೆಯೂ ಬದಲಾಗುತ್ತದೆ. “ಊರ ಹಬ್ಬ ಬಂದಾ ಜನರು ಹಲವು ದಿನಗಳವರೆಗೆ ಅಥವಾ ವಾರಗಳ ತನಕ ಮಾಂಸ ತಿನ್ನುವುದನ್ನು ಬಿಡುತ್ತಾರೆ. ಊರಿನ ಜನರೆಲ್ಲ ಹೀಗೆ ಮಾಂಸ ತಿನ್ನುವುದನ್ನು ಬಿಟ್ಟಾಗ ಅದು ನಮ್ಮ ವ್ಯಾಪಾರದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. “ಮತ್ತು ಇದು ಹೊಸ ಅಭ್ಯಾಸ ಎನ್ನುತ್ತಾರೆ ಸಹಾಯಪುರಾಣಿ. “ಐದು ವರ್ಷಗಳ ಹಿಂದೆ ಜನರಲ್ಲಿ ಇಷ್ಟೊಂದು ಧಾರ್ಮಿಕ ಪ್ರಜ್ಞೆಯನ್ನು ಕಂಡಿರಲಿಲ್ಲ.” ಹಬ್ಬದ ಸಮಯದಲ್ಲಿ ಹಾಗೂ ಹಬ್ಬದ ನಂತರ ಜನರು ತಮ್ಮ ಸಂಬಂಧಿಕರಿಗಾಗಿ ದೊಡ್ಡ ಮೊತ್ತದ ಮೀನನ್ನು ತರಿಸುತ್ತಾರೆ. “ಕೆಲವೊಮ್ಮೆ ಒಂದು ಕೇಜಿಯಷ್ಟು ಕೂಡ ಕೊಳ್ಳುತ್ತಾರೆ” ಎಂದು ಅವರ 36 ವರ್ಷದ ಮಗಳು ನ್ಯಾನ್ಸಿ ವಿವರಿಸುತ್ತಾರೆ.

ವ್ಯಾಪಾರ ಕಡಿಮೆಯಿರುವ ತಿಂಗಳುಗಳಲ್ಲಿ ಕುಟುಂಬವು ಸಾಲವನ್ನು ಅವಲಂಬಿಸಿ ಜೀವನ ನಡೆಸುತ್ತದೆ. “ಹತ್ತು ಪೈಸೆ ಬಡ್ಡಿ, ದಿನದ ಬಡ್ಡಿ, ವಾರದ ಬಡ್ಡಿ. ಮಳೆಗಾಲ ಮತ್ತು ಮೀನುಗಾರಿಕೆಗೆ ನಿಷೇಧವಿರುವ ಸಮಯದಲ್ಲಿ ನಾವು ಈ ರೀತಿಯಾಗಿ ಸಾಲ ಪಡೆದು ದಿನ ದೂಡುತ್ತೇವೆ. ಕೆಲವರು ಗಿರವಿ ಅಂಗಡಿ ಅಥವಾ ಬ್ಯಾಂಕಿನಲ್ಲಿ ಒಡವೆಗಳನ್ನು ಅಡವಿಡುತ್ತಾರೆ.” ಎಂದು ಸಾಮಾಜಿಕ ಕಾರ್ಯಕರ್ತೆಯಾಗಿರುವ ನ್ಯಾನ್ಸಿ ಹೇಳುತ್ತಾರೆ. “ಈ ಸಾಲ ದಿನದ ಊಟಕ್ಕಾಗಿ ಮಾಡುವುದು” ಎಂದು ತಾಯಿ ಮಗಳ ಮಾತನ್ನು ಪೂರ್ಣಗೊಳಿಸಿದರು.

Left: A portrait of Sahayapurani.
PHOTO • M. Palani Kumar
Right: Sahayapurani and her daughters talk to PARI about the Karuvadu trade
PHOTO • M. Palani Kumar

ಎಡ: ಸಹಾಯಪುರಾಣಿಯವರ ಒಂದು ಭಾವಚಿತ್ರ. ಬಲ: ಸಹಾಯಪುರಾಣಿ ಮತ್ತು ಅವರ ಹೆಣ್ಣುಮಕ್ಕಳು ಕರುವಾಡು ವ್ಯಾಪಾರದ ಬಗ್ಗೆ ಪರಿಯೊಂದಿಗೆ ಮಾತನಾಡುತ್ತಿರುವುದು

ಕರುವಾಡು ವ್ಯವಹಾರದಲ್ಲಿ ಶ್ರಮ ಮತ್ತು ಆದಾಯ ಸಮನಾಗಿರುವುದಿಲ್ಲ. ಆ ದಿನ ಸಹಾಯಪುರಾಣಿ ಒಂದು ಬುಟ್ಟಿ ಮೀನನ್ನು [ಸಾಲೈ ಮೀನ್‌ ಅಥವಾ ಬೂತಾಯಿ] 1,300 ರೂಪಾಯಿ ಕೊಟ್ಟು ಖರೀದಿಸಿದರು. ಅವರಿಗೆ ಅದರಿಂದ 500 ರೂ. ಲಾಭ ಸಿಗಲಿದೆ. ಅದಕ್ಕಾಗಿ ಅವರು ಎರಡು ಅದನ್ನು ಕ್ಲೀನ್‌ ಮಾಡುವುದು ಮತ್ತು ಉಪ್ಪು ಊಡುವುದಕ್ಕಾಗಿ ಕಳೆಯಬೇಕು. ಒಣಗಿದ ನಂತರ ಅದನ್ನು ಬಸ್ಸಿನಲ್ಲಿಹೋಗಿ ಮಾರಿ ಬರುವುದಕ್ಕೆ ಎರಡು ದಿನ ಬೇಕಾಗುತ್ತದೆ. ಎಂದರೆ ಅವರ ಒಟ್ಟು ಶ್ರಮಕ್ಕೆ ದಿನಕ್ಕೆ ಸಿಗುವುದು 125 ರೂಪಾಯಿಯಲ್ಲವೆ ಎಂದು ನಾನು ಕೇಳಿದೆ.

ಅವರು ಸುಮ್ಮನೆ ಹೌದು ಎಂದು ತಲೆ ಅಲ್ಲಾಡಿಸಿದರು. ಆದರೆ ಈ ಬಾರಿ ನಗಲಿಲ್ಲ.

*****

ತೂತುಕುಡಿಯ ಕರುವಾಡು ವ್ಯಾಪಾರದ ಮಾನವ ಸಂಪನ್ಮೂಲ ಮತ್ತು ಆರ್ಥಿಕತೆಯ ಚಿತ್ರ ವು ಅಸ್ಪಷ್ಟವಾಗಿದೆ. ತಮಿಳುನಾಡು ಸಾಗರ ಮೀನುಗಾರಿಕೆ ಗಣತಿ ಯಲ್ಲಿ ನಾವು ಕೆಲವು ಅಂಕಿಅಂಶಗಳನ್ನು ನೋಡಬಹುದು . ಥೆರೆಸಪುರಂನಲ್ಲಿ ಮೀನುಗಳನ್ನು ಕ್ಯೂರಿಂಗ್‌ ಮಾಡುವ ಮತ್ತು ಸಂಸ್ಕರಿಸುವ ಕೆಲಸದಲ್ಲಿ 79 ಜನರು ತೊಡಗಿಸಿಕೊಂಡಿದ್ದಾರೆ, ಟುಟಿಕೋರಿನ್ ಜಿಲ್ಲೆಯಾದ್ಯಂತ ಈ ಸಂಖ್ಯೆ 465. ರಾಜ್ಯದಾದ್ಯಂತ, ಒಟ್ಟು ಮೀನುಗಾರರ ಪೈಕಿ ಕೇವಲ ಒಂಬತ್ತು ಪ್ರತಿಶತದಷ್ಟು ಜನರು ಈ ಉದ್ಯೋಗದಲ್ಲಿದ್ದಾರೆ. ಆದಾಗ್ಯೂ, ಈ ಪೈಕಿ ಶೇಕಡಾ 87ರಷ್ಟು ಮಹಿಳೆಯರು. ಈ ಎಫ್ಎಒ ವರದಿಯಲ್ಲಿ ಜಾಗತಿಕ ಅಂಕಿಅಂಶಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ, ಅಲ್ಲಿ ಮಹಿಳಾ ಉದ್ಯೋಗಿಗಳು "ಸಣ್ಣ ಪ್ರಮಾಣದ ಮೀನುಗಾರಿಕೆಯ ನಂತರದ ವಲಯದಲ್ಲಿ ಅರ್ಧದಷ್ಟು ಕಾರ್ಮಿಕರಾಗಿದ್ದಾರೆ."

ಇದರಲ್ಲಿ ಲಾಭ ನಷ್ಟದ ಲೆಕ್ಕಾಚಾರ ಸ್ವಲ್ಪ ಕಷ್ಟ. ಸಾವಿರ ರೂಪಾಯಿಗೆ ಮಾರಾಟವಾಗುವ ದೊಡ್ಡ ಸೈಜಿನ ಐದು ಕೇಜಿ ಮೀನನ್ನು, ಅದು ಸ್ವಲ್ಪ ಮೃದುವಾದಾಗ ನೂರು ರೂಪಾಯಿಗೆ ನೀಡಲಾಗುತ್ತದೆ. ಇಂತಹ ಮೀನನ್ನು ಇವರು ಗುಲುಗುಲು ಎಂದು ಕರೆಯುತ್ತಾರೆ. ಹಸಿ ಮೀನು ಖರೀದಿದಾರರು ಬೇಡವೆಂದು ಬಿಟ್ಟ ಮೀನು ಇವರ ಸರಕಾಗುತ್ತದೆ. ತಯಾರಿಯ ಕೆಲಸ ಕಡಿಮೆ ಹಿಡಿಯುವುದರಿಂದ ಅವರು ಇವುಗಳಿಗೆ ಆದ್ಯತೆ ನೀಡುತ್ತಾರೆ.

ಐದು ಕಿಲೋ ತೂಕದ ಒಂದು ದೊಡ್ಡ ಮೀನನ್ನು ಸಿದ್ಧಪಡಿಸಲು ಫಾತಿಮಾ ಅವರಿಗೆ ಒಂದು ಗಂಟೆ ಸಮಯ ಹಿಡಿಯಿತು. ಅಷ್ಟೇ ತೂಕದ ಸಣ್ಣ ಮೀನುಗಳನ್ನು ಸಿದ್ದಪಡಿಸಲು ಅವರಿಗೆ ಅದರ ಎರಡರಷ್ಟು ಸಮಯ ಹಿಡಿಸುತ್ತದೆ ಎನ್ನುತ್ತಾರವರು. ಉಪ್ಪಿನ ಬಳಕೆಯಲ್ಲಿ ಕೂಡಾ ವ್ಯತ್ಯಾಸವಾಗುತ್ತದೆ. ದೊಡ್ಡ ಮೀನುಗಳಿಗೆ ಅವುಗಳ ತೂಕದ ಅರ್ಧದಷ್ಟು ಉಪ್ಪು ಬೇಕಾದರೆ, ಸಣ್ಣ ಮೀನುಗಳಿಗೆ ಅವುಗಳ ತೂಕದ ಎಂಟನೇ ಒಂದರಷ್ಟು ತೂಕದ ಉಪ್ಪು ಬೇಕಾಗುತ್ತದೆ.

Scenes from Therespuram auction centre on a busy morning. Buyers and sellers crowd around the fish and each lot goes to the highest bidder
PHOTO • M. Palani Kumar
Scenes from Therespuram auction centre on a busy morning. Buyers and sellers crowd around the fish and each lot goes to the highest bidder
PHOTO • M. Palani Kumar

ಬಿಡುವಿಲ್ಲ ಬೆಳಗೊಂದರಲ್ಲಿ ಥೆರೇಸಪುರಂ ಹರಾಜು ಕೇಂದ್ರದ ದೃಶ್ಯಗಳು. ಕೊಳ್ಳುಗರು ಮತ್ತು ಮಾರಾಟಗಾರರು ಮೀನಿನ ಸುತ್ತ ನೆರೆಯುತ್ತಾರೆ. ಹೆಚ್ಚಿನ ಬೆಲೆಗೆ ಹರಾಜು ಕೂಗಿದವರಿಗೆ ಮೀನು ದೊರೆಯುತ್ತದೆ

A woman vendor carrying fishes at the Therespuram auction centre on a busy morning. Right: At the main fishing Harbour in Tuticorin, the catch is brought l ate in the night. It is noisy and chaotic to an outsider, but organised and systematic to the regular buyers and sellers
PHOTO • M. Palani Kumar
A woman vendor carrying fishes at the Therespuram auction centre on a busy morning. Right: At the main fishing Harbour in Tuticorin, the catch is brought l ate in the night. It is noisy and chaotic to an outsider, but organised and systematic to the regular buyers and sellers
PHOTO • M. Palani Kumar

ಥೆರೇಸಪುರಂ ಹರಾಜು ಕೇಂದ್ರದಲ್ಲಿ ಮೀನು ಕೊಂಡೊಯ್ಯೊತ್ತಿರುವುದು. ಬಲ: ಟ್ಯುಟಿಕೋರಿನ್‌ನ ಮುಖ್ಯ ಬಂದರಿನಲ್ಲಿ ತಡರಾತ್ರಿ ಮೀನು ಇಳಿಸುತ್ತಿರುವುದು. ಇದನ್ನು ಹೊರಗಿನಿಂದ ನೋಡುವವರಿಗೆ ಗದ್ದಲದಂತೆಯೂ, ಗೊಂದಲಮಯವಾಗಿಯೂ ಕಾಣಬಹುದು. ಆದರೆ ಖರೀದಿದಾರರು ಮತ್ತು ಮಾರಾಟಗಾರರ ಮಟ್ಟಿಗೆ ಇದೊಂದು ವ್ಯವಸ್ಥಿತ ವ್ಯವಸ್ಥೆ

ಒಣ ಮೀನಿಗೆ ಬೇಕಾಗುವ ಉಪ್ಪನ್ನುಉಪ್ಪು ತಯಾರಾಗುವ ಸ್ಥಳವಾದ ಉಪ್ಪಾಳಂನಿಂದ ತರಲಾಗುತ್ತದೆ. ಉಪ್ಪಿನ ಅಳತೆಗೆ ತಕ್ಕಂತೆ ಬೆಲೆಯಲ್ಲಿಯೂ ವ್ಯತ್ಯಾಸವಾಗುತ್ತದೆ, ಸುಮಾರು 1,000 ರೂಪಾಯಿಗಳಿಂದ 3,000 ರೂಗಳ ತನಕ ಇರುತ್ತದೆ. ಅವರು ಅದನ್ನು ʼಕುಟ್ಟಿಯಾನೈʼ (ಮರಿಯಾನೆ) ಎಂದು ಕರೆಯಲ್ಪಡುವ ಮಿನಿ ಟ್ರಕ್ಕಿನಲ್ಲಿ ಸಾಗಿಸುತ್ತಾರೆ. ಹೀಗೆ ತಂದ ಉಪ್ಪನ್ನು ಮನೆಯ ಬಳಿ ನೀಲಿ ಡ್ರಮ್ಮುಗಳಲ್ಲಿ ಸಂಗ್ರಹಿಸಿಡಲಾಗುತ್ತದೆ.

ಕರುವಾಡು ಸಂಸ್ಕರಣೆಯ ಪ್ರಕ್ರಿಯೆ ತಮ್ಮ ಅಜ್ಜಿ ಕಾಲದಿಂದಲೂ ಅಷ್ಟೇನೂ ಬದಲಾಗಿಲ್ಲ ಎನ್ನುತ್ತಾರೆ ಫಾತಿಮಾ. ಮೊದಲಿಗೆ ಮೀನಿನ ಹೊಟ್ಟೆ ಬಗೆದು ಸ್ವಚ್ಛಗೊಳಿಸಿ ಅದರ ಕಿವಿರುಗಳನ್ನು ತೆಗೆಯಲಾಗುತ್ತದೆ. ನಂತರ ಅದಕ್ಕೆ ಉಪ್ಪು ಹಚ್ಚಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ತಮ್ಮ ಕೆಲಸ ಕ್ಲೀನ್‌ ಆಗಿರುತ್ತದೆ ಎಂದು ಅವರು ನನಗೆ ಭರವಸೆ ನೀಡಿದರು. ನನಗೆ ತಮ್ಮ ಬುಟ್ಟಿಯಲ್ಲಿನ ಮೀನನ್ನು ಎತ್ತಿ ತೋರಿಸಿದರು. ಅವುಗಳಲ್ಲಿ ಒಂದಕ್ಕೆ ಅರಿಶಿನ ಹಚ್ಚಲಾಗಿತ್ತು. ಒಂದು ಕಿಲೋ ಮೀನು 150ರಿಂದ 200 ರೂಪಾಯಿಗಳಿಗೆ ಮಾರಾಟವಾಗುತ್ತದೆ. ಇನ್ನೊಂದು ಬಟ್ಟೆಯಲ್ಲಿ ಊಳೈ ಮೀನ್‌ (ಹೊಟ್ಟೆಬಾಕ ಮೀನು) ಇತ್ತು. ಅದರಡಿ ಪ್ಲಾಸ್ಟಿಕ್‌ ಕವರಿನಲ್ಲಿ ಸಾಲೈ ಕರುವಾಡು (ಒಣ ಬೂತಾಯಿ) ಇತ್ತು. ಅವರ ತಂಗಿ ಫ್ರೆಡರಿಕ್‌ ಪಕ್ಕದ ಅಂಗಡಿಯಿಂದ ನಮ್ಮನ್ನು ಕರೆದು, “ನಮ್ಮ ಕೆಲಸವು ನಾಕ್ರೆ ಮೂಕ್ರೆ (ಬೇಕಾಬಿಟ್ಟಿ) ಯಾರಾದರೂ ಅದನ್ನು ಖರೀದಿಸುತ್ತಾರೆಯೇ. ಈಗ ಬಹಳಷ್ಟು ಜನ – ಪೊಲೀಸರು ಕೂಡಾ ನಮ್ಮಿಂದ ಮೀನು ಖರಿದೀಸುತ್ತಾರೆ.” ಎಂದರು.

ಈ ಸಹೋದರಿಯರ ಕೈಗಳಲ್ಲಿ ಗಾಯ, ಗೀರುಗಳೂ ಸಾಕಷ್ಟಿವೆ. ಫ್ರೆಡರಿಕ್‌ ತನ್ನ ಕೈಗಳನ್ನು ನನಗೆ ತೋರಿಸಿದರು. ಅವರ ಕೈಯಲ್ಲಿ ಚಾಕುವಿನಿಂದಾದ ಅನೇಕ ಗಾಯಗಳಿದ್ದವು. ಕೆಲವು ಸಣ್ಣವಾದರೆ, ಇನ್ನೂ ಕೆಲವು ಆಳವಾದ ಗಾಯಗಳು. ಪ್ರತಿಯೊಂದೂ ಗಾಯವೂ ಅವರ ಭೂತಕಾಲದ ಕತೆಗಳನ್ನು ಹೊಂದಿವೆ. ಅವು ಹೇಳುವ ಕತೆಗಳು ಅವರ ಅಂಗೈ ರೇಖೆಯ ಮೇಲಿನ ಗೆರೆಗಳು ಹೇಳುವ ಕತೆಗಳಿಗಿಂತಲೂ ನಿಖರವಿರುತ್ತವೆ.

"ನನ್ನ ಸೋದರ ಮಾವ ಮೀನುಗಳನ್ನು ತರುತ್ತಾರೆ, ಮತ್ತು ನಾವು ನಾಲ್ವರು ಸಹೋದರಿಯರು ಅದನ್ನು ಒಣಗಿಸಿ ಮಾರಾಟ ಮಾಡುತ್ತೇವೆ" ಎಂದು ಫಾತಿಮಾ ತನ್ನ ಅಂಗಡಿಯೊಳಗೆ ನೆರಳಿನಲ್ಲಿ ಕುಳಿತು ಹೇಳುತ್ತಾರೆ. "ಅವರು ನಾಲ್ಕು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಾರೆ; ಅವರಿಗೆ ಸಮುದ್ರಕ್ಕೆ ಹೋಗಲು ಸಾಧ್ಯವಿಲ್ಲ. ಹೀಗಾಗಿ, ಅವರು ಥೆರೇಸ್ಪುರಂ ಹರಾಜು ಕೇಂದ್ರದಿಂದ ಅಥವಾ ತೂತುಕುಡಿಯ ಮುಖ್ಯ ಮೀನುಗಾರಿಕಾ ಬಂದರಿನಿಂದ ಕೆಲವು ಸಾವಿರ [ರೂಪಾಯಿ] ಮೌಲ್ಯದ ಮೀನನ್ನು ಖರೀದಿಸುತ್ತಾರೆ. ಎಲ್ಲಾ ಖರೀದಿಗಳನ್ನು ಕಾರ್ಡಿನಲ್ಲಿ ಬರೆಯಲಾಗುತ್ತದೆ. ನನ್ನ ಸಹೋದರಿಯರು ಮತ್ತು ನಾನು ಅವರಿಂದ ಮೀನುಗಳನ್ನು ಖರೀದಿಸಿ, ಅವರಿಗೆ ಸ್ವಲ್ಪ ಕಮಿಷನ್ ಪಾವತಿಸಿ, ನಂತರ ಅದನ್ನು ಕರುವಾಡು ಮಾಡುತ್ತೇವೆ." ಫಾತಿಮಾ ತನ್ನ ಸೋದರ ಮಾವನನ್ನು " ಮಾಪಿಳ್ಳೈ" ಎಂದು ಕರೆಯುತ್ತಾ ರೆ , ಇದು ಸಾಮಾನ್ಯವಾಗಿ ಅಳಿಯ ಎಂದು ಅನುವಾದಿಸುತ್ತದೆ; ಮತ್ತು ಅವರು ತನ್ನ ಸಹೋದರಿಯರನ್ನು "ಪೊನ್ನು" ಎಂದು ಉಲ್ಲೇಖಿಸುತ್ತಾರೆ, ಇದು ಸಾಮಾನ್ಯವಾಗಿ ಚಿಕ್ಕ ಹುಡುಗಿಯನ್ನು ಸೂಚಿಸುತ್ತದೆ.

ಇವರೆಲ್ಲರೂ 60 ವರ್ಷಕ್ಕಿಂತ ಮೇಲ್ಪಟ್ಟವರು.

Left: All the different tools owned by Fathima
PHOTO • M. Palani Kumar
Right: Fathima cleaning the fish before drying them
PHOTO • M. Palani Kumar

ಎಡ: ಫಾತಿಮಾ ಒಡೆತನದ ಬಗೆಬಗೆಯ ಉಪಕರಣಗಳು. ಬಲ: ಫಾತಿಮಾ ಮೀನುಗಳನ್ನು ಒಣಗಿಸುವ ಮೊದಲು ಅವುಗಳನ್ನು ಸ್ವಚ್ಛಗೊಳಿಸುತ್ತಾರೆ

Right: Fathima cleaning the fish before drying them
PHOTO • M. Palani Kumar
Right: Dry fish is cut and coated with turmeric to preserve it further
PHOTO • M. Palani Kumar

ಎಡ: ಉಪ್ಪನ್ನು ದೊಡ್ಡ ನೀಲಿ ಪ್ಲಾಸ್ಟಿಕ್ ಡ್ರಮ್ಮುಗಳಲ್ಲಿ ಸಂಗ್ರಹಿಸಲಾಗುತ್ತದೆ. ಬಲ: ಒಣ ಮೀನುಗಳನ್ನು ಮತ್ತಷ್ಟು ಕಾಲ ಸಂರಕ್ಷಿಸಲು ಅವುಗಳನ್ನು ಕತ್ತರಿಸಿ ಅರಿಶಿನ ಲೇಪಿಸಲಾಗುತ್ತದೆ

ಫ್ರೆಡೆರಿಕ್‌ ತಮ್ಮ ಹೆಸರಿನ ತಮಿಳು ಆವೃತ್ತಿಯಿಂದ ಕರೆಯಲ್ಪಡುತ್ತಾರೆ. ಪೆಟ್ರಿ ಎನ್ನುವ ಹೆಸರಿನಿಂದ ಕರೆಸಿಕೊಳ್ಳುವ ಅವರು 37 ವರ್ಷಗಳಿಂದ ಒಂಟಿ ಮಹಿಳೆಯಾಗಿ ದುಡಿಯುತ್ತಿದ್ದಾರೆ. ಅವರ ಪತಿ – ಅವರಿಂದ ಮಾಪಿಳ್ಳೆ ಎಂದು ಕರೆಸಿಕೊಳ್ಳುತ್ತಿದ್ದರು – ಬಹಳ ಹಿಂದೆಯೇ ತೀರಿಕೊಂಡಿದ್ದಾರೆ. “ಮಳೆಗಾಲದಲ್ಲಿ ಮೀನು ಒಣಗಿಸಲು ಸಾಧ್ಯವಿಲ್ಲದ ಕಾರಣ ಆ ಸಮಯದಲ್ಲಿ ನಾವು ಬಹಳ ಕಷ್ಟ ಅನುಭವಿಸುತ್ತೇವೆ. ಹೆಚ್ಚಿನ ಬಡ್ಡಿಗೆ ಸಾಲ ಪಡೆಯುತ್ತೇವವೆ. ತಿಂಗಳಿಗೆ ಪ್ರತಿ ರೂಪಾಯಿಗೆ 5 ಪೈಸೆ ಮತ್ತು 10 ಪೈಸೆ ಬಡ್ಡಿ ದರವಿರುತ್ತದೆ" ಎಂದು ಅವರು ಹೇಳುತ್ತಾರೆ. ಇದು ಒಂದು ವರ್ಷಕ್ಕೆ ಶೇಕಡಾ 60ರಿಂದ 120ರಷ್ಟು ಬಡ್ಡಿಯಾಗಿದೆ.

ತಾತ್ಕಾಲಿಕ ಅಂಗಡಿಯ ಹೊರಗೆ ಕಾಲುವೆಯ ಮೇಲೆ ಕುಳಿತಿದ್ದ ಫ್ರೆಡೆರಿಕ್‌ ತನಗೊಂದು ದೊಡ್ಡ ಐಸ್‌ ಬಾಕ್ಸ್‌ ತೆಗೆದುಕೊಳ್ಳಲಿಕ್ಕಿದೆ ಎನ್ನುತ್ತಾರೆ. “ದೊಡ್ಡದು, ಮೇಲೆ ಗಟ್ಟಿ ಮುಚ್ಚಳ ಇರಬೇಕು. ಅದೊಂದು ಇದ್ದರೆ ಮಳೆಗಾಲದ ಸಮಯದಲ್ಲಿ ಅದರಲ್ಲಿ ಮೀನು ಇರಿಸಿಕೊಂಡು ಮಾರಬಹುದು. ನಾವು ಯಾವಾಗಲೂ ಅವರಿವರ ಬಳಿ ಕೇಳಿ ಪಡೆಯಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೂ ವ್ಯಾಪಾರ ಮಾಡಬೇಕಿರುತ್ತದೆ. ಯಾರ ಹತ್ರ ಹಣ ಇದೆ? ಕೆಲವೊಮ್ಮೆ ಹಾಲಿನ ಪ್ಯಾಕೇಟು ಖರೀದಿಸುವುದು ಕೂಡಾ ಕಷ್ಟವಾಗುತ್ತದೆ.”

ಒಣಗಿದ ಮೀನುಗಳನ್ನು ಮಾರಾಟ ಮಾಡುವುದರಿಂದ ಬರುವ ಹಣವು ಮನೆ, ಆಹಾರ ಮತ್ತು ಆರೋಗ್ಯ ವೆಚ್ಚಗಳಿಗೆ ಹೋಗುತ್ತದೆ. ಅವರು ಕೊನೆಯದನ್ನು ಒತ್ತಿಹೇಳುತ್ತಾರೆ - "ಬಿಪಿ ಮತ್ತು ಶುಗರ್ ಮಾತ್ರೆಗಳು" - ಮತ್ತು "ಲಾಂಚ್‌ಗಳು" (ಮೀನುಗಾರಿಕೆ ದೋಣಿಗಳು) ನಿಷೇಧಿಸಲ್ಪಟ್ಟ ತಿಂಗಳುಗಳಲ್ಲಿ, ಅವರು ಆಹಾರವನ್ನು ಖರೀದಿಸಲು ಹಣವನ್ನು ಸಾಲ ಪಡೆಯುತ್ತಾರೆ ಒತ್ತಿ ಹೇಳಿದರು. "ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಮೀನುಗಳು ಮೊಟ್ಟೆ ಇಡುತ್ತವೆ, ಆದ್ದರಿಂದ ಮೀನುಗಾರಿಕೆಗೆ ಅನುಮತಿ ಇಲ್ಲ. ಆಗ ನಮ್ಮ ಕೆಲಸಕ್ಕೆ ತೊಂದರೆಯಾಗುತ್ತದೆ. ಅಲ್ಲದೆ, ಮಳೆಗಾಲದಲ್ಲಿ - ಅಕ್ಟೋಬರ್ ತಿಂಗಳಿನಿಂದ ಜನವರಿಯವರೆಗೆ - ಉಪ್ಪು ಸಂಗ್ರಹಿಸುವುದು ಮತ್ತು ಮೀನುಗಳನ್ನು ಒಣಗಿಸುವುದು ಕಷ್ಟ. ನಾವು ತಿಂಗಳುಗಟ್ಟಲೆ ಹಣವನ್ನು ಉಳಿಸಲು ಅಥವಾ ಬದಿಗಿಡಲು ಸಾಧ್ಯವಿಲ್ಲ."

ಸುಮಾರು 4,500 ರೂ.ಗಳ ಬೆಲೆಯ ಹೊಸ ಐಸ್ ಬಾಕ್ಸ್, ಒಂದು ಜೋಡಿ ತಕ್ಕಡಿ ಮತ್ತು ಅಲ್ಯೂಮಿನಿಯಂ ಬುಟ್ಟಿಯು ತಮ್ಮ ಜೀವನವನ್ನು ಬದಲಿಸುತ್ತದೆ ಎಂದು ಫ್ರೆಡೆರಿಕ್ ನಂಬಿದ್ದಾರೆ. "ನಾನು ಕೇವಲ ನನಗಾಗಿ ಮಾತ್ರ ಕೇಳುತ್ತಿಲ್ಲ; ಅದು ಎಲ್ಲರಿಗೂ ಸಿಗಬೇಕೆಂದು ಬಯಸುತ್ತೇನೆ. ಅದು ಇದ್ದರೆ, "ನಾವು ಮ್ಯಾನೇಜ್‌ ಮಾಡಬಹುದು" ಎಂದು ಅವರು ಹೇಳುತ್ತಾರೆ.

Left: Frederique with the fish she's drying near her house.
PHOTO • M. Palani Kumar
Right: Fathima with a Paarai meen katuvadu (dried Trevally fish)
PHOTO • M. Palani Kumar

ಎಡ: ಫ್ರೆಡೆರಿಕ್ ತನ್ನ ಮನೆಯ ಬಳಿ ಒಣಗಿಸುತ್ತಿರುವ ಮೀನುಗಳೊಂದಿಗೆ. ಬಲ: ಪರೈ ಮೀನ್ ಕರುವಾಡು (ಒಣ ಬೆಣ್ಣೆ ಕುರ್ಕ ಮೀನು) ಜೊತೆ ಫಾತಿಮಾ

*****

ಕೈಯಿಂದ ಕೊಯ್ಲು ಮಾಡಲ್ಪಡುವ ಮತ್ತು ಸಂಸ್ಕರಿಸಲ್ಪಡುವ ಬೆಳೆಗಳು ಇದರಲ್ಲಿ ತೊಡಗಿಕೊಂಡ ಕೆಲಸದವರ ಶ್ರಮ ಮತ್ತು ಕಡಿಮೆ ವೇತನದ ಅಗೋಚರ / ಗುಪ್ತ ವೆಚ್ಚವನ್ನು ಹೊಂದಿರುತ್ತವೆ. ಈ ಕೆಲಸವನ್ನು ತಮಿಳುನಾಡಿನಲ್ಲಿ ಬಹುತೇಕ ವಯಸ್ಸಾದ ಮಹಿಳೆಯರಿಂದ ಮಾಡಿಸಲಾಗುತ್ತದೆ.

ಮೀನು ಒಣಗಿಸುವಿಕೆಯಲ್ಲೂ ಅದೇ ಪರಿಸ್ಥಿತಿಯಿದೆ.

ಇದನ್ನು ವಿವರಿಸಿದ ಡಾ.ರೇ, ಇತಿಹಾಸದಲ್ಲಿ ವೇತನ ರಹಿತ ಕಾರ್ಮಿಕರನ್ನು ಲಿಂಗದ ಆಧಾರದ ಮೇಲೆ ವರ್ಗೀಕರಿಸುವುದು ಅತಿರೇಕ.  ಆದ್ದರಿಂದಲೇ ನಂಬಿಕೆ, ಚಿಕಿತ್ಸೆ, ಅಡುಗೆ, ಶಿಕ್ಷಣ, ಮತ್ತು ಆರೈಕೆ ಮೊದಲಾದ ಹೆಚ್ಚಿನ ವೃತ್ತಿಪರತೆಯು ಸ್ತ್ರೀದ್ವೇಷದ ತೀವ್ರತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ವಾಮಾಚಾರ, ಹಳೆ ಹೆಂಡತಿಯ ಕಥೆಗಳು, ಮಾಟಗಾತಿಯರು, ಪೊರಕೆ ಇತ್ಯಾದಿಗಳ ಮೂಲಕ ವ್ಯಕ್ತವಾಗುತ್ತವೆ”ಎಂದು ಡಾ. ರಾಯ್ ವಿವರಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅದೊಂದು ಮಹಿಳೆಯರ ವೇತನವಿಲ್ಲದ ದುಡಿಮೆಯ ಸುತ್ತ ಬೆಳೆದ ಸ್ಟೀರಿಯೊಟೈಪ್‌ಗಳು ಮತ್ತು ತರ್ಕಯುತವಾಗಿ ಸಮರ್ಥಿಸುವ ವಾದಗಳ ಒಂದು ರಾಶಿ. "ಇದು ಕಾಕತಾಳೀಯವಲ್ಲ ಆದರೆ ಇದು ವೃತ್ತಿಪರರನ್ನು ತಯಾರು ಮಾಡುವ ಮತ್ತು ಅವರನ್ನು ಕಟ್ಟಿಹಾಕುವವರ ಅಗತ್ಯವಾಗಿದೆ. ಅದಕ್ಕಾಗಿಯೇ ಇಂದಿಗೂ ಬಹುತೇಕ ವೃತ್ತಿಪರ ಬಾಣಸಿಗರು ಪುರುಷತ್ವದ ವ್ಯಂಗ್ಯಚಿತ್ರಗಳಂತೆ ಕಾಣುತ್ತಾರೆ. ಇವರು ಯಾವಾಗಲೂ ಮನೆಯ ಅಡುಗೆಯನ್ನು ಹೊಸದಾಗಿ ಪ್ರಸ್ತುತ ಪಡಿಸುವವರಂತೆ ನಡೆದುಕೊಳ್ಳುತ್ತಾರೆ. ಪುರೋಹಿತರು ಅವರಿಗಿಂತ ಮೊದಲು ಇದನ್ನು ಮಾಡಿದರು. ವೈದ್ಯರು ಕೂಡ ಅದನ್ನು ಮಾಡಿದರು. ಅಧ್ಯಾಪಕರು ಕೂಡ ಅದನ್ನೇ ಮಾಡಿದ್ದಾರೆ.

ತೂತುಕುಡಿ ಪಟ್ಟಣದ ಇನ್ನೊಂದು ಬದಿಯಲ್ಲಿ, ಕುಶಲಕರ್ಮಿ ಉಪ್ಪು ತಯಾರಕರಾದ ಎಸ್.ರಾಣಿ ಅವರ ಅಡುಗೆಮನೆಯಲ್ಲಿ, ಕರುವಾಡು ಕೊ ಳಂ ಬು (ಸಾರು) ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ನಾವು ನೋಡಿದೆವು. ಒಂದು ವರ್ಷದ ಹಿಂದೆ, ಸೆಪ್ಟೆಂಬರ್ 2021ರಲ್ಲಿ, ಉಪ್ಪಿನ ಕೆರೆಗಳಿಂದ ಉಪ್ಪು ಕೊಯ್ಲು ಮಾಡುವುದನ್ನು ನೋಡಿದ್ದೆವು. ಸುಡುವ ಸೂರ್ಯನ ಬೆಳಕಿನಡಿ ನೀರನ್ನು ಕೊಳಗಳಲ್ಲಿ ಬತ್ತಿಸಿ ಉಪ್ಪು ತಯಾರಿಸಲಾಗುತ್ತದೆ.

ರಾಣಿಯವರು ಖರೀದಿಸಿದ ಕರುವಾಡನ್ನು ಸ್ಥಳೀಯವಾಗಿ ತಯಾರಾದ ಉಪ್ಪನ್ನು ಬಳಸಿ ತಯಾರಿಸಲಾಗುತ್ತದೆ. ಸಾರು ಮಾಡಲು ಅವರು ನಿಂಬೆ ಗಾತ್ರದ ಹುಣಸೇ ಹಣ್ಣನ್ನು ನೀರಿನಲ್ಲಿ ನೆನಸಿಡುತ್ತಾರೆ. ನಂತರ ಒಂದರ್ಧ ತೆಂಗಿನಕಾಯಿಯನ್ನು ತುರಿದು ಹಾಕುತ್ತಾರೆ. ನಂತರ ಒಂದು ಈರುಳ್ಳಿ ಸಿಪ್ಪೆ ತೆಗೆದು ಅದೆಲ್ಲವನ್ನೂ ಒಟ್ಟು ಮಾಡಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬುತ್ತಾರೆ. ಅಡುಗೆ ಮಾಡುತ್ತಲೇ ರಾಣಿ ನಮ್ಮೊಡನೆ ಮಾತನಾಡುತ್ತಿದ್ದರು. “ಕರುವಾಡು ಕೊಳಂಬು ಮರುದಿನವೂ ರುಚಿಯಾಗಿರುತ್ತದೆ” ಎನ್ನುವುದು ಅವರ ಅಭಿಪ್ರಾಯ. “ಒಂದಿಷ್ಟು ಗಂಜಿಯೊಡನೆ ನೆಂಚಿಕೊಂಡು ತಿನ್ನಲು ಚೆನ್ನಾಗಿರುತ್ತದೆ.”

Left: A mixed batch of dry fish that will go into the day's dry fish gravy.
PHOTO • M. Palani Kumar
Right: Tamarind is soaked and the pulp is extracted to make a tangy gravy
PHOTO • M. Palani Kumar

ಎಡ: ಬೇರೆ ಬೇರೆ ಜಾತಿಯ ಒಣ ಮೀನುಗಳನ್ನ ಸೇರಿಸಿ ಸಾರು ಮಾಡಲಾಗುತ್ತದೆ. ಬಲ: ಹುಣಸೆಹಣ್ಣನ್ನು ನೆನೆಸಿ, ತಿರುಳನ್ನು ಹೊರತೆಗೆದು ಸಾರನ್ನು ತಯಾರಿಸಲಾಗುತ್ತದೆ

Left: Rani winnows the rice to remove any impurities.
PHOTO • M. Palani Kumar
Right: It is then cooked over a firewood stove while the gravy is made inside the kitchen, over a gas stove
PHOTO • M. Palani Kumar

ಎಡ: ಅಕ್ಕಿ ಕೇರುತ್ತಿರುವ ರಾಣಿ. ಬಲ: ಅಕ್ಕಿಯನ್ನು ಹೊರಗಿನ ಸೌದೆ ಒಲೆಯಲ್ಲಿ ಬೇಯಿಸಿ ಅನ್ನ ಮಾಡಲಾಗುತ್ತದೆ. ಸಾರನ್ನು ಒಳಗಿನ ಗ್ಯಾಸ್‌ ಸ್ಟೌ ಮೇಲೆ ಮಾಡಲಾಗುತ್ತದೆ

ನಂತರ ತರಕಾರಿಗಳನ್ನು ಸ್ವಚ್ಛಗೊಳಿಸಿ ಕತ್ತರಿಸುತ್ತಾರೆ – ಎರಡು ನುಗ್ಗೆಕಾಯಿ, ಬದನೆಕಾಯಿ ಮತ್ತು ಮೂರು ಟೊಮ್ಯಾಟೊಗಳು. ಒಂದಷ್ಟು ಕರಿಬೇವು ಮತ್ತು ಒಂದು ಮಸಾಲೆ ಪ್ಯಾಕೆಟ್‌ ಸೇರಿದರೆ ಸಾರಿಗೆ ಬೇಕಾಗುವ ಸಾಮಾಗ್ರಿಗಳ ಪಟ್ಟಿ ಮುಗಿಯುತ್ತದೆ. ಮೀನಿನ ವಾಸನೆಗೆ ಅಲ್ಲೇ ಇದ್ದ ಬೆಕ್ಕು ಹಸಿವೆಯಿಂದ ಮಿಯಾಂವ್‌ ಎನ್ನುತ್ತಿತ್ತು. ರಾಣಿ ಒಂದು ಚೀಲ ಎತ್ತಿಕೊಂಡು ಅದರಲ್ಲಿದ್ದ ನಗಾರ, ಅಸಲಕುಟ್ಟಿ, ಪಾರೈ ಮತ್ತು ಸಾಲೈ ಕರುವಾಡು ಮೀನುಗಳನ್ನು ತೆಗೆದುಕೊಂಡರು. “ಒಟ್ಟು ಮೀನಿಗೆ 40 ರೂಪಾಯಿ ಕೊಟ್ಟಿದ್ದೆ.” ಎಂದ ಅವರು ಅದರಲ್ಲಿ ಅರ್ಧದಷ್ಟು ಮೀನನ್ನು ಸಾರಿಗೆ ಎತ್ತಿಕೊಂಡರು.

ಅವರು ಇಷ್ಟಪಡುವ ಮತ್ತೊಂದು ಬಗೆಯಿದೆ, ರಾಣಿ ವಿವರಿಸುತ್ತಾರೆ: ಕರುವಾಡು ಅವಿಯಾಲ್ . ಅವರು ಅದನ್ನು ಹುಣಸೆಹಣ್ಣು, ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ಮತ್ತು ಕರುವಾಡು ಸೇರಿಸಿ ತಯಾರಿಸುತ್ತಾರೆ. ಮಸಾಲೆ, ಉಪ್ಪು ಮತ್ತು ಹುಳಿಯ ಅದ್ಭುತ ಸಮತೋಲನದೊಂದಿಗೆ, ಇದು ಇಲ್ಲಿನ ಜನಪ್ರಿಯ ಖಾದ್ಯವಾಗಿದೆ, ಮತ್ತು ಕಾರ್ಮಿಕರು ತಮ್ಮೊಂದಿಗೆ ಉಪ್ಪಿನ ಕೆರೆಗಳಿಗೆ ಕೊಂಡೊಯ್ಯುತ್ತಾರೆ. ರಾಣಿ ಮತ್ತು ಅವರ ಸ್ನೇಹಿತರು ಇನ್ನಷ್ಟು ಬಗೆಯ ಅಡುಗೆಯ ಕುರಿತು ವಿವರಿಸಿದರು. ಜೀರಿಗೆ, ಬೆಳ್ಳುಳ್ಳಿ, ಸಾಸಿವೆ ಮತ್ತು ಇಂಗನ್ನು ಒಟ್ಟಿಗೆ ಅರೆದು ಹುಣಸೆ ಮತ್ತು ಟೊಮೆಟೊದ ತೆಳು ಮಿಶ್ರಣದಲ್ಲಿ ಸ್ವಲ್ಪ ಮೆಣಸು ಮತ್ತು ಒಣಗಿದ ಮೀನು ಸೇರಿಸಿ ಕುದಿಸಲಾಗುತ್ತದೆ. "ಇದನ್ನು ಮಿಲಗುತ ಣ್ಣಿ ಎಂದು ಕರೆಯಲಾಗುತ್ತದೆ" ಎಂದು ರಾಣಿ ಹೇಳುತ್ತಾರೆ. ಇದು ಔಷಧೀಯ ಮಸಾಲೆಗಳಿಂದ ತುಂಬಿರುವುದರಿಂದ ಆಗಷ್ಟೇ ಮಗುವಿಗೆ ಜನ್ಮ ನೀಡಿದ ಮಹಿಳೆಯರಿಗೆ ಒಳ್ಳೆಯದು. ಇದು ಹಾಲುಣಿಸುವಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಕರುವಾಡನ್ನು ಹಾಕದ ಮಿಲಗುತ ಣ್ಣಿ ಆವೃತ್ತಿಯನ್ನು ತಮಿಳುನಾಡಿನ ಆಚೆಗೂ ರಸಂ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ . ಬ್ರಿಟಿಷರು ಇದನ್ನು ಬಹಳ ಹಿಂದೆಯೇ ತಮ್ಮೊಂದಿಗೆ ತೆಗೆದುಕೊಂಡು ಹೋದರು, ಮತ್ತು ಇದು ಅನೇಕ ಖಂಡಾಂತರ ಮೆನುಗಳಲ್ಲಿ 'ಮುಲ್ಲಿಗಟಾವ್ನಿ' ಎನ್ನುವ ಸೂಪ್‌ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ರಾಣಿ ಕರುವಾಡನ್ನು ನೀರಿನ ಪಾತ್ರೆಯಲ್ಲಿ ಹಾಕಿ, ನಂತರ ಮೀನುಗಳನ್ನು ಸ್ವಚ್ಛಗೊಳಿಸಿ ತಲೆ ಮತ್ತು ಬಾಲ ಮತ್ತು ರೆಕ್ಕೆಗಳನ್ನು ತೆಗೆದುಹಾಕುತ್ತಾರೆ. "ಇಲ್ಲಿ ಎಲ್ಲರೂ ಕರುವಾಡು ತಿನ್ನುತ್ತಾರೆ " ಎಂದು ಸಾಮಾಜಿಕ ಕಾರ್ಯಕರ್ತೆ ಉಮಾ ಮಹೇಶ್ವರಿ ಹೇಳುತ್ತಾರೆ. "ಮಕ್ಕಳು ಅದನ್ನು ಹಾಗೆಯೇ ತಿನ್ನುತ್ತಾರೆ. ಮತ್ತು ಕೆಲವರು, ನನ್ನ ಗಂಡನಂತೆ, ಸುಟ್ಟ ರೂಪದಲ್ಲಿ ಇಷ್ಟಪಡುತ್ತಾರೆ." ಕರುವಾಡನ್ನು ಬಿಸಿ ಬೂದಿಯಲ್ಲಿ ಹೂತು ಸುಡಲಾಗುತ್ತದೆ. ಅದನ್ನು ಬಿಸಿ ಬಿಸಿಯಾಗಿ ತಿನ್ನಲಾಗುತ್ತದೆ. “ಇದು ಬಹಳ ಒಳ್ಳೆಯ ಪರಿಮಳ ಹೊಂದಿರುತ್ತದೆ. ಸುಟ್ಟ ಕರುವಾಡು ಒಂದು ರುಚಿಕರ ತಿನಿಸು” ಎಂದು ಉಮಾ ಹೇಳುತ್ತಾರೆ.

ಕೊ ಳಂ ಬು ಕುದಿಯುತ್ತಿರುವಾಗ, ರಾಣಿ ತನ್ನ ಮನೆಯ ಹೊರಗೆ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ. ನಾವು ಮಾತನಾಡುತ್ತೇವೆ. ಸಿನೆಮಾದಲ್ಲಿ ಕರುವಾಡು ಕುರಿತ ಜೋಕುಗಳ ಬಗ್ಗೆ ಕೇಳಿದೆ. ಅವರು ಮುಗುಳ್ನಕ್ಕರು. "ಕೆಲವು ಜಾತಿಗಳು ಮಾಂಸವನ್ನು ತಿನ್ನುವುದಿಲ್ಲ. ಅವರು ಆ ರೀತಿಯ ಚಲನಚಿತ್ರಗಳನ್ನು ಮಾಡುತ್ತಾರೆ" ಎಂದು ಅವರು ಹೇಳುತ್ತಾರೆ. "ಕೆಲವರಿಗೆ ಇದರ ವಾಸನೆ ಅಹಿತಕರ . ನಮಗೆ, ಇದು ಮ್ [ಉತ್ತಮ ಸುವಾಸನೆ]." ಮತ್ತು ಅದರೊಂದಿಗೆ, ಉಪ್ಪಿನ ಕೆರೆಗಳ ತೂತುಕುಡಿಯ ರಾಣಿಯ ಕರುವಾಡು ಕುರಿತ ಚರ್ಚೆ ಮುಗಿಯಿತು ...


ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಧನಸಹಾಯ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯ ನೀಡಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Aparna Karthikeyan

Aparna Karthikeyan is an independent journalist, author and Senior Fellow, PARI. Her non-fiction book 'Nine Rupees an Hour' documents the disappearing livelihoods of Tamil Nadu. She has written five books for children. Aparna lives in Chennai with her family and dogs.

Other stories by Aparna Karthikeyan
Photographs : M. Palani Kumar

M. Palani Kumar is Staff Photographer at People's Archive of Rural India. He is interested in documenting the lives of working-class women and marginalised people. Palani has received the Amplify grant in 2021, and Samyak Drishti and Photo South Asia Grant in 2020. He received the first Dayanita Singh-PARI Documentary Photography Award in 2022. Palani was also the cinematographer of ‘Kakoos' (Toilet), a Tamil-language documentary exposing the practice of manual scavenging in Tamil Nadu.

Other stories by M. Palani Kumar

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Photo Editor : Binaifer Bharucha

Binaifer Bharucha is a freelance photographer based in Mumbai, and Photo Editor at the People's Archive of Rural India.

Other stories by Binaifer Bharucha
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru