ಪನ್ನಾ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಮಳೆಯಾಗುತ್ತಿದ್ದು, ಕೈತಾಬಾರೊ ಅಣೆಕಟ್ಟು ಪೂರ್ತಿಯಾಗಿ  ತುಂಬಿದೆ. ಇದು ಹತ್ತಿರದ ಪನ್ನಾ ಹುಲಿ ಮೀಸಲು (ಪಿಟಿಆರ್) ಅರಣ್ಯದಲ್ಲಿರುವ ಬೆಟ್ಟಗಳಿಂದ ಹರಿಯುವ ನೀರು ಮಾರ್ಗ.

ಸುರೇನ್ ಆದಿವಾಸಿ ಸುತ್ತಿಗೆಯೊಂದಿಗೆ ಅಣೆಕಟ್ಟಿಗೆ ಆಗಮಿಸುತ್ತಾರೆ. ಅವರು ವೇಗವಾಗಿ ಹರಿಯುವ ನೀರನ್ನು ಎಚ್ಚರಿಕೆಯಿಂದ ನೋಡುತ್ತಾರೆ, ಯಾವುದೇ ಹೊಸ ಕಲ್ಲುಗಳು ಅಥವಾ ಅವಶೇಷಗಳು ಹರಿವನ್ನು ತಡೆಯುತ್ತಿದೆಯೇ ಎಂದು ಪರಿಶೀಲಿಸುತ್ತಾರೆ. ನೀರು ಸರಾಗವಾಗಿ ಹರಿಯುವಂತೆ ಮಾಡಲು ಅವರು ಸುತ್ತಿಗೆ ಬಳಸಿ ಒಂದೆರಡು ಕಲ್ಲನ್ನು ಒಡೆಯುತ್ತಾರೆ.

"ನೀರು ಸರಿಯಾಗಿ ಹರಿಯುತ್ತಿದೆಯೇ ಎಂದು ನೋಡಲು ಬಂದಿದ್ದೇನೆ" ಎಂದು ಅವರು ಪರಿಗೆ ತಿಳಿಸಿದರು.  ನಂತರ "ಹೌದು, ಸರಿಯಾಗಿ ಹರಿಯುತ್ತಿದೆ" ಎನ್ನುತ್ತಾ ಬಿಲ್ಪುರ ಗ್ರಾಮದ ಈ ಸಣ್ಣ ರೈತ ತಲೆಯಾಡಿಸಿದರು, ಕೆಲವೇ ಮೀಟರ್ ಕೆಳಭಾಗದಲ್ಲಿರುವ ತನ್ನ ಭತ್ತದ ಬೆಳೆ ಒಣಗುವುದಿಲ್ಲ ಎನ್ನುವ ಸಮಾಧಾನ ಅವರಲ್ಲಿ ಕಾಣುತ್ತಿತ್ತು.

ಅವನ ಕಣ್ಣುಗಳು ಸಣ್ಣ ಅಣೆಕಟ್ಟಿನ ಮೇಲೆ ಹರಿದಂತೆ, "ಇದೊಂದು ದೊಡ್ಡ ಭಾಗ್ಯ. ಭತ್ತ ಬೆಳೆಯಬಹುದು, ಗೋಧಿಯನ್ನೂ ಬೆಳೆಯಬಹುದು. ಇದಕ್ಕೂ ಮೊದಲು ನಾನು ಇಲ್ಲಿರುವ ಒಂದು ಎಕರೆ ಭೂಮಿಗೆ ನೀರಾವರಿ ವ್ಯವಸ್ಥೆ ಮಾಡಲು ಮತ್ತು ಕೃಷಿ ಮಾಡಲು ಸಾಧ್ಯವಾಗಿರಲಿಲ್ಲ."

ಇದು ಬಿಲ್ಪುರದ ಜನರು ಅಣೆಕಟ್ಟು ಕಟ್ಟುವ ಮೂಲಕ ತಮಗೆ ತಾವೇ ಒಲಿಸಿಕೊಂಡ ಭಾಗ್ಯ.

ಸರಿಸುಮಾರು ಒಂದು ಸಾವಿರ ಜನರಿರುವ ಬಿಲ್ಪುರದಲ್ಲಿ ಹೆಚ್ಚು ಗೊಂಡ್ ಆದಿವಾಸಿ (ಪರಿಶಿಷ್ಟ ಪಂಗಡ) ರೈತರಿದ್ದಾರೆ, ಪ್ರತಿಯೊಬ್ಬರೂ ಕೆಲವು ಜಾನುವಾರುಗಳನ್ನು ಹೊಂದಿದ್ದಾರೆ. 2011ರ ಜನಗಣತಿಯಲ್ಲಿ ಗ್ರಾಮದಲ್ಲಿ ಕೇವಲ ಕೈಪಂಪ್ ಮತ್ತು ಬಾವಿ ಇದೆ ಎಂದು ದಾಖಲಿಸಲಾಗಿದೆ. ರಾಜ್ಯವು ಜಿಲ್ಲೆಯ ಸುತ್ತಮುತ್ತ ಕಲ್ಲುಗಳಿಂದ ಕೂಡಿದ ಕೊಳಗಳನ್ನು ನಿರ್ಮಿಸಿದೆ, ಆದರೆ ಸ್ಥಳೀಯರು ಇಲ್ಲಿ ಯಾವುದೇ ಜಲಾನಯನ ಪ್ರದೇಶವಿಲ್ಲ ಮತ್ತು "ಪಾನಿ ರುಕ್ತಾ ನಹೀ ಹೈ [ನೀರು ಉಳಿಯುವುದಿಲ್ಲ]" ಎಂದು ಹೇಳುತ್ತಾರೆ.

PHOTO • Priti David
PHOTO • Priti David

ಎಡಕ್ಕೆ : ನೀರು ಹೊಲಗಳ ಕಡೆಗೆ ಹರಿಯುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸುರೇನ್ ಆದಿವಾಸಿ ಸುತ್ತಿಗೆಯೊಂದಿಗೆ ಅಣೆಕಟ್ಟಿಗೆ ಆಗಮಿಸುತ್ತಾ ರೆ . ಬಲ : ಮಹಾರಾಜ್ ಸಿಂಗ್ ಆದಿವಾಸಿ ಹೇಳುತ್ತಾರೆ , ' ಹಿಂದೆ ಇಲ್ಲಿ ಕೃಷಿ ಮಾಡುತ್ತಿರ ಲಿಲ್ಲ . ನಿರ್ಮಾಣ ಸ್ಥಳಗಳಲ್ಲಿ ದಿನಗೂಲಿ ಕೆಲಸ ಹುಡುಕಿಕೊಂಡು ದೆಹಲಿ ಮತ್ತು ಮುಂಬೈಗೆ ವಲಸೆ ಹೋಗುತ್ತಿದ್ದೆ

ಊರಿನ ಜನರು ಅಣೆಕಟ್ಟು ಮತ್ತು ಗ್ರಾಮದ ನಡುವೆ ಸುಮಾರು 80 ಎಕರೆ ಭೂಮಿಯನ್ನು ಹೊಂದಿದ್ದಾರೆ.  "ಹಿಂದೆ ಒಂದು ಸಣ್ಣ ನಾಲಾ [ತೊರೆ] ಇತ್ತು ಮತ್ತು ಅದನ್ನು ಕೆಲವು ಎಕರೆಗಳೆ ಭೂಮಿಗೆ ಬಳಸಲಾಗುತ್ತಿತ್ತು" ಎಂದು ಮಹಾರಾಜ್ ಸಿಂಗ್ ಹೇಳುತ್ತಾರೆ. "ಅಣೆಕಟ್ಟು ಬಂದ ನಂತರವೇ ನಾವೆಲ್ಲರೂ ನಮ್ಮ ಹೊಲಗಳಲ್ಲಿ ವ್ಯವಸಾಯ ಮಾಡಲು ಸಾಧ್ಯವಾಯಿತು."

ಮಹಾರಾಜ್ ತಮ್ಮ ಐದು ಎಕರೆ ಭೂಮಿಯಲ್ಲಿ ಗೋಧಿ, ಕಡಲೆಕಾಳು, ಅಕ್ಕಿ ಮತ್ತು ಮಕ್ಕಾ [ಜೋಳ] ಗಳನ್ನು ಸ್ವಯಂ ಬಳಕೆಗಾಗಿ ಬೆಳೆದಿದ್ದು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಣೆಕಟ್ಟಿನ ಸ್ಥಳಕ್ಕೆ ಬಂದಿದ್ದರು. ಉತ್ತಮ ಇಳುವರಿ ಬಂದ ವರ್ಷದಲ್ಲಿ ಅವರು ಒಂದಷ್ಟು ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

"ಈ ನೀರು ನನ್ನ ಹೊಲಕ್ಕೆ ಹೋಗುತ್ತದೆ" ಎಂದು ಅವರು ಅದರ ಕಡೆಗೆ ತೋರಿಸುತ್ತಾ ಹೇಳುತ್ತಾರೆ. "ಈ ಮೊದಲು ಇಲ್ಲಿ ಕೃಷಿಯೇ ಇರಲಿಲ್ಲ. ನಿರ್ಮಾಣ ಸ್ಥಳಗಳಲ್ಲಿ ದಿನಗೂಲಿ ಕೆಲಸ ಹುಡುಕಿಕೊಂಡು ದೆಹಲಿ ಮತ್ತು ಮುಂಬೈಗೆ ವಲಸೆ ಹೋಗುತ್ತಿದ್ದೆ.” ಅವರು ಪ್ಲಾಸ್ಟಿಕ್ ಮತ್ತು ನಂತರ ದಾರದ ಕಂಪನಿಯಲ್ಲಿಯೂ ಕೆಲಸ ಮಾಡಿದ್ದರು.

2016ರಲ್ಲಿ ಅಣೆಕಟ್ಟನ್ನು ಮರುನಿರ್ಮಾಣ ಮಾಡಲಾಯಿತು. ಅಂದಿನಿಂದ ಅವರು ವಲಸೆ ನಿಲ್ಲಿಸಿದ್ದಾರೆ. ಕೃಷಿಯಿಂದ ಬರುವ ಸಂಪಾದನೆಯು ಅವರ ಮತ್ತು ಅವರ ಕುಟುಂಬದ ಪೋಷಣೆಗೆ ಸಾಕಾಗುತ್ತಿದೆ. ಅಣೆಕಟ್ಟಿನ ನೀರು ಈಗ ವರ್ಷಪೂರ್ತಿ ಇರುತ್ತದೆ ಮತ್ತು ಇದನ್ನು ಜಾನುವಾರುಗಳಿಗೆ ಸಹ ಬಳಸಲಾಗುತ್ತದೆ.

ಅಣೆಕಟ್ಟನ್ನು ಪುನರ್ನಿರ್ಮಿಸುವ ಪ್ರಯತ್ನವು ಸರ್ಕಾರೇತರ ಸಂಸ್ಥೆಯಾದ ಪೀಪಲ್ಸ್ ಸೈನ್ಸ್ ಇನ್ಸ್ಟಿಟ್ಯೂಟ್ (ಪಿಎಸ್ಐ) ನಡೆಸಿದ ಸಾರ್ವಜನಿಕ ಸಭೆಗಳ ಫಲಿತಾಂಶವಾಗಿದೆ. "ಸ್ಥಳೀಯರೊಂದಿಗೆ ಮಾತನಾಡಿದಾಗ ಅವರೆಲ್ಲರಿಗೂ ಭೂಮಿಯಿರುವುದು ನಮ್ಮ ಗಮನಕ್ಕೆ ಬಂತು. ಆದರೆ ನಿಯಮಿತ ನೀರಾವರಿ ಇಲ್ಲದ ಕಾರಣ, ಅವರಿಗೆಅದನ್ನು ಬಳಸಲು ಸಾಧ್ಯವಾಗುತ್ತಿರಲಿಲ್ಲ" ಎಂದು ಪಿಎಸ್ಐನ ಕ್ಲಸ್ಟರ್ ಸಂಯೋಜಕ ಶರದ್ ಯಾದವ್ ಹೇಳುತ್ತಾರೆ.

PHOTO • Priti David
PHOTO • Priti David

ಎಡಕ್ಕೆ : ಮಹಾರಾಜ್ ಸಿಂಗ್ ಆದಿವಾಸಿ ಹೇಳುತ್ತಾರೆ , ' ಹಿಂದೆ ಒಂದು ಸಣ್ಣ ನಾಲಾ [ ತೊರೆ ] ಇತ್ತು ಮತ್ತು ಅದನ್ನು ಕೆಲವು ಎಕರೆ ಭೂಮಿಗಷ್ಟೇ ಬಳಸಲಾಗುತ್ತಿತ್ತು . ಅಣೆಕಟ್ಟು ಬಂದ ನಂತರವೇ ನಾವೆಲ್ಲರೂ ನಮ್ಮ ಹೊಲಗಳಲ್ಲಿ ಬೇಸಾಯ ಮಾಡಲು ಸಾಧ್ಯವಾಯಿತು .' ಬಲ : ಮಹಾರಾಜ್ ನೀರಿನ ಹರಿವು ಮತ್ತು ಅದು ನೀ ರೂಡಿಸುವ ಹೊಲಗಳನ್ನು ತೋರಿಸುತ್ತಾರೆ

PHOTO • Priti David
PHOTO • Priti David

ಎಡ: ಶರದ್ ಯಾದವ್ ಅವರು ಸರ್ಕಾರವು ಹತ್ತಿರದಲ್ಲಿ ಈ ರೀತಿಯ ಇತರ ಅಣೆಕಟ್ಟುಗಳನ್ನು ನಿರ್ಮಿಸಲು ಪ್ರಯತ್ನಿಸಿದೆ, ಆದರೆ ನೀರು ಉಳಿಯುವುದಿಲ್ಲ ಎಂದು ಹೇಳುತ್ತಾರೆ. ಬಲ: ಸ್ಥಳೀಯರು ಆಗಾಗ್ಗೆ ಇಲ್ಲಿಗೆ ಬಂದು ಅಣೆಕಟ್ಟೆ ಪರಿಶೀಲಿಸುತ್ತಾರೆ

ಕೈತಾ (ಬೇಲ) ಮರಗಳ ತೋಪಿನ ಬಳಿ ಕೊಳದ ಮೇಲೆ ಸರ್ಕಾರ ಅಣೆಕಟ್ಟನ್ನು ನಿರ್ಮಿಸಿತ್ತು. ಇದನ್ನು ಒಮ್ಮೆಯಷ್ಟೇ ಅಲ್ಲ, 10 ವರ್ಷಗಳಲ್ಲಿ ಮೂರು ಬಾರಿ ನಿರ್ಮಿಸಲಾಗಿದೆ. ಕಳೆದ ಬಾರಿ ಮಳೆಗಾಲದಲ್ಲಿ ಅದು ಮತ್ತೆ ಕುಸಿದಾಗ, ಸರ್ಕಾರಿ ಅಧಿಕಾರಿಗಳು ಇನ್ನು ಸಾಕು ಎಂದು ನಿರ್ಧರಿಸಿ ಅಣೆಕಟ್ಟಿನ ಗಾತ್ರವನ್ನು ಕಡಿಮೆ ಮಾಡಿದರು.

ಸಣ್ಣ ಅಣೆಕಟ್ಟಿನ ನೀರು ಸಾಕಾಗಲಿಲ್ಲ: "ನೀರು ಹೊಲಗಳನ್ನು ತಲುಪಲಿಲ್ಲ, ಮತ್ತು ಬೇಸಿಗೆಗೆ ಮೊದಲೇ ಅದು ಒಣಗಿಹೋಯಿತು, ಅದರಿಂದಾಗಿ ನಮ್ಮ ನೀರಾವರಿ ಅಗತ್ಯಗಳಿಗೆ ಯಾವುದೇ ಪ್ರಯೋಜನವಾಗಲಿಲ್ಲ" ಎಂದು ಮಹಾರಾಜ್ ಹೇಳುತ್ತಾರೆ. "ಕೇವಲ 15 ಎಕರೆಯಲ್ಲಿ ಮಾತ್ರ ಬೆಳೆ ಬೆಳೆಯಲು ಸಾಧ್ಯವಾಯಿತು ಮತ್ತು ಅದೂ ಕೇವಲ ಒಂದು ಬೆಳೆಯನ್ನು ಮಾತ್ರ ಬೆಳೆಯಬಹುದು."

2016ರಲ್ಲಿ, ಊರಿನ ಜನರು ತಾವೇ ಏನಾದರೂ ಮಾಡಲು ನಿರ್ಧರಿಸಿದರು ಮತ್ತು ಅದನ್ನು ಪುನರ್ನಿರ್ಮಿಸಲು ತಮ್ಮ ಶ್ರಮದಾನ ಮಾಡಿದರು. "ನಾವು ಮಣ್ಣನ್ನು ಹೊತ್ತುಕೊಂಡು, ಅಗೆದು, ಕಲ್ಲುಗಳನ್ನು ಒಡೆದು ಹಾಕಿ ಒಂದು ತಿಂಗಳಲ್ಲಿ ನಾವು ಅಣೆಕಟ್ಟನ್ನು ಪೂರ್ಣಗೊಳಿಸಿದೆವು. ನಮ್ಮ ಹಳ್ಳಿಯ ಜನರೇ ಎಲ್ಲಾ ಕೆಲಸ ಮಾಡಿದ್ದು, ಹೆಚ್ಚಾಗಿ ಆದಿವಾಸಿಗಳು ಮತ್ತು ಕೆಲವರು ಹಿಂದುಳಿದ ವರ್ಗದವರು" ಎಂದು ಮಹಾರಾಜ್ ಹೇಳುತ್ತಾರೆ.

ಹೊಸ ಅಣೆಕಟ್ಟು ಗಾತ್ರದಲ್ಲಿ ದೊಡ್ಡದಿದೆ ಮತ್ತು ನೀರು ಸಮಾನವಾಗಿ ಹರಿಯಲು ಮತ್ತು ಒಂದು ವೇಳೆ ಮತ್ತೆ ಒಡೆದರೆ ಅದನ್ನು ತಡೆಯಲು ಒಂದಲ್ಲ, ಎರಡು ಅಣೆಕಟ್ಟುಗಳನ್ನು ಹೊಂದಿದೆ. ಅಣೆಕಟ್ಟಿಗೆ ಯಾವುದೇ ಅಪಾಯವಿಲ್ಲ ಎಂದು ಭರವಸೆ ಮತ್ತು ನಿರಾಳತೆಯೊಂದಿಗೆ, ಮಹಾರಾಜ್ ಮತ್ತು ಸುರೇನ್ ಸಣ್ಣ ಜಡಿ ಮಳೆ ಆರಂಭಗೊಳ್ಳುವ ಮೊದಲು ತಮ್ಮ ಮನೆಗಳತ್ತ ನಡೆಯತೊಡಗಿದರು.

ಅನುವಾದ: ಶಂಕರ. ಎನ್. ಕೆಂಚನೂರು

Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Editor : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru